ರೋಗಿಗಳ ಜತೆ ಬರುವವರಿಗೆ ಉಚಿತ ಊಟ ಒದಗಿಸುತ್ತಿರೋ ಸುರೇಂದ್ರರಿಗೆ ಕ್ಯಾಡ್​ಬರಿ ಡೈರಿ ಮಿಲ್ಕ್​ ಧನ್ಯವಾದ

Cadbury
Published on

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ದಿನನಿತ್ಯ ಆಸ್ಪತ್ರೆಯಿಂದಲೇ ಊಟ ನೀಡಲಾಗುತ್ತ್ತೆ. ಆದರೆ, ರೋಗಿಗಳ ಉಪಚಾರ ಅಥವಾ ಆರೈಕೆಯಲ್ಲಿ ತೊಡಗಿದವರಿಗೆ ಆಹಾರ ನೀಡುವುದಿಲ್ಲ. ಹಾಗಾಗಿ ಕೆಲವರು ಊಟ ಸಿಗದೆ ಖಾಲಿ ಹೊಟ್ಟೆಯಲ್ಲೇ ಮಲಗುವ ಕರುಣಾಜನಕ ಪರಿಸ್ಥಿತಿಯೂ ಇರುತ್ತದೆ. ಇವರ ನೆರವಿಗೆ ನಿಂತವರೇ ಸುರೇಂದ್ರ ಶಿವಾಜಿರಾವ್ ಅನಗೋಳಕರ. ಹಲವು ವರ್ಷಗಳಿಂದ ‘ಫುಡ್ ಫಾರ್ ನೀಡಿ’ ಅಭಿಯಾನದಡಿ ರೋಗಿಗಳ ಜತೆ ಬರುವವರಿಗೆ ಉಚಿತವಾಗಿ ಊಟ ಒದಗಿಸುತ್ತಿರುವ ಇವರ ಸೇವೆಗೆ ಕ್ಯಾಡ್​ಬರಿ ಡೈರಿ ಮಿಲ್ಕ್ ಅವರಿಗೆ ಧನ್ಯವಾದ ಅರ್ಪಿಸುತ್ತದೆ.

ಹಸಿದವರಿಗೆ ಅನ್ನ ನೀಡುವುದು ಭಾರತೀಯ ಸಂಸ್ಕೃತಿ. ಆದರೆ, ಪರಿಚಿತರು, ಅಕ್ಕಪಕ್ಕದ ಮನೆಯವರಿಗೂ ಒಂದುಹೊತ್ತಿನ ಊಟ ಹಾಕಲು ಹಿಂದೆಮುಂದೆ ನೋಡುವ ಈ ಕಾಲದಲ್ಲಿ ಬೆಳಗಾವಿಯ ಈ ಸಾಧಕ ಪ್ರತೀ ದಿನ 200ಕ್ಕೂ ಅಧಿಕ ಬಡವರು, ರೋಗಿಗಳಿಗೆ ಉಚಿತ ಊಟೋಪಚಾರ ಒದಗಿಸುವುದರಲ್ಲೇ ಬದುಕಿನ ಸಾರ್ಥಕ್ಯ ಕಾಣುತ್ತಿದ್ದಾರೆ.

ಹೌದು, ಬೆಳಗಾವಿಯ ವ್ಯಾಪಾರಿ ಸುರೇಂದ್ರ ಶಿವಾಜಿರಾವ್ ಅನಗೋಳಕರ ಹಲವು ವರ್ಷಗಳಿಂದ ‘ಫುಡ್ ಫಾರ್ ನೀಡಿ’ ಅಭಿಯಾನದ ಹೆಸರಿನಲ್ಲಿ ಬಡ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲಾಸ್ಪತ್ರೆಗೆ ಆರ್ಥಿಕವಾಗಿ ಹಿಂದುಳಿದವರು, ಅಪಘಾತಗಳಲ್ಲಿ ಗಾಯಗೊಂಡವರು, ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ನಿತ್ಯ 200ಕ್ಕೂ ಹೆಚ್ಚಿನ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲೇ ಉಳಿಯುತ್ತಾರೆ. ಅಲ್ಲದೆ, ಅವರೊಂದಿಗೆ ರೋಗಿಗಳನ್ನು ಉಪಚರಿಸಲು ಮತ್ತೆ ನೂರಾರು ಜನರೂ ಉಳಿದುಕೊಳ್ಳುತ್ತಾರೆ.

ಆಸ್ಪತ್ರೆಯಲ್ಲಿ ರೋಗಿಗಳಿಗೆ ದಿನನಿತ್ಯ ಆಸ್ಪತ್ರೆ ವತಿಯಿಂದ ಊಟ ನೀಡಲಾಗುತ್ತಿದೆ. ಆದರೆ, ರೋಗಿಗಳ ಉಪಚಾರ ಅಥವಾ ಆರೈಕೆಯಲ್ಲಿ ತೊಡಗಿದವರಿಗೆ ಆಹಾರ ನೀಡುವುದಿಲ್ಲ. ಹಾಗಾಗಿ ರೋಗಿಗಳಿಗೆ ನೀಡುವ ಆಹಾರವನ್ನೇ ಹಂಚಿ ತಿನ್ನುವ ಪರಿಸ್ಥಿತಿ ಇರುತ್ತದೆ. ಇದರಿಂದ ಕೆಲವರು ಅರ್ಧ ಹೊಟ್ಟೆಯಲ್ಲಿ ಇರಬೇಕಾಗುತ್ತಿತ್ತು. ಇನ್ನು ಕೆಲವರು ಊಟ ಸಿಗದೆ ಖಾಲಿ ಹೊಟ್ಟೆಯಲ್ಲೇ ಮಲಗುವ ಕರುಣಾಜನಕ ಪರಿಸ್ಥಿತಿಯೂ ಇರುತ್ತದೆ. ಈ ಸಮಸ್ಯೆ ಅರಿತ ಸುರೇಂದ್ರ ಅನಗೋಳಕರ, 2017ರಿಂದ ಪ್ರತಿದಿನ ರಾತ್ರಿ 7.30ಕ್ಕೆ ಹೆರಿಗೆ ವಾರ್ಡ್ ಬಳಿಗೆ ಸ್ನೇಹಿತರ ಜತೆ ತೆರಳಿ ಕನಿಷ್ಠ 200 ಮಂದಿಗೆ ಉಚಿತವಾಗಿ ಊಟ ನೀಡುತ್ತಿದ್ದಾರೆ.

ಹಸಿದವರಿಗೆ ಅನ್ನ ನೀಡುವ ಮೂಲಕ ಬಡವರ ಸೇವೆ ಮಾಡುತ್ತಿದ್ದೇನೆ. ಸಿಸಿ ಕ್ಯಾಮರಾಗಳ ನಿರ್ವಹಣೆಗೆ ಸಿಗುವ ಪ್ರತಿದಿನದ ಸರ್ವಿಸ್ ಚಾರ್ಜ್ ಅನ್ನು ಅನ್ನ ಸಂತರ್ಪಣೆಗೆ ಮೀಸಲಿಟ್ಟಿದ್ದೇನೆ. ‘ಫುಡ್ ಫಾರ್ ನೀಡಿ’ ಅಭಿಯಾನದ ಮೂಲಕ ಅನ್ನದಾನ ಮಾಡುತ್ತಿದ್ದು, ಇದಕ್ಕೆ ಅನೇಕರು ಕೈ ಜೋಡಿಸಿದ್ದಾರೆ ಎನ್ನುತ್ತಾರೆ ಸುರೇಂದ್ರ.

ಸರ್ಕಾರಿ ಆಸ್ಪತ್ರೆಗೆ ಬರುವವ ರೋಗಿಗಳು ಅನುಕೂಲಸ್ಥರೇನೂ ಆಗಿರಲಿಲ್ಲ. ಅಂಥ ರೋಗಿಗಳ ಸಂಬಂಧಿಕರಿಗೆ ತಿಂಗಳೊಪ್ಪತ್ತು ಆಸ್ಪತ್ರೆವಾಸದ ಸಂದರ್ಭದಲ್ಲಿ ಆಹಾರ ನೀಡುವುದು ಸುರೇಂದ್ರ ಅವರ ದೊಡ್ಡ ಕಾರ್ಯ ಎಂದು ಆಸ್ಪತ್ರೆಯ ಸಿಬ್ಬಂದಿ ಹೊಗಳುತ್ತಾರೆ. ಅನ್ನದಾತೋ ಸುಖಿಭವ ಎನ್ನುವುದು ಜನಪ್ರಿಯ ಮಾತು. ಆದರೆ, ನಿಜ ಅರ್ಥದಲ್ಲಿ ಅನ್ನದಾತರಾಗಿರುವ ಸುರೇಂದ್ರ ಅನಗೋಳಕರ ನಮ್ಮ ಪಾಲಿನ ದೇವರು ಎಂದು ಜಿಲ್ಲಾಸ್ಪತ್ರೆಯ ರೋಗಿಗಳು, ಸಂಬಂಧಿಕರು ಉಪಕಾರ ಸ್ಮರಿಸುತ್ತಾರೆ.

ಸುರೇಂದ್ರ ಅನಗೋಳಕರ ಕಳೆದ 6 ವರ್ಷಗಳಿಂದ ಪರಿಸರ ಸಂರಕ್ಷಣೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸೇವೆಗಾಗಿ ಅವರು ಯಾರ ಬಳಿಯೂ ಹಣಕ್ಕಾಗಿ ಕೈಚಾಚಿಲ್ಲ. ಪ್ರತಿವರ್ಷ ವಿಶ್ವ ಪರಿಸರ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಬೇವು, ಮಾವು, ಹುಣಸೆ ಮತ್ತಿತರ ತಳಿಗಳ 150ಕ್ಕೂ ಹೆಚ್ಚು ಸಸಿಗಳನ್ನು ನೆಡುತ್ತಾರೆ. ಅವುಗಳಿಗೆ ಆಗಾಗ ನೀರೆರೆದು ಪೋಷಿಸುತ್ತಾರೆ. ಅಲ್ಲದೆ, ಸುತ್ತಲಿನ ಜನರಿಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿಯನ್ನೂ ಮೂಡಿಸುತ್ತಾರೆ. ಅಂದು ಅವರು ನೆಟ್ಟ ಸಸಿಗಳಿಂದು ಆಳೆತ್ತರಕ್ಕೆ ಬೆಳೆದು ನಿಂತಿವೆ.

ಅನಗೋಳಕರ ಅವರು ಡಿಪ್ಲೊಮಾ ಆಟೋಮೊಬೈಲ್ ಪದವಿ ಮುಗಿಸಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿದಿನ ಬೆಳಗ್ಗೆ 8.30ರಿಂದ 9.30ರ ವರೆಗೆ ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯಗಳ ಕುರಿತು ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಅಲ್ಲದೆ, ನಗರದ ವಿವಿಧ ಪ್ರದೇಶಗಳಲ್ಲಿ ಅಧ್ಯಯನ ಮಾಡುತ್ತಿರುವ ಬಡಮಕ್ಕಳನ್ನು ಗುರುತಿಸಿ ಉಚಿತ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ.

ಬೆಳಗಾವಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡರೋಗಿಗಳಿಗೆ ನಾನಾ ರೀತಿಯಲ್ಲಿ ನೆರವನ್ನು ನೀಡುತ್ತಿದ್ದಾರೆ. ಸುರೇಂದ್ರ ಶಿವಾಜಿ ಅವರ ಔದಾರ್ಯ ಹಾಗೂ ನಿಸ್ವಾರ್ಥ ಸೇವೆಗೆ ಕ್ಯಾಡ್​ಬರಿ ಡೈರಿಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net