

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ದೇಶದಲ್ಲಿಯೇ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ನಿರ್ಮಾಣಗೊಂಡ ಮೊದಲ ಕ್ಯಾಲಿಬ್ರೇಷನ್ (ಮಾಪನಾಂಕ ನಿರ್ಣಯ ಕೇಂದ್ರ) ಘಟಕ ತಾಲೂಕಿನಲ್ಲಿ ಆರಂಭವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಇಂಧನವನ್ನು ಆಯಿಲ್ ಕಂಪನಿಗಳ ಟರ್ಮಿನಲ್ನಿಂದ ಕೊಂಡೊಯ್ಯುವ ಮುನ್ನ ಟ್ಯಾಂಕರ್‌ಗಳ ಪರಿಮಾಣದ ನಿಖರತೆಯ ಬಗ್ಗೆ ಪರಿಶೀಲಿಸುವ ಜವಾಬ್ದಾರಿಯನ್ನು ಈ ಘಟಕ ನಿರ್ವಹಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ತಾಕಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಹಂದೇನಹಳ್ಳಿ ಗ್ರಾಮದಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ನಿರ್ಮಿಸಿರುವ ಟ್ಯಾಂಕ್ ಲಾರಿ ಕ್ಯಾಲಿಬ್ರೇಷನ್ ಟವರ್ ವರ್ಕಿಂಗ್ ಸ್ಟಾಂಡರ್ಡ್ ಹಾಗೂ ಸೆಕಂಡರಿ ಸ್ಟಾಂಡರ್ಡ್ ಪ್ರಯೋಗಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಕಾನೂನು ಮಾಪನ ಶಾಸ್ತ್ರ ಇಲಾಖೆಯ ದೈನಂದಿನ ವ್ಯವಹಾರದಲ್ಲಿನ ತೂಕ ಮತ್ತು ಅಳತೆಯ ನಿಖರತೆಯನ್ನು ಪರಿಶೀಲಿಸುವ ಮೂಲಕ ಗ್ರಾಹಕರ ಹಿತರಕ್ಷಣೆ ಕಾಪಾಡುವ ಮಾಡುವ ನಿಟ್ಟಿನಲ್ಲಿ ಕೇಂದ್ರ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ವಂಚನೆಗೆ ಬ್ರೇಕ್:
ದೇವನಗೊಂದಿಯಲ್ಲಿರುವ ಆಯಿಲ್ ಕಂಪನಿಯ ಟರ್ಮಿನಲ್ನಿಂದ ಪ್ರತಿನಿತ್ಯ 1200 ಟ್ಯಾಂಕರ್‌ಗಳ ಮೂಲಕ ಬೆಂಗಳೂರು ಹಾಗೂ ರಾಜ್ಯದ ಇತರ ಜಿಲ್ಲೆಗಳಿಗೆ ಇಂಧನ ಪೂರೈಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯಿಲ್ ಕಂಪನಿ ಟರ್ಮಿನಲ್ನಿಂದ ಪೂರೈಕೆಯಾಗುವ ಇಂಧನದ ಗುಣಮಟ್ಟ ಹಾಗೂ ನಿಖರತೆ ಕಾಪಾಡುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಟ್ಯಾಂಕರ್‌ಗಳಲ್ಲಿನ ಇಂಧನ ಅಳತೆಯಲ್ಲಿ ವಂಚನೆ ಕಂಡುಬಂದರೆ ಇಲಾಖೆಯಿಂದ ತಪಾಸಣೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕಾನೂನು ಮಾಪನ ಇಲಾಖೆ ಕಾರ್ಯ ನಿರ್ವಹಿಸಲಿದೆ ಎಂದು ಶಾಸಕ ಶರತ್‌ಬಚ್ಚೇಗೌಡ ತಿಳಿಸಿದರು.