ಮ.ಬೆಟ್ಟದಲ್ಲಿ ಕ್ಯಾಬಿನೆಟ್‌ನಿಂದ ಅಭಿವೃದ್ಧಿಗೆ ಸದವಕಾಶ

Published on

ಹನೂರು: ಮಹದೇಶ್ವರಬೆಟ್ಟದಲ್ಲಿ ಕ್ಯಾಬಿನೆಟ್ ಆಗುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಸದವಕಾಶ ಒಲಿದು ಬರಲಿದೆ ಎಂದು ಶಾಸಕ ಎಂ.ಆರ್ ಮಂಜುನಾಥ್ ಆಶಯ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿ, ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯದಲ್ಲಿ ಹಿಂದುಳಿದ 10 ಜಿಲ್ಲೆಗಳ ಪೈಕಿ ಚಾಮರಾಜನಗರವೂ ಒಂದು. ಆದರೆ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುತ್ತಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಪ್ರತಿ ಬಾರಿಯೂ ಸಾವಿರಾರು ಕೋಟಿ ರೂ. ವಿಶೇಷ ಅನುದಾನವನ್ನು ನೀಡಲಾಗುತ್ತಿದೆ. ಈ ಬಗ್ಗೆ ಪ್ರಶ್ನೆ ಮೂಡಿದ್ದು, ಅಭಿವೃದ್ಧಿಯ ಚಿಂತೆ ಕಾಡುತ್ತಿತ್ತು. ಅಷ್ಟರೊಳಗೆ ಮಾದಪ್ಪ ವರ ಕೊಟ್ಟಿದ್ದು, ಮುಖ್ಯಮಂತ್ರಿ ಅವರ ರೂಪದಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇದರಿಂದ ಮ.ಬೆಟ್ಟದಲ್ಲಿ ಕ್ಯಾಬಿನೆಟ್ ಆಗುವುದರಿಂದ ಅಭಿವೃದ್ಧಿಗೆ ವಿಶೇಷ ಅನುದಾನ ಸಿಗಲಿದೆ. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಹಾಗೂ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಅವರ ಪಾತ್ರ ಅಪಾರ. ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಈ ಇಬ್ಬರು ಸಚಿವರು ಪಣ ತೊಟ್ಟಿದ್ದು, ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದು, ಅವರು ಸಹ ಆಸಕ್ತಿ ಹೊಂದಿದ್ದಾರೆ. ಕ್ಯಾಬಿನೆಟ್ ಬಳಿಕ ನಾನು ಕೈಗೊಂಡ ಯೋಜನೆಗಳ ಬಗ್ಗೆ ತಿಳಿಯಲಿದೆ. ಇದಕ್ಕೆ ಮಾದಪ್ಪನ ಆಶೀರ್ವಾದ ಇದೆ ಎಂದು ತಿಳಿಸಿದರು.

ಅಭಿವೃದ್ಧಿಯೊಂದೇ ಮಾರ್ಗ: ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯ ಕೊರತೆ, ಕೈಗಾರಿಕೆಗಳಿಲ್ಲದಿರುವುದು ಹಾಗೂ ಕೃಷಿಯಲ್ಲಿನ ಏಳುಬೀಳಿನಿಂದ ಸುಮಾರು 45 ಸಾವಿರ ಜನರು ಉದ್ಯೋಗವನ್ನು ಅರಸಿ ಗುಳೆ ಹೋಗಿದ್ದಾರೆ. ಚುನಾವಣಾ ವೇಳೆ ಹಾಗೂ ಹಬ್ಬ-ಹರಿದಿನಗಳಂದು ಗ್ರಾಮಕ್ಕೆ ಆಗಮಿಸುತ್ತಾರೆ. ಹಾಗಾಗಿ ಅಭಿವೃದ್ಧಿಯೊಂದೇ ಸಮಸ್ಯೆಯನ್ನು ಹೊಗಲಾಡಿಸುವ ಮಾರ್ಗವಾಗಿದೆ. ಜನರಿಗೆ ಉದ್ಯೋಗವನ್ನು ಒದಗಿಸುವ ಉದ್ದೇಶ ಹೊಂದಿದ್ದು, ಕೈಗಾರಿಕೆ ಸ್ಥಾಪನೆಯಾಗಬೇಕಿದೆ. ಆದರೆ ರಾಷ್ಟ್ರೀಯ ಹೆದ್ದಾರಿಯಾಗದಿರುವುದು ತೊಡಕಾಗಿ ಪರಿಣಮಿಸಿದೆ. ಆದರೂ ಈ ಬಗ್ಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.

ಯಾವುದೇ ಲೋಪವಾಗದಂತೆ ಕಾರ್ಯಕ್ರಮ ಆಯೋಜನೆ: ಸತ್ತೇಗಾಲದಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮ ಆಯೋಜನೆ ಸಂಬಂಧ ಶಾಸಕರು ಪ್ರತಿಕ್ರಿಯಿಸಿ, ಗ್ರಾಮದಲ್ಲಿ ಹಳೇ ವಿದ್ಯಾರ್ಥಿಗಳ ನೂತನ ಶಾಲಾ ಕಟ್ಟಡವನ್ನು ನಿರ್ಮಿಸಿರುವುದು ನಿಜಕ್ಕೂ ಇತರರಿಗೆ ಮಾದರಿ ಹಾಗೂ ಸ್ಫೂರ್ತಿದಾಯಕ. ಮುಖ್ಯಮಂತ್ರಿ ಅವರೇ ಆಗಮಿಸಿ ಉದ್ಘಾಟನೆಗೊಳಿಸುತ್ತಿರುವುದು ಯುವಕರಿಗೆ ಪ್ರೇರಣೆಯಾಗಿದ್ದು, ಸಂತಸವನ್ನು ಉಂಟು ಮಾಡಿದೆ. ಹಾಗಾಗಿ ಜಿಲ್ಲಾಡಳಿತ ಹಾಗೂ ಶಾಸಕ ಎ.ಆರ್ ಕೃಷ್ಣಮೂರ್ತಿ ಅವರೊಂದಿಗೆ ಸಂಪೂರ್ಣ ಜವಬ್ದಾರಿಯನ್ನು ವಹಿಸಿ ಯಾವುದೇ ಲೋಪವಾಗದಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಬಾರಿ ಜಿಲ್ಲೆಗೆ ಆಗಮಿಸಿದ್ದು, ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಳಚಿದ್ದಾರೆ. ಇದೀಗ ಮತ್ತೆ ಜಿಲ್ಲೆಗೆ ಆಗಮಿಸುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net