

ಮೈಸೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿ ಬಿಡುಗಡೆ ವಿಚಾರದಲ್ಲಿ ಸಚಿವ ಸಂಪುಟದ ನಿರ್ಧಾರವೇ ಸುಪ್ರೀಂ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಆದ ಮೇಲೆ ಮತ್ತೆ ಯಾರ ಮಾತೂ ಬರುವುದಿಲ್ಲ ಎಂದರು.
ಎಐಸಿಸಿ, ರಾಹುಲ್ ಗಾಂಧಿ ಸೇರಿದಂತೆ ಎಲ್ಲರೂ ಜಾತಿಗಣತಿ ವರದಿ ಬಿಡುಗಡೆ ಮಾಡುವಂತೆ ಹೇಳಿದ್ದಾರೆ. ಸಚಿವ ಸಂಪುಟದಲ್ಲಿ ಈ ಕುರಿತು ತೀರ್ಮಾನ ಆಗುತ್ತದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಹಾಗೂ ಕ್ಯಾಬಿನೆಟ್ ಎಲ್ಲರೂ ವರದಿಯ ಪರವಾಗಿಯೇ ಇದ್ದಾರೆ. ಕೆಲವರು ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ ಎಂದರು.
ಭ್ರೂಣಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಇರುವ ಸಮಿತಿಯನ್ನು ಕ್ರಿಯಾಶೀಲಗೊಳಿಸಲಾಗಿದೆ. ಜಿಲ್ಲಾದ್ಯಂತ ಪರಿಶೀಲನೆ ಮಾಡಿ ಸಮಗ್ರ ವರದಿ ಕೊಡಲು ಸೂಚಿಸಲಾಗಿದೆ. ಯಾರು ತಮ್ಮ ಜವಾಬ್ದಾರಿ ನಿರ್ವಹಿಸಿಲ್ಲ ಎಂಬುದನ್ನು ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕಾನೂನು ಪ್ರಕಾರ ಭ್ರೂಣಹತ್ಯೆ ಅಪರಾಧ. ಅದರಲ್ಲೂ ಹೆಣ್ಣುಭ್ರೂಣ ಹತ್ಯೆ ದೊಡ್ಡ ಅಪರಾಧ. ಕಾನೂನಿನ ಚೌಕಟ್ಟಿನಲ್ಲಿ ಅದಕ್ಕೊಂದು ತಂಡ ಇದೆ. ಆ ತಂಡ ನಿರಂತರವಾಗಿ ಖಾಸಗಿ ಆಸ್ಪತ್ರೆಗಳು, ವೈದ್ಯರ ಮೇಲೆ ನಿಗಾ ವಹಿಸಿ ವರದಿ ಕೊಡಬೇಕಿತ್ತು. ಇತ್ತೀಚಿಗೆ ಹೆಣ್ಣು ಭ್ರೂಣಗಳ ಹತ್ಯೆ ಹೆಚ್ಚಾಗಿದೆ. ಹೆಣ್ಣುಭ್ರೂಣ ಹತ್ಯೆಯ ವಿಚಾರವಾಗಿ ಮುಖ್ಯಮಂತ್ರಿ ಸಹ ಬಹಳ ಗಂಭೀರವಾಗಿದ್ದಾರೆ. ಯಾರು ತಪ್ಪಿತಸ್ಥರು ಇದ್ದಾರೋ, ಅವರ ವಿರುದ್ಧ ಕಾನೂನು ಕ್ರಮ ಆಗಬೇಕೆಂದು ಸಿಎಂ ಹೇಳಿದ್ದಾರೆ. ಆ ಪ್ರಕಾರ ಕ್ರಮ ವಹಿಸಲಾಗುವುದು ಎಂದರು.
ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ. ಒಂದು ರಾಜ್ಯದಲ್ಲಿ ಸ್ಥಳೀಯ ಪಕ್ಷ ಅಧಿಕಾರ ಹಿಡಿಯಬಹುದು. ಎಲ್ಲ ಕಡೆಯೂ ತೀವ್ರ ಸ್ಪರ್ಧೆ ಇದೆ. ಮುಂಬರುವ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಲ್ಲ. ಸ್ಥಳೀಯ ವಿಚಾರಗಳು ಬೇರೆ ಬೇರೆ ಇರುತ್ತವೆ ಎಂದರು.