ಚನ್ನಗಿರಿ ಅರಣ್ಯ ವ್ಯಾಪ್ತಿ ಗ್ರಾಮಗಳಲ್ಲಿ ಚಿರತೆ ಹಾವಳಿ

22 chn
Published on

ಚನ್ನಗಿರಿ: ತಾಲೂಕಿನ ಚನ್ನಗಿರಿ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯ ಗ್ರಾಮಗಳು ಹಾಗೂ ಅಡಕೆ ತೋಟಗಳಲ್ಲಿ ಚಿರತೆಗಳು ಕಾಣಿಸಿಕೊಂಡು ಜನರನ್ನು ಭಯಭೀತಗೊಳಿಸಿದೆ.

ಹಗಲು ಮತ್ತು ರಾತ್ರಿ ಸಮಯದಲ್ಲಿ ಚಿರತೆಗಳು ಓಡಾಡುತ್ತಿದ್ದು, ಜನರು ಮನೆಯಿಂದ ಹೊರಬರಲು ಹಾಗೂ ತೋಟದ ಕಡೆಗೆ ಹೋಗಲು ಹೆದರಿದ್ದಾರೆ.

ತಾಲೂಕಿನ ದೇವರಹಹಳ್ಳಿ, ವಿ. ರಾಮೇನಹಳ್ಳಿ, ಹೊನ್ನಾನಾಯಕನಹಳ್ಳಿ, ಹೊದಿಗೆರೆ, ವಡ್ನಾಳ್, ಗೊಪ್ಪೇನಹಳ್ಳಿ, ಗೊಲ್ಲರಹಳ್ಳಿ, ಕಂಚಿಗನಾಳು, ಮಲಹಾಳು, ಕಲ್ಕೆರೆ, ತಾವರೆಕೆರೆ ಗ್ರಾಮಗಳಲ್ಲಿ ಚಿರತೆ ಕಾಣಿಸುತ್ತಿವೆ. ಗ್ರಾಮದಲ್ಲಿನ ನಾಯಿಗಳನ್ನು ಹಿಡಿದುಕೊಂಡು ಹೋಗುತ್ತಿವೆ.

ವಿದ್ಯಾರ್ಥಿಗಳು ಬೆಳಗ್ಗೆ ಶಾಲಾ ಕಾಲೇಜುಗಳಿಗೆ ಹೋಗುವಾಗ ಮತ್ತು ಸಂಜೆ ಮನೆಗೆ ವಾಪಸ್ ಬರುವ ಸಮಯದಲ್ಲಿ ಪಾಲಕರು ನಿಲ್ದಾಣದಲ್ಲಿ ಕಾದಿದ್ದು ಕರೆದುಕೊಂಡು ಹೋಗುತ್ತಾರೆ. ಶಾಲಾ ವಾಹನಗಳು ಮನೆಯ ಬಳಿಗೆ ಮಕ್ಕಳನ್ನು ಕರೆತಂದು ಬಿಟ್ಟು ಹೋಗುವಂತಾಗಿದೆ.

ಬಿಸಿಲಿನ ಬೇಗೆ ಅಧಿಕವಾಗಿ ಕಾಡುಪ್ರಾಣಿಗಳಿಗೆ ಆಹಾರ ಮತ್ತು ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವ ಕಾರಣ ನಾಡಿನ ಕಡೆಗೆ ಬರುತ್ತಿವೆ. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಬೋನಿನ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದಾರೆ. ಅರಣ್ಯ ಇಲಾಖೆಯವರು ಗ್ರಾಮಗಳಿಗೆ ಭೇಟಿ ನೀಡಿ ಚಿರತೆ ಹೆಜ್ಜೆ ಗುರುತು ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ಗ್ರಾಮದವರಿಗೆ ರಾತ್ರಿ ಸಮಯದಲ್ಲಿ ಚಿರತೆ ಕಂಡುಬಂದಲ್ಲಿ ಪಟಾಕಿ ಸಿಡಿಸಲು ಸಲಹೆ ನೀಡಿದ್ದಾರೆ. ವಿವಿಧೆಡೆ ಬೋನು ಇಡಲಾಗಿದೆ.

ಆಹಾರ ಹುಡುಕಿಕೊಂಡು ಕಾಡು ಪ್ರಾಣಿಗಳು ನಾಡಿಗೆ ಬರುತ್ತವೆ. ಮನುಷ್ಯರನ್ನು ಕಂಡರೆ ಭಯಪಡುತ್ತವೆ. ಜನರು ಎಚ್ಚರದಿಂದ ಇರಬೇಕು. ಇಲಾಖೆಯಿಂದ ಚಿರತೆ ಹಿಡಿಯಲು ಕ್ರಮ ತೆಗೆದುಕೊಳ್ಳಲಾಗಿದೆ. ಸಂಜೆಯ ನಂತರ ಮನೆಯಿಂದ ಅನಾವಶ್ಯಕವಾಗಿ ಯಾರೂ ಹೊರಗೆ ತಿರುಗಬಾರದು ಎಂದು ಚನ್ನಗಿರಿ ವಲಯ ಅರಣ್ಯಾಧಿಕಾರಿ ಮಧುಸೂದನ್ ತಿಳಿಸಿದ್ದಾರೆ.

ಚನ್ನಗಿರಿ ವಲಯ ಅರಣ್ಯಾಧಿಕಾರಿ ಶ್ವೇತಾ ಮಾತನಾಡಿ, ಜನತೆ ಗ್ರಾಮದಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಗುಂಪಾಗಿ ಹೋಗಲು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net