ಹೆಬ್ರಿ ಹೋಬಳಿ ರಚನೆಗೆ ಸಚಿವ ಸಂಪುಟ ಅನುಮೋದನೆ

MLA Sunil Kumar
Published on

ಕಾರ್ಕಳ: ಹೆಬ್ರಿ ಹೋಬಳಿ ರಚನೆ ಬಗ್ಗೆ ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಕಾರ್ಕಳ ತಾಲೂಕಿನಿಂದ ಬೇರ್ಪಟ್ಟು ಹೆಬ್ರಿಯು ಪೂರ್ಣ ಪ್ರಮಾಣದ ತಾಲೂಕಾಗಿ ಘೋಷಣೆ ಆಗಿ ವರ್ಷಗಳಾದರೂ ಹೋಬಳಿ ಘೋಷಣೆ ಆಗದೇ ಆಡಳಿತಾತ್ಮಕ ಸಮಸ್ಯೆಗಳು ತಲೆದೋರುತ್ತಿದ್ದು, ಈ ನಿಟ್ಟಿನಲ್ಲಿ ಸಚಿವರಾಗಿರುವ ಕ್ಷೇತ್ರದ ಶಾಸಕ ಸುನೀಲ್‌ಕುಮಾರ್ ಪ್ರಯತ್ನದಿಂದಾಗಿ ಹೋಬಳಿ ರಚನೆಗೆ ಕ್ರಮ ಕೈಗೊಳ್ಳಲಾಗಿದೆ.
ತಾಲೂಕು ಕಚೇರಿ ಆರಂಭ ಆಗಿದ್ದರೂ ಹೆಚ್ಚಿನ ಗ್ರಾಮಗಳು ಅಜೆಕಾರು ಹೋಬಳಿ ವ್ಯಾಪ್ತಿಯಲ್ಲಿವೆ. ಹೆಬ್ರಿ ತಾಲೂಕಿನ ಸಾರ್ವಜನಿಕರು ಕಂದಾಯ ಇಲಾಖೆಯ ಸೇವೆ ಪಡೆಯಲು ಅಜೆಕಾರು ನಾಡ ಕಚೇರಿಗೆ ಬಂದು ಅರ್ಜಿ ಸಲ್ಲಿಸಬೇಕಾಗಿತ್ತು. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿತ್ತು. ಅಲ್ಲದೆ ಎರಡೂ ಕಡೆ ಒಬ್ಬರೇ ಕಂದಾಯ ನಿರೀಕ್ಷಕರು ಕರ್ತವ್ಯ ನಿರ್ವಹಿಸಬೇಕಾಗಿತ್ತು.
ಈ ಸಮಸ್ಯೆಗಳನ್ನು ಮನಗಂಡು ಸಚಿವ ವಿ. ಸುನೀಲ್ ಕುಮಾರ್ ಅವರು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಮಾಡಿಕೊಂಡ ಮೇರೆಗೆ ಮಂಗಳವಾರ ಸಚಿವ ಸಂಪುಟ ಸಭೆ ಅನುಮೋದನೆಗಾಗಿ ಕಡತವನ್ನು ಇರಿಸಲಾಗಿತ್ತು.

ಹೋಬಳಿ ರಚನೆ ಬಗ್ಗೆ ಶೀಘ್ರ ಸರ್ಕಾರಿ ಆದೇಶ ಜಾರಿ ಆಗಲಿದೆ. ನಂತರ ಹೆಬ್ರಿ ತಾಲೂಕು ಕೇಂದ್ರದಲ್ಲಿಯೇ ಕಂದಾಯ ಸೇವೆಗಳು ಆರಂಭವಾಗಲಿದೆ. ಹೆಬ್ರಿ ಕೇಂದ್ರ ಸ್ಥಾನಕ್ಕೆ ಕಂದಾಯ ನಿರೀಕ್ಷಕ ಹಾಗೂ ಇನ್ನಿತರ ಹುದ್ದೆಗಳು ಸೃಷ್ಟಿಯಾಗಲಿವೆ. ಇದರಿಂದ ತಾಲೂಕಿನ ಸಾರ್ವಜನಿಕರಿಗೆ ತ್ವರಿತವಾಗಿ ಮತ್ತು ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಪಡೆಯಲು ಅನುಕೂಲವಾಗಲಿದೆ.| ಸುನೀಲ್‌ಕುಮಾರ್ಇಂಧನ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net