

ಹರಿಹರ: ಮನುಷ್ಯನಿಗೆ ತುರ್ತು ಚಿಕಿತ್ಸೆ ನೀಡುವ 108 ಆಂಬುಲೆನ್ಸ್ ಮಾದರಿಯಲ್ಲಿ ಪಶು, ಪ್ರಾಣಿಗಳಿಗೂ ತುರ್ತು ಚಿಕಿತ್ಸೆ ನೀಡುವ 1962 ಆಂಬುಲೆನ್ಸ್ ಸೇವೆ ಹರಿಹರ ತಾಲೂಕಿನಲ್ಲಿ ಆರಂಭವಾಗಿದೆ.
ನಗರದ ತಾಲೂಕು ಕಚೇರಿ ಎದುರಿನ ಪಶು ಆಸ್ಪತ್ರೆ ಆವರಣದಲ್ಲಿ ಆಂಬ್ಯುಲೆನ್ಸ್ ಇರುತ್ತದೆ. ತುರ್ತು ಸೇವೆ ಅಗತ್ಯ ಇರುವವರು 1962ಕ್ಕೆ ಕರೆ ಮಾಡಿದರೆ ಕೆಲ ಸಮಯದಲ್ಲಿ ವೈದ್ಯರು, ಔಷಧಿಯೊಂದಿಗೆ ಆಂಬುಲೆನ್ಸ್ ಹಾಜರಾಗಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೊಂಡಿದ್ದು, ಆಂಬುಲೆನ್ಸ್‌ನಲ್ಲಿ ಓರ್ವ ಪಶು ವೈದ್ಯ, ಓರ್ವ ಪಶು ವೈದ್ಯ ಸಹಾಯಕ, ಓರ್ವ ಚಾಲಕ ಕಂ ಅಟೆಂಡರ್ ಇದ್ದು, ಜತೆಗೆ ಪ್ರಾಣಿಗಳ ತುರ್ತು ಚಿಕಿತ್ಸೆಗೆ ಅಗತ್ಯ ಔಷಧಿ, ಪರಿಕರಗಳು ಇವೆ.
ಪ್ರಾಣಿಗಳ ಆರೋಗ್ಯ ಸುಧಾರಣೆ, ಚಿಕಿತ್ಸೆ, ತಜ್ಞರೊಂದಿಗೆ ಆಡಿಯೋ ವಿಜ್ಯುಯಲ್ ಸೇವೆ, ರೋಗಗಳ ನಿಯಂತ್ರಣ, ಲಸಿಕೆ ಅಭಿಯಾನದ ಯಶಸ್ಸಿನ ಮೂಲಕ ರೈತರ ಆದಾಯವನ್ನು ದ್ವಿಗುಣ ಮಾಡಲು ಸರ್ಕಾರ ಈ ಆಂಬುಲೆನ್ಸ್ ಯೋಜನೆ ಜಾರಿಗೊಳಿಸಿದೆ ಎಂದು ಆಂಬುಲೆನ್ಸ್‌ನ ಪಶು ವೈದ್ಯ ಡಾ. ಯೋಗೀಶ್ ತಿಳಿಸಿದ್ದಾರೆ.
ಹರಿಹರ ತಾಲೂಕಿನಲ್ಲಿ 42 ಸಾವಿರ ದನ ಮತ್ತು ಎಮ್ಮೆ, 43 ಸಾವಿರ ಕುರಿ ಮತ್ತು ಆಡು, 300 ಹಂದಿಗಳ ಸಂಖ್ಯೆ ಇದೆ. ಆಂಬುಲೆನ್ಸ್ ಸೇವೆ ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ಲಭ್ಯವಿದೆ. ಈವರೆಗೆ ತಾಲೂಕಿನ ವಿವಿಧೆಡೆಯಿಂದ 16 ಕರೆಗಳು ಬಂದಿದ್ದು, ಆಂಬುಲೆನ್ಸ್‌ನೊಂದಿಗೆ ಸ್ಥಳಕ್ಕೆ ತೆರಳಿ ವೈದ್ಯರು ಸೇವೆ ನೀಡಿದ್ದಾರೆ ಎಂದು ಹರಿಹರದ ಪಶು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಟಿ.ಕೆ. ಸಿದ್ದೇಶ್ ತಿಳಿಸಿದರು.