

ಮೈಸೂರು: ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ನಡೆದಿರುವ ಸ್ಫೋಟ ಪ್ರಕರಣ ಕುರಿತು ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಸದ್ಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಯುತ್ತಿದೆ. ಯಾರೋ ಒಬ್ಬರು ಬ್ಯಾಗ್ ಇಟ್ಟಿರುವುದು ತಿಳಿದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಶೀಘ್ರವೇ ಮಾಹಿತಿ ದೊರೆಯಲಿದೆ ಎಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಈಗಿರುವ ಮಾಹಿತಿ ಪ್ರಕಾರ ಪೊಲೀಸರು ಸ್ಥಳ ಪರಿಶೀಲಿಸಿ ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಶೀಘ್ರವೇ ಸಂಪೂರ್ಣ ಮಾಹಿತಿ ಗೊತ್ತಾಗುತ್ತದೆ. ಸ್ಫೋಟಕ ಭಾರಿ ಪ್ರಮಾಣದಲ್ಲಿ ನಡೆದಿಲ್ಲವಾದರೂ ಹಲವರಿಗೆ ಗಾಯವಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ವ್ಯಕ್ತಿಯೊಬ್ಬ ಕ್ಯಾಷಿಯರ್ ಬಳಿ ಹೋಗಿ ಟೋಕನ್ ತೆಗೆದುಕೊಂಡಿದ್ದಾನೆ. ಅವರ ಬಳಿ ಬ್ಯಾಗ್ ಇರಿಸಿದ್ದಾನೆ. ಈ ಎಲ್ಲ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಗಾಯಾಳುಗಳಿಗೆ ಪರಿಹಾರ ವಿಚಾರದ ಬಗ್ಗೆ ಗೃಹ ಸಚಿವರು ಮಾಹಿತಿ ನೀಡುತ್ತಾರೆ. ಸಂಪೂರ್ಣ ಮಾಹಿತಿ ಸಿಕ್ಕಿದ ಮೇಲೆ ನಾನು ಮಾತನಾಡುವೆ ಎಂದು ಉತ್ತರಿಸಿದರು.
ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಮಂಗಳೂರಲ್ಲಿ ಸಣ್ಣ ಪ್ರಮಾಣದಲ್ಲಿ ಘಟನೆ ನಡೆದಿತ್ತು. ಯಾರೋ ಬ್ಯಾಗ್ ತಂದು ಇಟ್ಟಿದ್ದು, ಅದರಿಂದ ಸ್ಫೋಟವಾಗಿದೆ ಎನ್ನಲಾಗುತ್ತಿದೆ. ಯಾರೇ ಈ ಕೃತ್ಯವೆಸಗಿದ್ದರೂ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.
ಹಿಂದಿನ ಎಲ್ಲ ಸರ್ಕಾರ, ಎಲ್ಲರ ಕಾಲದಲ್ಲೂ ಇಂಥ ಘಟನೆಗಳು ನಡೆದಿವೆ. ಯಾರೂ ಇಂಥ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ರಾಜಕೀಯ ಉದ್ದೇಶಕ್ಕೆ ಟೀಕೆ ಮಾಡುವುದು ತರವಲ್ಲ ಎಂದರು.
ಬಡತನ ವರದಿ ಪರಿಶೀಲನೆ ಅಗತ್ಯ:
ನೀತಿ ಆಯೋಗದವರು ನೀಡಿರುವ ವರದಿ ಪ್ರಕಾರ ಕಳೆದ 10 ವರ್ಷಗಳಲ್ಲಿ ಬಡತನ ಶೇ.5ರಷ್ಟು ಮಾತ್ರ ಇದೆ ಎಂದು ಹೇಳಲಾಗಿದೆ. ಆದರೆ ಆ ಸಮೀಕ್ಷೆಯ ವರದಿ ಸತ್ಯವೋ, ಅಸತ್ಯವೋ ಎಂದು ತಿಳಿಯಬೇಕಿದೆ. ಬಡತನ ಶೇ.5 ಇದ್ದರೆ ಅದು ಖುಷಿ ಪಡುವ ವಿಚಾರ. ಪರಿಸ್ಥಿತಿ ನೋಡಿದರೆ ಆ ರೀತಿ ಕಾಣುವುದಿಲ್ಲ. ಬಡತನ ರೇಖೆಗಿಂತ ಕೆಳಗಿರುವ 82 ಕೋಟಿ ಕುಟುಂಬಗಳಿಗೆ ಅಕ್ಕಿ ಕೊಡಲಾಗುತ್ತಿದೆ ಎಂದರು.
ಬಿಜೆಪಿ 50 ಕೋಟಿ ರೂ. ಆಮಿಷ ಒಡ್ಡುತ್ತಿದೆ
ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶವನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆ. ಬಿಜೆಪಿಯವರು ಎಂದಿಗೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದೇ ಇಲ್ಲ. ಆಪರೇಷನ್ ಕಮಲ ಮಾಡಿಯೇ ಬಂದಿದ್ದಾರೆ. 113ಕ್ಕಿಂತ ಹೆಚ್ಚು ಗೆದ್ದೇ ಇಲ್ಲ. 2018ರಲ್ಲಿ 100 ಗೆದ್ದಿದ್ದರು. ಕರ್ನಾಟಕದಲ್ಲಿಯೂ ಆಪರೇಷನ್ ಕಮಲ ಪ್ರಯತ್ನ ಮಾಡುತ್ತಾರೆ. ಅವರು ಈಗ 50 ಕೋಟಿ ರೂ. ಆಮಿಷವೊಡ್ಡುತ್ತಿದ್ದಾರೆ. ಆದರೆ ನಮ್ಮ ಶಾಸಕರು ಅವರ ಆಸೆ ಆಮಿಷಗಳಿಗೆ ಬಲಿಯಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.