ಸಚಿವ ಸಂಪುಟ ವಿಸ್ತರಣೆಯದ್ದೇನು ಕಥೆ?: ಅ.2ಕ್ಕೆ ಸಿಎಂ ದೆಹಲಿಗೆ ಪ್ರಯಾಣ ಸಾಧ್ಯತೆ

BSY
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅ.2ರಂದು ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ. ಸಚಿವ ಸಂಪುಟ ಕುರಿತು ವರಿಷ್ಠರೊಂದಿಗೆ ರ್ಚಚಿಸುವುದೇ ಭೇಟಿಯ ಮುಖ್ಯ ಉದ್ದೇಶವಾಗಿದೆ. ಗುರುವಾರದ ಸಚಿವ ಸಂಪುಟ ಸಭೆಯ ಬಳಿಕ ದೆಹಲಿ ಯಾತ್ರೆ ಬಗ್ಗೆ ಸ್ಪಷ್ಟತೆ ಸಿಗಲಿದೆ. ಸಚಿವ ಸಂಪುಟಕ್ಕೆ ಸೇರಿಸುವವರ ಹೆಸರು ಪಡೆದಿದ್ದ ವರಿಷ್ಠರು ಸಂದೇಶ ಕಳುಹಿಸುವ ಬದಲಿಗೆ ಬನ್ನಿ ರ್ಚಚಿಸೋಣವೆಂದು ಮತ್ತೊಮ್ಮೆ ಬಿಎಸ್​ವೈ ಗೆ ಬುಲಾವ್ ನೀಡಿದ್ದಾರೆ. ವಿಸ್ತರಣೆಯೋ ಅಥವಾ ಪುನಾರಚನೆಯೋ? ಎನ್ನುವುದು ನಿಕ್ಕಿಯಾಗಿಲ್ಲ. ವಿಸ್ತರಣೆಯತ್ತ ಬಿಎಸ್​ವೈ ಒಲವಿದ್ದರೆ, ದೆಹಲಿ ನಾಯಕರ ಚಿಂತನೆ ಬೇರೆಯೇ ಇದ್ದಂತಿದೆ.

ಇಲ್ಲದಿದ್ದರೆ ಮತ್ತೊಂದು ಬಾರಿ ದೆಹಲಿ ಬರಲು ವರಿಷ್ಠರು ಹೇಳುತ್ತಿದ್ದಿಲ್ಲ. ವಿಸ್ತರಣೆ ಆಗುವುದಾದರೆ 2 ಹೆಸರುಗಳು ಪಕ್ಕಾ ಆಗಿದ್ದು, ಇನ್ನೆರಡು ಹೆಸರುಗಳಲ್ಲಿ ಹೊಯ್ದಾಟವಿದೆ. ಖುದ್ದು ಚರ್ಚೆಯಲ್ಲಿ ಈ ಅಂಶ ಇತ್ಯರ್ಥವಾಗುವ ನಿರೀಕ್ಷೆಯಿದೆ. ಅನಿವಾರ್ಯವಾದರೆ ಪುನಾರಚನೆ ಕಡೆಗೆ ಹಿರಿಯ ನಾಯಕರು ವಾಲಬಹುದಾಗಿದೆ. ಮೂವರು ಸಚಿವರನ್ನು ಕೈಬಿಟ್ಟರೆ ಖಾಲಿ ಸ್ಥಾನಗಳ ಸಂಖ್ಯೆ 9ಕ್ಕೆ ಏರಲಿದೆ. ಈ ಪೈಕಿ ಮೂವರು ವಲಸಿಗರು ಹಾಗೂ ಪಕ್ಷ ಮೂಲದ 4 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು. ಬಾಕಿ 2 ಸ್ಥಾನಗಳನ್ನು ಖಾಲಿ ಉಳಿಸುವ ಚಿಂತನೆ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: 

ಉಪ ಚುನಾವಣೆ ಅಡ್ಡಿ ?: ಕಳೆದ ಬಾರಿ ಬಿಎಸ್​ವೈ ಭೇಟಿ ಬಳಿಕ ಇನ್ನೇನು ಸಚಿವರಾಗಲಿದ್ದೇವೆ ಎಂದುಕೊಂಡಿದ್ದರು. ಆದರೆ ವಿಧಾನ ಮಂಡಲದ ಅಧಿವೇಶನ ತೊಡಕಾಯಿತು. ಇದೀಗ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭೆ ಕ್ಷೇತ್ರಗಳಿಗೆ ಘೋಷಿಸಿದ ಉಪ ಚುನಾವಣೆ ಅಡ್ಡಿಯಾಗಲಿದೆ ಎಂಬ ಆತಂಕ ಆಕಾಂಕ್ಷಿಗಳಲ್ಲಿ ಮನೆ ಮಾಡಿದೆ. ಉಪ ಚುನಾವಣೆ ನಡೆಯಲಿರುವ ಜಿಲ್ಲೆಯಲ್ಲಿ ಮಾತ್ರ ನೀತಿ ಸಂಹಿತೆ ಜಾರಿಯಾಗಿದೆ. ಇದು, ಸಚಿವ ಸಂಪುಟ ವಿಸ್ತರಣೆಗೆ ತೊಡಕಾಗದು ಎಂದು ಪಕ್ಷದ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮಾದರಿ ಚುನಾವಣೆ ನೀತಿ ಸಂಹಿತೆಗಿಂತ ವರಿಷ್ಠರ ಯೋಚನಾ ಲಹರಿಯೇ ಸಚಿವ ಪದವಿ ಮೇಲೆ ಕಣ್ಣಿಟ್ಟವರನ್ನು ಚಿಂತೆಗೀಡು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net