ಕೃಷಿ ವಿವಿ ಮೈಸೂರು ಪ್ರಾಂತ್ಯಕ್ಕೆ ವರದಾನ: ನೂತನ ವಿಶ್ವವಿದ್ಯಾನಿಲಯಕ್ಕೆ ಸಚಿವ ಸಂಪುಟ ಗ್ರೀನ್ ಸಿಗ್ನಲ್

Cabinet gives green signal to new university Mandya
Published on

ಮಂಡ್ಯ: ಜಿಲ್ಲೆಯ ಜನರ ಹಲವು ದಶಕದ ಕನಸಾಗಿದ್ದ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭಕ್ಕೆ ರಾಜ್ಯ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಇದರೊಂದಿಗೆ ಮೈಸೂರು ಪ್ರಾಂತ್ಯಕ್ಕೆ ದೊಡ್ಡ ಕೊಡುಗೆ ಸಿಕ್ಕಂತಾಗಿದೆ.

ಕೃಷಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಬಜೆಟ್‌ನಲ್ಲಿ ಮಂಡ್ಯ ತಾಲೂಕು ವಿ.ಸಿ ಫಾರ್ಮ್‌ನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಈಗ ಸಚಿವ ಸಂಪುಟವೂ ಅಸ್ತು ಎಂದಿದೆ.

ಮಂಡ್ಯದಲ್ಲಿ ಏಳನೇ ವಿವಿ: ರಾಜ್ಯದಲ್ಲಿ ಪ್ರಸ್ತುತ ಆರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯವಿದೆ. ಈಗ ರಾಜ್ಯಸರ್ಕಾರದ ಅನುಮೋದನೆ ಸಿಕ್ಕಿರುವುದರಿಂದ ಮಂಡ್ಯದಲ್ಲಿ ಏಳನೇ ವಿವಿ ಪದಾರ್ಪಣೆ ಮಾಡಲಿದೆ. ಗಮನಾರ್ಹ ವಿಷಯವೆಂದರೆ ರಾಜ್ಯದ ಕಂದಾಯ ವಿಭಾಗದಲ್ಲಿ ಮೈಸೂರನ್ನು ಹೊರತುಪಡಿಸಿ ಉಳಿದೆಡೆ ಒಂದಕ್ಕಿಂತ ಹೆಚ್ಚು ಕೃಷಿ ಮತ್ತು ತೋಟಗಾರಿಕೆ ಹಾಗೂ ವೈದ್ಯಕೀಯ ವಿವಿ ಇದೆ.

ಈ ಹಿನ್ನೆಲೆಯಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಂಡ್ಯ ವಿ.ಸಿ.ಫಾರ್ಮ್‌ನಲ್ಲಿರುವ ಕೃಷಿ ಮಹಾವಿದ್ಯಾನಿಲಯವನ್ನು ಮೇಲ್ದರ್ಜೆಗೇರಿಸಿ ಪ್ರತ್ಯೇಕ ವಿವಿ ಮಾಡಲು ಮಹತ್ವದ ಯೋಜನೆ ರೂಪಿಸಿದರು. ಅದರಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಸಕಾರಾತ್ಮಕ ಸ್ಪಂದನೆಯೂ ಸಿಕ್ಕಿತು. ಬಜೆಟ್‌ನಲ್ಲಿ ಘೋಷಣೆಯಾದ ಬಳಿಕ ಮುಂದಿನ ಹಂತದಲ್ಲಿ ವಿವಿ ಸ್ಥಾಪನೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚನೆ ಮಾಡಲಾಗಿತ್ತು.

ಬೆಂಗಳೂರು ಕೃಷಿ ವಿವಿಯ ವಿಶ್ರಾಂತ ಕುಲಪತಿ ಡಾ.ಎಸ್.ರಾಜೇಂದ್ರಪ್ರಸಾದ್ ಅಧ್ಯಕ್ಷತೆಯಲ್ಲಿ ಸದಸ್ಯರಾಗಿ ಡಾ.ಪಿ.ಎಲ್.ಪಾಟೀಲ, ಡಾ.ಎ.ಬಿ.ಪಾಟೀಲ, ಡಾ.ಕೆ.ಎಂ.ಹರಿಣಿಕುಮಾರ, ಚಂದ್ರಹಾಸ ಜಿ.ತಾಳೂಕರ ಮತ್ತು ಸದಸ್ಯ ಸಂಚಾಲಕ ಡಾ.ವಿ.ಆರ್.ಕಿರೇಸೂರ ತಂಡ ಕೃಷಿ ವಿವಿ ಪ್ರಾರಂಭಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸೌಕರ್ಯ, ಆಗಬೇಕಿರುವ ಕೆಲಸ ಸೇರಿದಂತೆ ಹಲವು ವಿಷಯದ ಬಗ್ಗೆ ವಿಸ್ತೃತ ಮಾಹಿತಿ ಕಲೆ ಹಾಕಿತ್ತು. ಜತೆಗೆ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪೂರಕವಾಗುವಂತೆ 2024 ಜುಲೈನಲ್ಲಿ 131 ಪುಟದ ವರದಿಯನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸಿತ್ತು.

ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ: ತಜ್ಞರ ಸಮಿತಿ ಸಲ್ಲಿಸಿದ ವರದಿಯಲ್ಲಿ ಮಹತ್ವದ ಅಂಶವನ್ನು ಸೇರಿಸಲಾಗಿತ್ತು. ಅದರಲ್ಲಿ ಮುಖ್ಯವಾಗಿ ಗಮನಿಸುವುದಾದರೆ ಮೈಸೂರು ಭಾಗದ ಜಿಲ್ಲೆಗಳು ಅಂದರೆ ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರದಲ್ಲಿ ವಿವಿಧ ಆಹಾರ ಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಒಟ್ಟಾರೆ 20 ಲಕ್ಷ ಹೆಕ್ಟೇರ್ ಕೃಷಿ ಭೂಮಿಯನ್ನು ಮೈಸೂರು ಪ್ರಾಂತ್ಯ ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಕಂದಾಯ ವಿಭಾಗದಲ್ಲಿ ಪ್ರತ್ಯೇಕ ವಿವಿ ಸ್ಥಾಪನೆ ಮಾಡುವುದರಿಂದ ರಾಜ್ಯಾದ್ಯಂತ ಸಮಾನತೆ ಸಾಧಿಸಿದಂತಾಗುತ್ತದೆ. ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಇದಕ್ಕೆ ವಿವರಣೆಯನ್ನು ನೀಡಿದ್ದ ಸಮಿತಿ, ರಾಜ್ಯದಲ್ಲಿ ವಿವಿಧ ವಿವಿಯಲ್ಲಿ ಸ್ನಾತಕ ಪದವಿಗಳಿಗೆ 4 ಸಾವಿರ ಸೀಟುಗಳು ಮಂಜೂರಾಗಿವೆ. ಆದರೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಬರೋಬರಿ 1,15 ಲಕ್ಷ ಅಭ್ಯರ್ಥಿಗಳು. ಈ ಹಿನ್ನೆಲೆಯಲ್ಲಿ ಹೊಸದಾಗಿ ವಿವಿ ಪ್ರಾರಂಭಿಸುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವುದರ ಜತೆಗೆ ಅವರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದಿತ್ತು.

ವಿ.ಸಿ ಫಾರ್ಮ್ ಕ್ಷೇತ್ರ ಸುಮಾರು 256.12 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಇದರಲ್ಲಿ ಬಿತ್ತನೆಗೆ ಯೋಗ್ಯವಾದ ಸ್ಥಳ 191.90 ಹೆಕ್ಟೇರ್ ಇದೆ. ವಿವಿಧ ಸಂಶೋಧನಾ ಯೋಜನೆಗಳಿಗೆ 54.48 ಹೆಕ್ಟೇರ್ ಪ್ರದೇಶ, ವಾರ್ಷಿಕ ಬೆಳೆಗಳಿಗೆ ಫಾರ್ಮ್ ಶಾಖೆಗಳು ನಿರ್ವಹಿಸುವ ಸ್ಥಳ 55 ಹೆಕ್ಟೇರ್, ತೋಟಗಾರಿಕೆ/ಸಂಕೀರ್ಣ ಬೆಳೆ 46.61 ಹೆಕ್ಟೇರ್, ಕೃಷಿ ವಿಶ್ವವಿದ್ಯಾನಿಲಯಕ್ಕೆ 26.32 ಹೆಕ್ಟೇರ್ ಹಾಗೂ ಕೆವಿಕೆಗೆ 9.49 ಹೆಕ್ಟೇರ್ ಪ್ರದೇಶ ಹಂಚಿಕೆಯಾಗಬಹುದು. ಒಟ್ಟಾರೆ ನೂತನ ವಿವಿಯನ್ನು ಸ್ಥಾಪಿಸಲು ಅಗತ್ಯವಿರುವ ಭೂಮಿ ಲಭ್ಯವಿದೆ. ಪ್ರಸ್ತುತ 162 ಕೋಟಿ ರೂ ಮೌಲ್ಯದ ಸ್ಥಿರಾಸ್ಥಿ ಮತ್ತು 45 ಕೋಟಿ ರೂ ಮೌಲ್ಯದ ಚರಾಸ್ಥಿ ಇದೆ ಎಂದು ವರದಿ ಸಲ್ಲಿಸಲಾಗಿತ್ತು.

207 ಕೋಟಿ ರೂ ಅವಶ್ಯ: ವಿವಿಗೆ ಅಗತ್ಯವಿರುವಂತೆ ಶಾಸನಾತ್ಮಕ ಅಧಿಕಾರಿಗಳು, ಬೋದಕ ಹುದ್ದೆ, ಆಡಳಿತಾತ್ಮಕ ಹುದ್ದೆ, ಲೆಕ್ಕ ನಿರ್ವಹಣಾ ಹುದ್ದೆ, ತಾಂತ್ರಿಕ ಹುದ್ದೆ, ಗ್ರಂಥಾಲಯ ನಿರ್ವಹಣೆ ಸೇರಿದಂತೆ 797 ಹುದ್ದೆ ಅವಶ್ಯಕತೆ ಇದೆ. ಇದರಲ್ಲಿ ಈಗಾಗಲೇ 308 ಹುದ್ದೆ ಲಭ್ಯವಿದೆ. ವಾರ್ಷಿಕ 56.65 ಕೋಟಿ ರೂ ಆಯವ್ಯಯದ ಬೇಡಿಕೆ ಇರಲಿದೆ. ಅಂತೆಯೇ ಬಾಕಿ ಇರುವ ಹುದ್ದೆಗಳನ್ನು ನೇರ ನೇಮಕಾತಿ, ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ಹೊಸ ವಿವಿಗೆ ವರ್ಗಾವಣೆ, ಗುತ್ತಿಗೆ, ಸೇವೆಗಳ ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಬೇಕು. ಪ್ರಮುಖವಾಗಿ ಸ್ನಾತಕೋತ್ತರ ಶಿಕ್ಷಣವನ್ನು ಆರಂಭಿಸಲು ಬೋಧಕ ಹಾಗೂ ಬೋಧಕೇತರ ಹುದ್ದೆ ನೇಮಕಾತಿ ಅವಶ್ಯಕತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಹೊಸ ವಿವಿ ಸ್ಥಾಪನೆ ಹಾಗೂ ನಿರ್ವಹಣೆಗೆ ಬೇಕಿರುವ ಅನುದಾನದ ಮಾಹಿತಿಯನ್ನು ಒದಗಿಸಲಾಗಿತ್ತು. ಅದರಂತೆ ಆಡಳಿತಾತ್ಮಕ ಕಟ್ಟಡ ನಿರ್ಮಾಣ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ 207 ಕೋಟಿ ರೂ ಅವಶ್ಯಕತೆ ಇರಲಿದೆ. ಇದಲ್ಲದೆ ಅಧಿಕಾರಿ ಮತ್ತು ನೌಕರರ ವೇತನ ಹಾಗೂ ಭತ್ಯೆಗೆ ವಾರ್ಷಿಕ 56.64 ಕೋಟಿ ರೂ, ಹೊರಗುತ್ತಿಗೆ ನೌಕರರ ವೇತನ 5 ಕೋಟಿ ರೂ, ಭದ್ರತೆ/ಸ್ವಚ್ಛತೆ ಹಾಗೂ ಇತರೆ ಸೇವೆಗಳಿಗೆ 2.50 ಕೋಟಿ ರೂ, ಯಂತ್ರೋಪಕರಣಗಳ ನಿರ್ವಹಣೆ, ಗ್ರಂಥಾಲಯ ಸೇರಿದಂತೆ ಮೂಲ ಸೌಕರ್ಯ ನಿರ್ವಹಣೆಗೆ 6 ಕೋಟಿ ರೂ, ವಾಹನಗಳ ಇಂಧನ ವೆಚ್ಚ 25 ಲಕ್ಷ ರೂ, ಕಟ್ಟಡಗಳ ನಿರ್ವಹಣೆಗೆ 4 ಕೋಟಿ ರೂ ಸೇರಿದಂತೆ ಒಟ್ಟು 105.25 ಕೋಟಿ ರೂ ಬೇಕಿದೆ. ಇದರಲ್ಲಿ ವಿದ್ಯಾರ್ಥಿಗಳ ವಿವಿಧ ಶುಲ್ಕ, ಬೆಳೆಗಳ ಉತ್ಪನ್ನ ಮಾರಾಟ, ಬೀಜೋತ್ಪಾದನೆ, ತಾಂತ್ರಿಕತೆಗಳ ವಾಣಿಜ್ಯೀಕರಣ ಸೇರಿದಂತೆ ಆಂತರಿಕ ಸಂಪನ್ಮೂಲವಾಗಿ 8 ಕೋಟಿ ರೂ ಸಿಗಲಿದೆ. ಪ್ರಮುಖವಾಗಿ ಬೆಂಗಳೂರು ವಿವಿ ಹಾಗೂ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ಚರಾಸ್ಥಿ, ಆಯವ್ಯಯವನ್ನು ನೂತನ ವಿವಿಗೆ ಮರು ಹಂಚಿಕೆ ಮಾಡಬಹುದೆನ್ನುವ ಸಲಹೆ ನೀಡಿತ್ತು.

ಮಂಡ್ಯದಲ್ಲಿ ಸಮಗ್ರ ಕೃಷಿ ವಿವಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆಯುವ ಮೂಲಕ ದಶಕದ ಕನಸು ಸಾಕಾರಗೊಂಡಿದೆ. ನೂತನ ವಿವಿ ಸ್ಥಾಪನೆಯಿಂದಾಗಿ ರೈತರ ಅನೇಕ ಸಮಸ್ಯೆಗಳಿಗೆ ವಿಶೇಷವಾಗಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಒಂದೇ ಮೂಲದಿಂದ ಪರಿಹಾರ ದೊರಕಿಸಬೇಕೆಂಬ ಆಶಯದೊಂದಿಗೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ವಿವಿ ಪ್ರಾರಂಭಕ್ಕೆ ಅವಕಾಶ ಮಾಡಿಕೊಟ್ಟ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹದ್ಯೋಗಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಎನ್.ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net