

ಚಿಕ್ಕಮಗಳೂರು: ಅರಣ್ಯ ಇಲಾಖೆ ರೂಪಿಸಿರುವ ಬಫರ್ ಜೋನ್‍ನ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಲು ಸಂಪುಟ ಉಪ ಸಮಿತಿ ರಚಿಸಲಾಗಿದ್ದು, ಈ ಸಮಿತಿ ಚರ್ಚಿಸಿದ ಬಳಿಕ ಅಂತಿಮವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರ ಹೊರವಲಯದ ಹಿರೇಮಗಳೂರಿನಲ್ಲಿ ದೊಡ್ಡ ಕೆರೆ ಏರಿ ದುರಸ್ತಿ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಳೆದ ಗುರುವಾರ ರಚನೆಯಾದ ಈ ಉಪ ಸಮಿತಿಯಲ್ಲಿ ಅರಣ್ಯ ಸಚಿವರು, ತಾವು ಸೇರಿದಂತೆ ಐವರು ಸಚಿವರಿದ್ದಾರೆ. ಈ ಸಮಿತಿ ಪ್ರಾಥಮಿಕ ಸಭೆ ನಡೆಸಿ ಚರ್ಚಿಸಿ ಪರಿಶೀಲಿಸಲಿದ್ದು, ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಇಂಗ್ಲೀಷ್‍ನಲ್ಲಿ ತೀರ್ಪು-ಕೋರ್ಟ್ ತೀರ್ಮಾನ
ದೇಶದ ಎಲ್ಲ ರಾಜ್ಯಗಳ ಹೈಕೋರ್ಟ್ ತೀರ್ಪುಗಳು ಇಂಗ್ಲೀಷ್‍ನಲ್ಲೇ ಇರಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದರಿಂದ ನಮ್ಮ ಹೈಕೋರ್ಟ್ ತೀರ್ಪುಗಳು ಕನ್ನಡದಲ್ಲೇ ಆಗಬೇಕೆಂದು ಕಾನೂನು ಸಚಿವರಾದರೂ ತಾವು ಮೂಗು ತೂರಿಸಲು ಸಾಧ್ಯವಾಗದು ಎಂದು ತಿಳಿಸಿದರು.
ನಮ್ಮಲ್ಲಿ ಕೆಲವು ನ್ಯಾಯಾಧೀಶರು ಕನ್ನಡದಲ್ಲೇ ತೀರ್ಪು ಪ್ರಕಟಿಸುತ್ತಿರುವ ನಿದರ್ಶನಗಳಿದ್ದು, ಅಂಥವರನ್ನು ಗುರುತಿಸಿ ಪ್ರತಿವರ್ಷ ಗೌರವಿಸಲಾಗುತ್ತಿದೆ ಎಂದರು. ತೀರ್ಪು ಇಂಗ್ಲೀಷ್ ನಲ್ಲಿರಬೇಕೆಂಬುದು ಕರ್ನಾಟಕದ ನ್ಯಾಯಾಧೀಶರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಯಾವುದೇ ರಾಜ್ಯದ ನ್ಯಾಯಾಧೀಶರು ಇನ್ನೊಂದು ರಾಜ್ಯಕ್ಕೆ ವರ್ಗಾವಣೆಯಾಗುವ ಸಂಭವವಿರುವುದರಿಂದ ಹೈಕೋರ್ಟ್ ವ್ಯವಹಾರ ಇಂಗ್ಲೀಷ್‍ನಲ್ಲೇ ಆಗಬೇಕೆಂದು ಸುಪ್ರೀಂ ಕೋರ್ಟ್ ಹೇಳಿದ್ದು, ಈ ವಿಚಾರದಲ್ಲಿ ತಾವೇನು ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು.
ದೂರು ಬಂದಲ್ಲಿ ಅಗತ್ಯ ಕ್ರಮ
ರಾಜ್ಯಾದ್ಯಂತ ಎಲ್ಲ ಪೊಲೀಸ್ ಠಾಣೆಗಳಲ್ಲಿ ಜೀರೋ ಎಫ್‍ಐಆರ್ ದಾಖಲಿಸಬೇಕೆನ್ನುವ ಕಾನೂನಿದ್ದರೂ ಬಹಳಷ್ಟು ಠಾಣೆಗಳು ಅದನ್ನು ಪಾಲಿಸುತ್ತಿಲ್ಲ ಎನ್ನುವ ದೂರಿಗೆ ಪ್ರತಿಕ್ರಿಯಿಸಿದ ಸಚಿವರು, ಯಾವುದೇ ಠಾಣೆಯಲ್ಲಿ ಯಾರೇ ದೂರು ಕೊಟ್ಟರೂ ಅದನ್ನು ಪರಿಗಣಿಸಬೇಕು ಎನ್ನುವ ನಿಯಮವಿದೆ. ಅನಂತರವಷ್ಟೇ ಅದನ್ನು ಸಂಬಂಧಿಸಿದ ಠಾಣೆಗೆ ವರ್ಗಾಯಿಸಬೇಕು. ಯಾವ ಠಾಣೆ ವ್ಯಾಪ್ತಿಗೆ ಬರುತ್ತದೆ ಎಂದು ಸಹ ಕೇಳಬಾರದು. ಈ ವಿಚಾರದಲ್ಲಿ ನಿರ್ದಿಷ್ಟ ದೂರುಗಳಿದ್ದಲ್ಲಿ ಅಂಥವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಹಳಷ್ಟು ಠಾಣೆಗಳಲ್ಲಿ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆಂಬುದು ತಮ್ಮ ಗಮನಕ್ಕೆ ಬಂದಿದೆ ಎಂದರು.
ಮನೆ ನಿರ್ಮಿಸಿಕೊಳ್ಳಲು ಮುಂದಾಗಿಲ್ಲ
ಅತೀವೃಷ್ಟಿ ವೇಳೆ ಮನೆ ಕಳೆದುಕೊಂಡವರಿಗೆ ಇನ್ನೂ ಸರಿಯಾಗಿ ಪರಿಹಾರ ಸಿಕ್ಕಿಲ್ಲ ಎಂಬ ದೂರಿಗೆ ಪ್ರತಿಕ್ರಿಯಿಸಿದ ಸಚಿವರು, ಮನೆ ಕಟ್ಟಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಮುಂಗಡ ಅನುದಾನ ಲಭ್ಯವಿದೆ. ಆದರೆ ಬಹುತೇಕ ಜನರು ಮೊದಲ ಹಂತದ ಪರಿಹಾರ ಬಳಸಿ ಮನೆ ನಿರ್ಮಿಸಿಕೊಳ್ಳಲು ಮುಂದಾಗಲಿಲ್ಲ. ಹಂತ ಹಂತವಾಗಿ ಪರಿಹಾರ ನೀಡುವ ಕೆಲಸ ನಡೆಯುತ್ತಲೇ ಇದೆ. ಬಹಳಷ್ಟು ಮಂದಿ ದಾಖಲೆ ತುಂಬಿಕೊಡುತ್ತಿಲ್ಲ. ಇನ್ನು ಕೆಲವರು ಎರಡನೇ ಕಂತಿನ ಹಣ ಪಡೆಯಲು ಮುಂದೆ ಬರುತ್ತಿಲ್ಲ ಎಂದರಲ್ಲದೆ, 10 ತಿಂಗಳ ಮಟ್ಟಿಗೆ ಬಾಡಿಗೆ ಕೊಡಬೇಕಿತ್ತು. ಅದನ್ನು ನೀಡಲಾಗಿದೆ. ರಾಜ್ಯದಲ್ಲಿ 40 ಸಾವಿರ ಮನೆಗಳಿಗೆ ಹಾನಿಯಾಗಿದೆ ಎಂದು ಗುರುತಿಸಲಾಗಿದ್ದರೂ 10 ಸಾವಿರ ಮನೆಗಳಿಗೆ ದಾಖಲೆಗಳೇ ಇಲ್ಲ ಎಂದರು.
ಜಮೀನಿನ ಕೊರತೆ
ಅತಿವೃಷ್ಟಿಯಲ್ಲಿ ಜಮೀನು ಕಳೆದುಕೊಂಡವರಿಗೆ ಪರ್ಯಾಯ ಭೂಮಿ ಒದಗಿಸಲು ಜಾಗದ ಕೊರತೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆದಿದ್ದು, ನ್ಯಾಯಾಲಯಕ್ಕೆ ಪ್ರಮಾಣ ಪತ್ರವನ್ನು ಸಹ ಸಲ್ಲಿಸಲಾಗಿದೆ. ಅಲ್ಲಿ ತೀರ್ಪು ಬಂದಲ್ಲಿ ಸಾಕಷ್ಟು ಭೂಮಿ ಲಭ್ಯವಾಗಲಿದೆ. ಪರ್ಯಾಯ ಭೂಮಿ ನೀಡುವ ಎನ್‍ಡಿಆರ್ ಎಫ್ ಹಾಗೂ ಎಸ್‍ಡಿಆರ್ ಎಫ್ ಮಾರ್ಗಸೂಚಿಯಲ್ಲೂ ಇಲ್ಲ ಎಂದು ಹೇಳಿದರು. ಅತಿವೃಷ್ಟಿ ಪರಿಣಾಮ ಈ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕೆರೆಗಳಿಗೆ ಹಾನಿಯಾಗಿದ್ದು, ಅವುಗಳನ್ನು ಖುದ್ದು ಪರಿಶೀಲಿಸುವ ಸಲುವಾಗಿ ಭೇಟಿ ನೀಡುತ್ತಿರುವುದಾಗಿ ತಿಳಿಸಿದ ಅವರು, ಆದಷ್ಟು ಶೀಘ್ರ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಎಸ್.ಬಗಾದಿ ಗೌತಮ್, ಸಣ್ಣ ನೀರಾವರಿ ಇಲಾಖೆಯ ಇಇ ಮಲ್ಲಿಕಾರ್ಜುನ್, ಮುಖಂಡರಾದ ಎಚ್.ಡಿ.ತಮ್ಮಯ್ಯ, ಈಶ್ವರಳ್ಳಿ ಮಹೇಶ್ ಮತ್ತಿತರರಿದ್ದರು.