

ಶಿಗ್ಗಾಂವಿ: ಅಧಿಕಾರಿಗಳ ವರ್ಗಾವಣೆಯಲ್ಲಿ ನಾನು ಹಣ ಪಡೆದಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಕಚೇರಿಯಿಂದ ಹಿಡಿದು ಎಲ್ಲ ಕಡೆಗೂ ಹೊರಗಿನವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಮಂತ್ರಿಮಂಡಲದ ಸದಸ್ಯರು, ಅವರ ಭಂಟರು ವರ್ಗಾವಣೆ ದಂಧೆಯಲ್ಲಿ ಇರೋದು ಸ್ಪಷ್ಟವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ವರ್ಗಾವಣೆ ಬಗ್ಗೆ ಅಧಿಕಾರಗಳ ವಲಯದಲ್ಲಿ ಬಹಳ ದೊಡ್ಡ ಚರ್ಚೆಯಾಗುತ್ತಿದೆ. ಅದನ್ನು ಮುಚ್ಚಿ ಹಾಕುವ ಸಲುವಾಗಿ ಸಿಎಂ ಈ ರೀತಿ ಹೇಳುತ್ತಿದ್ದಾರೆ. ನಾನು ಹಣ ತೆಗೆದುಕೊಂಡಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎನ್ನುತ್ತಾರೆ. ಅಂದರೆ, ಸರ್ಕಾರದಲ್ಲಿ ಬೇರೆಯವರು ಹಣ ತೆಗೆದುಕೊಂಡರೆ ಮುಖ್ಯಮಂತ್ರಿಗಳ ಜವಾಬ್ದಾರಿ ಮುಗೀತಾ’ ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಜುಲೈ 18ರ ನಂತರ ಪಕ್ಷವು ಪ್ರತಿಪಕ್ಷ ನಾಯಕನ ಆಯ್ಕೆ ಕುರಿತು ತೀರ್ಮಾನ ಮಾಡುತ್ತದೆ. ಜೆಡಿಎಸ್ ಮೈತ್ರಿ ವಿಚಾರ ಕೂಡ ವರಿಷ್ಠರೇ ತೀರ್ಮಾನಿಸುತ್ತಾರೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಸೋಲಿಸಬೇಕು ಎನ್ನುವ ಕಾಂಗ್ರೆಸ್ಸಿನವರ ಉದ್ದೇಶ ಈಡೇರುವುದಿಲ್ಲ. ಪ್ರತಿಪಕ್ಷಗಳಿಗೆ ಸ್ವತಂತ್ರವಾಗಿ ಚುನಾವಣೆ ಎದುರಿಸುವ ಶಕ್ತಿ ಇಲ್ಲ. ಎಲ್ಲ ಪಕ್ಷಗಳು ಒಗ್ಗೂಡಿದರೂ ನರೇಂದ್ರ ಮೋದಿಜಿ ನೇತೃತ್ವಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಮೋದಿ ಅವರನ್ನು ಸೋಲಿಸಬೇಕೆನ್ನುವ ಪ್ರತಿಪಕ್ಷಗಳ ಉದ್ದೇಶ ಎಂದಿಗೂ ಈಡೇರುವುದಿಲ್ಲ. ಬೆಂಗಳೂರಿನಲ್ಲಿ ನಡೆಯುವ ವಿರೋಧ ಪಕ್ಷಗಳ ಸಭೆಗೆ ಯಾವುದೇ ಮಹತ್ವ ಇಲ್ಲ ಎಂದರು.
ರಾಜ್ಯದಲ್ಲಿ ಹತ್ತು ವರ್ಷದಿಂದ ಬಿಸಿಯೂಟ ಕಾರ್ಯಕ್ರಮ ನಡೆಯುತ್ತಿದೆ. ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಮಹಿಳೆಯರು ಬಳೆ ಹಾಕಿಕೊಂಡು ಕೆಲಸ ಮಾಡಿದ್ದಾರೆ ಯಾವುದೇ ತೊಂದರೆಯಾಗಿಲ್ಲ. ಬಿಸಿಯೂಟ ಕಾರ್ಯಕರ್ತೆಯರು ಕೈ ಬಳೆ ಹಾಕುವಂತಿಲ್ಲ ಎಂದು ಸರ್ಕಾರ ಈಗ ಯಾಕೆ ಸುತ್ತೋಲೆ ಹೊರಡಿಸುತ್ತಿದೆ. ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ವಾ? ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.