

ಅಂಗವೈಕಲ್ಯ ಶಾಪವಲ್ಲ, ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರಂತೆ ಸರಿಸಮಾನವಾದ ಬದುಕು ಬಾಳಲು ಅವರಿಗೂ ಅವಕಾಶ ಕಲ್ಪಿಸಿಕೊಡಬೇಕು ಎಂಬ ಕನಸಿನಿಂದ ಅಂಗವಿಕಲರಿಗಾಗಿ ಒಂದು ಬಿಪಿಒ ಸಂಸ್ಥೆಯನ್ನೇ ಆರಂಭಿಸಿದವರು ಬೆಂಗಳೂರಿನ ಪವಿತ್ರಾ ವೈ.ಎಸ್. ವಿಶಿಷ್ಠ ಸಾಧನೆಯ ಕನಸು, ಕತ್ತಲೆಯಲ್ಲಿರುವವರಿಗೆ ನೆರವಾಗುವ ಉದಾರ ಮನಸ್ಸಿನಿಂದ ಸಾವಿರಾರು ಅಂಗವಿಕಲರಿಗೆ ಬದುಕು ಕಟ್ಟಿಕೊಟ್ಟಿರುವ ಪವಿತ್ರಾ ಅವರಿಗೆ ಕ್ಯಾಡ್ಬರಿ ಡೈರಿಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.
ಪದವಿ ನಂತರ ಸ್ವಾವಲಂಬಿಯಾಗಿ ನನ್ನ ಕಾಲಮೇಲೆ ನಿಲ್ಲಬೇಕೆಂಬ ಹಂಬಲ ಹೊಂದಿದ್ದ ಪವಿತ್ರಾ, ನವೋದ್ಯಮಗಳ ಸಾಧ್ಯತೆಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾಗ ಹಲವು ವಿಚಾರಗಳು ಅವರ ಗಮನಕ್ಕೆ ಬಂದವು. ಮೊದಲನೆಯದಾಗಿ ಅದೆಷ್ಟೋ ಅಂಗವಿಕಲರಿಗೆ ಶೈಕ್ಷಣಿಕ ಅರ್ಹತೆ ಹೊಂದಿದ್ದರೂ, ಉದ್ಯೋಗ ಸಿಗದೆ ಪರದಾಡುತ್ತಿರುವುದು ಗಮನಕ್ಕೆ ಬಂತು. ಬಿಪಿಒ ತರಬೇತಿ ಕೇಂದ್ರಗಳಲ್ಲಿ ಸದಾ ಅಭ್ಯರ್ಥಿಗಳು ತುಂಬಿ ತುಳುಕುತ್ತಿದ್ದರೂ, ಸಾಫ್ಟ್ವೇರ್ ಉದ್ಯೋಗಕ್ಕೆ ಬೇಕಾದ ಪ್ರಾಯೋಗಿಕ ತರಬೇತಿ ಅಲ್ಲಿ ಸಿಗುತ್ತಿಲ್ಲ ಎನ್ನುವುದೂ ಅರಿವಿಗೆ ಬಂತು. ಹೀಗಾಗಿ ತಾನೇ ಏಕೆ ವೃತ್ತಿಪರ ಸಂಸ್ಥೆ ಆರಂಭಿಸಬಾರದು ಎಂಬ ಚಿಂತನೆಯೇ ಪವಿತ್ರಾ 2006ರಲ್ಲಿ ವಿಂಧ್ಯಾ ಇ-ಇನ್ಪೋಮೀಡಿಯಾ ಆರಂಭಿಸುವುದಕ್ಕೆ ಪ್ರೇರಣೆಯಾಯಿತು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಸಂಸ್ಥೆಯಲ್ಲಿ ಸದ್ಯ 1500ಕ್ಕೂ ಹೆಚ್ಚು ಸಿಬ್ಬಂದಿ ಇದ್ದು, ಅವರಲ್ಲಿ 90ಶೇ. ಬಹುವಿಧದ ಅಂಗವೈಕಲ್ಯ ಹೊಂದಿರುವವರು.
ವಿಂಧ್ಯಾ ಸಂಸ್ಥೆ ಇಂದು ಹಲವು ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ನೀಡುತ್ತಿದೆ. ಆಯಕಟ್ಟಿನ ಹುದ್ದೆಗಳ ನಿರ್ವಹಣೆಗೂ ಅಣಿಯಾಗುವಂತೆ ತರಬೇತಿ ಮೂಲಕ ಅಂಗವಿಕಲರನ್ನು ತಯಾರು ಮಾಡಲಾಗುತ್ತಿದೆ. ಒಂದೇ ಕೈ ಹೊಂದಿರುವ ಗಜೇಂದ್ರ ಖಾಂಡ್ವೇಕರ್ ಓರ್ವ ಸಾಮಾನ್ಯ ಉದ್ಯೋಗಿಯಾಗಿ ಸೇರಿಕೊಂಡವರು, ಇಲ್ಲಿನ ಕೌಶಲ ತರಬೇತಿ ಹಾಗೂ ವ್ಯಕ್ತಿಗತ ಸಾಮರ್ಥ್ಯದಿಂದ ಅವಕಾಶಗಳನ್ನು ಬಾಚಿಕೊಂಡು ಇದೀಗ ಇದೀಗ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆವರೆಗೂ ತಲುಪಿದ್ದಾರೆ. ಈ ರೀತಿ ಅವಕಾಶಗಳ ಮೆಟ್ಟಿಲನ್ನೇರಿ ಟೀಮ್ ಲೀಡರ್ಗಳಾಗಿರುವ ಹಲವು ಅಂಗವಿಕಲರು ಇಲ್ಲಿದ್ದಾರೆ. ಪವಿತ್ರಾ ನಮಗೆ ಕೆಲಸ ಕೊಟ್ಟ ಮಾಲಕಿ ಮಾತ್ರವೇ ಅಲ್ಲ, ಬಿಪಿಒ ಅಗತ್ಯಕ್ಕೆ ತಕ್ಕಂತೆ ವೃತ್ತಿಪರ ತರಬೇತಿ ನೀಡಿ, ಆತ್ಮವಿಶ್ವಾಸ ತುಂಬಿದ್ದಾರೆ ಎಂದು ಅವರೆಲ್ಲ ಹೇಳುತ್ತಾರೆ.
ವಿಂದ್ಯಾ ಸಂಸ್ಥೆಯಲ್ಲಿ ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಮ್ಮು-ಕಾಶ್ಮೀರ ಸೇರಿ ದೇಶದ ಬಹುತೇಕ ರಾಜ್ಯಗಳ ಅಂಗವಿಕಲರು ಒಂದು ಕುಟುಂಬದಂತೆ ಬದುಕುತ್ತ ಯಶಸ್ಸಿನ ಪ್ರಪಂಚ ಕಟ್ಟಿಕೊಂಡಿದ್ದಾರೆ. ಹೈದರಾಬಾದ್ನಲ್ಲೂ ಸಂಸ್ಥೆಯ ಶಾಖೆ ಇದ್ದು, ಅಲ್ಲೂ ಹತ್ತಾರು ಅಂಗವಿಕಲರಿಗೆ ಉದ್ಯೋಗ ಕಲ್ಪಿಸಲಾಗಿದೆ. ಅಂಗವಿಕಲರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿರುವ ಪವಿತ್ರಾ ವೈ.ಎಸ್. ಅವರಿಗೆ ಕ್ಯಾಡ್ಬರಿ ಡೈರಿಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.