ದಾಖಲೆಗಳಲ್ಲಿ ಕೊಡವ ಪದ ಬಳಕೆಗೆ ಕ್ಯಾಬಿನೆಟ್ ಅನುಮೋದನೆ: ಸಿಎನ್‌ಸಿ ಶ್ಲಾಘನೆ

N.U.NACHAPPA
Published on

ಮಡಿಕೇರಿ: ಸರ್ಕಾರಿ ದಾಖಲೆಗಳಲ್ಲಿ ಕೊಡವರನ್ನು ಕೊಡವ ಎಂದು ನಮೂದಿಸುವ ಕುರಿತು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಸರ್ಕಾರದ ಈ ಕ್ರಮಕ್ಕೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಶ್ಲಾಘನೆ ವ್ಯಕ್ತಪಡಿಸಿದೆ.


ಈ ಸಂಬಂಧ ಪತ್ರಿಕಾ ಪ್ರಕಟಣೆಯ ನೀಡಿರುವ ಸಿಎನ್‌ಸಿ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ಕಳೆದ ೧೫ ವರ್ಷಗಳ ಸಿಎನ್‌ಸಿಯ ಸತತ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಕೊಡವರ ಕುಲ ಸಮಸ್ಯೆಗೆ ಸಂಬಂಧಿಸಿದ ಅತಿ ಪ್ರಧಾನ ಬೇಡಿಕೆಗಳಲ್ಲಿ ಒಂದಾದ ಕೊಡವ ಪದವನ್ನು ಕ್ಯಾಬಿನೆಟ್ ನಿರ್ಣಯದ ಮೂಲಕ ಅಧಿಕೃತಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ. ಕೊಡವ ಎನ್ನುವ ಉಜ್ವಲ ಶಾಸ್ತ್ರೀಯ ನಾಮಕ್ಕೆ ಶಾಸನಬದ್ಧ ಸ್ಥಿರೀಕರಣ ದೊರೆತ್ತಿದ್ದು, ಇದು ಸಿಎನ್‌ಸಿಯ ಮಹತ್ವದ ಮೈಲುಗಲ್ಲಾಗಿದೆ ಎಂದು ತಿಳಿಸಿದರು.


ಕೊಡವರನ್ನು ಕೊಡವ ಎಂದು ನಮೂದಿಸದೆ ಕೊಡಗರು ಎಂದು ನಮೂದಿಸುವ ಮೂಲಕ ಕೊಡವ ಬುಡಕಟ್ಟು ಆದಿಮ ಸಂಜಾತ ಮೂಲನಿವಾಸಿಗಳ ಅಸ್ತಿತ್ವದ ಬಗ್ಗೆ ಆತಂಕ ಮೂಡಿಸಲಾಗುತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಿಎನ್‌ಸಿ ಸಂಘಟನೆ ೨೦೦೮ ರಿಂದಲೇ ಹೋರಾಟವನ್ನು ಆರಂಭಿಸಿತು. ಕೊಡವರ ಭಾವನೆಯನ್ನು ಅರ್ಥ ಮಾಡಿಕೊಂಡು ನಮ್ಮ ಬೇಡಿಕೆಯನ್ನು ಈಡೇರಿಸುವ ಮೂಲಕ ನ್ಯಾಯ ಒದಗಿಸುವ ಕೆಲಸವನ್ನು ಆಡಳಿತ ವ್ಯವಸ್ಥೆಗಳು ಇಲ್ಲಿಯವರೆಗೆ ಮಾಡಿರಲಿಲ್ಲ. ಆದರೆ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಮುಖ್ಯಮಂತ್ರಿಗಳನ್ನು ಭೇಟಿಯಾದ ನಂತರ ನಡೆದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಕೊಡವರನ್ನು ಕೊಡವ ಎಂದು ನಮೂದಿಸುವ ಕುರಿತು ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.


ಇದು ನಮಗೆ ಸಿಕ್ಕ ದೊಡ್ಡ ಜಯವಾಗಿದ್ದು, ಇದಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಎ.ಎಸ್.ಪೊನ್ನಣ್ಣ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರುಗಳಾಗಿದ್ದ ಡಾ.ದ್ವಾರಕನಾಥ್, ಡಾ.ಜಯಪ್ರಕಾಶ್ ಹೆಗ್ಡೆ, ಹೈಕೋರ್ಟ್‌ನ ನ್ಯಾಯಮೂರ್ತಿ ಕೃ?್ಣ ದೀಕ್ಷಿತ್, ನ್ಯಾಯವಾದಿ ಬಲ್ಲಚಂಡ ಬೆಳ್ಳಿಯಪ್ಪ ಹಾಗೂ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ಅವರ ಸುದೀರ್ಘ ಹೋರಾಟದಲ್ಲಿ ತಾಳ್ಮೆಯಿಂದ ನಿರಂತರವಾಗಿ ಕೈಜೋಡಿಸಿದ ಸಿಎನ್‌ಸಿ ಸ್ವಯಂ ಸೇವಕರು, ಅಭಿಮಾನಿಗಳು, ಪರೋಕ್ಷ ಮತ್ತು ನೇರವಾಗಿ ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net