

ಉಡುಪಿ: ಸ್ಥಳಿಯ ಕೇಬಲ್ ಟಿ.ವಿ ನೆಟ್ವರ್ಕ್ ಚಾನೆಲ್ಗಳಲ್ಲಿ ಅನಪೇಕ್ಷಿತ ಸುದ್ದಿಗಳನ್ನು ಪ್ರಸಾರ ಮಾಡಿದ್ದಲ್ಲಿ ಅಂತಹ ಕೇಬಲ್ ಟಿ.ವಿ ಆಪರೇಟರ್ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ಮಂಗಳವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಬಲ್ ಟಿ.ವಿ ಯಲ್ಲಿ ಪ್ರಸಾರ ವಾಗುವ ಯಾವುದೇ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ ಭಂಗ ತರುವ ಯಾವುದೇ ಸಮುದಾಯಗಳ ಮಧ್ಯೆ ವೈರತ್ವ ತರುವ, ನೋವು ಉಂಟು ಮಾಡುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ. ಜಾಹೀರಾತು ವಿವಿಧ ಧರ್ಮ , ಜನಾಂಗ, ಭಾಷೆ ಅಥವಾ ಪ್ರಾದೇಶಿಕ ಗುಂಪು, ಜಾತಿ ನಡುವೆ ವೈರತ್ವದ ಭಾವನೆಗಳನ್ನು ಬೆಳೆಸುವಂತಿದ್ದಲ್ಲಿ ಅವುಗಳನ್ನು ಪ್ರಸಾರ ಮಾಡುವಂತಿಲ್ಲ ಎಂದರು.
ಕೇಬಲ್ ಆಪ್ರೇಟರ್ಗಳ ಗ್ರಾಹಕರು ನಿಗದಿಪಡಿಸಿದ ದರವನ್ನು ವಸೂಲಿ ಮಾಡಬೇಕು. ಉತ್ತಮ ಗುಣಮಟ್ಟದ ನೆಟ್ವರ್ಕ್ ಸಿಗ್ನಲ್ಗಳನ್ನು ಒದಗಿಸಬೇಕು. ಈ ಬಗ್ಗೆ ದೂರುಗಳು ಬಂದಲ್ಲಿ ಕೇಬಲ್ ಆಪರೇಟರ್ಗಳನ್ನು ಹೊಣೆಗಾರರನ್ನಾಗಿ ಮಾಡಿ, ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಮಾತನಾಡಿ, ಸ್ಥಳಿಯ ಟಿ.ವಿ ಕಾರ್ಯಕ್ರಮಗಳ ಮೇಲೆ ಗಮನ ನೀಡಲಾಗಿದೆ. ಕೇಬಲ್ ಟಿ.ವಿ ಆಪರೇಟರ್ಗಳು ಗ್ರಾಹಕರೊಂದಿಗೆ ಸಂಯಮದೊಂದಿಗೆ ವರ್ತಿಸಿ, ಗುಣಮಟ್ಟದ ಸೇವೆಗಳನ್ನು ಒದಗಿಸಬೇಕು ಎಂದರು.
ಕೇಬಲ್ ಟಿ.ವಿ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ರೀತಿಯ ದೂರುಗಳಿದ್ದಲ್ಲಿ ಜಿಲ್ಲಾ ಮಟ್ಟದ ದೂರು ಕೋಶ ಅಥವಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸಲ್ಲಿಸಬಹುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಪವರ್ ಸಂಸ್ಥೆಯ ಸಾಧನಾ ಕಿಣಿ, ಶಿಕ್ಷಣ ತಜ್ಞ ರಾಮಕೃಷ್ಣ ರಾವ್, ವಿಶ್ವಾಸದ ಮನೆಯ ಅಧ್ಯಕ್ಷ ಮ್ಯಾಥಿವ್ ಕ್ಯಾಸ್ತಲಿನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.