

ಬೆಂಗಳೂರು: ರಾಜಧಾನಿಯ ಸಮಗ್ರ ಅಭಿವೃದ್ಧಿ ಮುನ್ನೋಟವನ್ನು ಒಳಗೊಂಡ 3 ಹಂತದ ಆಡಳಿತ ವ್ಯವಸ್ಥೆ ಹಾಗೂ ಗರಿಷ್ಠ 10 ಪಾಲಿಕೆಗಳನ್ನು ಒಳಗೊಂಡ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ’ಕ್ಕೆ ಸಚಿವ ಸಂಪುಟ ಸೋಮವಾರ ಒಪ್ಪಿಗೆ ನೀಡಿದ್ದು, ಮಂಗಳವಾರವೇ ವಿಧಾನಮಂಡಲದಲ್ಲಿ ಮಂಡಿಸಲು ರಾಜ್ಯ ಸರ್ಕಾರ ಉತ್ಸುಕತೆ ಹೊಂದಿದೆ.
ಬಿಬಿಎಂಪಿಯನ್ನು ವಿಭಜಿಸಿ 5 ಪಾಲಿಕೆಗಳನ್ನಾಗಿ ಮಾಡುವ ಹಿಂದಿನ ಪ್ರಸ್ತಾಪಕ್ಕೆ ಬದಲಾಗಿ ಮಹಾನಗರ ಎಲ್ಲ ಪ್ರದೇಶಗಳನ್ನು ಒಳಗೊಂಡಂತೆ ಸಮತೋಲಿತ ಅಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (ಜಿಬಿಎ) ರಚಿಸುವ ಪ್ರಸ್ತಾಪ ವಿಧೇಯಕ ಒಳಗೊಂಡಿದೆ. ಈ ಪ್ರಾಧಿಕಾರವನ್ನು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಚನೆಯಾಗಲಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ನಗರ ಪ್ರತಿನಿಧಿಸುವ ಸಂಪುಟದ ಇತರ ಸಚಿವರು, ಎಲ್ಲ ಶಾಸಕರು, ಮುಖ್ಯ ಆಯುಕ್ತರು ಸೇರಿದಂತೆ ಒಟ್ಟು 21 ಮಂದಿ ಸದಸ್ಯರಿರುತ್ತಾರೆ. ಈ ಸಮಿತಿಗೆ ಹೆಚ್ಚಿನ ಅಧಿಕಾರ ಇದ್ದು, ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಯಾ ಪಾಲಿಕೆಗಳಿಗೆ ಮಾರ್ಗದರ್ಶನ ಮಾಡಲಿದೆ. ಎರಡನೇ ಹಂತದಲ್ಲಿ ಪಾಲಿಕೆಗಳು ಕಾರ್ಯನಿರ್ವಹಿಸಲಿದ್ದು, ಮೂರನೇ ಹಂತದಲ್ಲಿ ವಾರ್ಡ್ ಸಭಾಗಳು ಅಸ್ತಿತ್ವಕ್ಕೆ ಬರಲಿವೆ.
ಮುಖ್ಯವಾಗಿ ಬೆಂಗಳೂರು ಅಭಿವೃದ್ಧಿ ಪ್ರತಿನಿಧಿಸುವ ಸರ್ಕಾರದ ಎಲ್ಲ ಸಂಸ್ಥೆಗಳು ಸಮನ್ವಯದೊಂದಿಗೆ ಕೆಲಸ ಮಾಡುವಂತೆ ಪ್ರಾಧಿಕಾರ ನಿರ್ದೇಶನ ನೀಡಲಿದೆ. ಹಿಂದಿನ ಪದ್ಧತಿಯನ್ನು ಬದಲಾಯಿಸಿ ಹೊಸತನ ಒಳಗೊಂಡ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತದೆ. ವಿಧೇಯಕದಲ್ಲಿ 25 ವಿಭಾಗಗಳಿದ್ದು 169 ಪುಟಗಳಲ್ಲಿ ಜಿಬಿಎಅನ್ನು ವಿಸ್ತೃತವಾಗಿ ವಿವರಿಸಲಾಗಿದೆ.
ಮೇಯರ್ ಅವಧಿ 5 ವರ್ಷ:
ಬಿಬಿಎಂಪಿಯ ಹಾಲಿ ಆಡಳಿತದಲ್ಲಿ ಪ್ರತೀ ವರ್ಷ ಮೇಯರ್, ಉಪಮೇಯರ್ ಆಯ್ಕೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಜಿಬಿಎ ವ್ಯವಸ್ಥೆಯಡಿ 5 ವರ್ಷಕ್ಕೆ ಪೂರ್ಣ ಅವಧಿಗೆ ಮೇಯರ್, ಉಪಮೇಯರ್ ಆಯ್ಕೆ ಮಾಡಲಾಗುತ್ತದೆ. ಕಾರ್ಪೋರೇಟರ್ ಆಗಿ ಆಯ್ಕೆಯಾಗುವ ವಯಸ್ಸನ್ನು 21 ವರ್ಷಕ್ಕೆ ನಿಗದಿ ಮಾಡಲಾಗಿದೆ.
ಕಾರ್ಪೊರೇಷನ್‌ಗಳ ಮುಖ್ಯಸ್ಥರು:
ಪ್ರತೀ ಕಾರ್ಪೊರೇಷನ್‌ಗಳ ವ್ಯಾಪ್ತಿಯಲ್ಲಿ ಅಲ್ಲಿನ ಮೇಯರ್, ಆಯುಕ್ತ, ಜಂಟಿ ಆಯುಕ್ತ, ಸ್ಥಾಯಿ ಸಮಿತಿಗಳು, ವಲಯ ಸಮಿತಿ, ವಾರ್ಡ್ ಸಮಿತಿ ಹಾಗೂ ಏರಿಯಾ ಸಭಾಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತದೆ.
ಸ್ಥಾಯಿಸಮಿತಿಗಳ ಸಂಖ್ಯೆ 6ಕ್ಕೆ ಮಿತಿ:
ಬಿಬಿಎಂಪಿಯಲ್ಲಿ 12 ಸ್ಥಾಯಿಸಮಿತಿಗಳಿದ್ದವು. ಈಗ ಹೊಸದಾಗಿ ರಚಿಸಲಾಗುವ ಪಾಲಿಕೆಗಳಲ್ಲಿ ತಲಾ 6 ಸ್ಥಾಯಿಸಮಿತಿಗಳು ಇರಲಿವೆ. ಆಡಳಿತ, ಶಿಕ್ಷಣ, ಸಾಮಾಜಿಕ ನ್ಯಾಯ; ಕಂದಾಯ, ಹಣಕಾಸು, ಆಡಿಟ್; ಸಾರ್ವಜನಿಕ ಕಾಮಗಾರಿಗಳು, ಇಂಜಿನಿಯರಿಂಗ್ ವಿಭಾಗ; ಸಾರ್ವಜನಿಕ ಆರೋಗ್ಯ, ವಿಪತ್ತು ನಿರ್ವಹಣೆ; ಅರಣ್ಯ, ಪರಿಸರ, ಕೆರೆಗಳು, ತೋಟಗಾರಿಕೆ ಹಾಗೂ ನಗರ ಯೋಜನೆ, ಮೂಲಸೌಕರ್ಯ ವಿಷಯಗಳಿಗೆ ಸ್ಥಾಯಿಸಮಿತಿಗಳು ಇರಲಿವೆ. ಪ್ರತೀ ಸಮಿತಿಯಲ್ಲಿ ಅಧ್ಯಕ್ಷರು ಸೇರಿ 5 ಸದಸ್ಯರಿರುತ್ತಾರೆ.
ಪ್ರತೀ ಪಾಲಿಕೆಯಿಂದ ಪ್ರತ್ಯೇ ತೆರಿಗೆ ಪದ್ಧತಿ:
ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಪಾಲಿಕೆಗಳ ವ್ಯಾಪ್ತಿಯಲ್ಲಿನ ಅಲ್ಲಿನ ನಿಯಮಗಳನ್ನು ಆಧರಿಸಿ ಆಸ್ತಿತೆರಿಗೆ ಪದ್ಧತಿ ಅಳವಡಿಸಿಕೊಳ್ಳಲಾಗುತ್ತದೆ. ಹೆಚ್ಚುವರಿಯಾಗಿ ಕರ ಸಂಗ್ರಹಿಸಲು ಬೇರೆ ಬೇರೆ ಸೆಸ್ ಹಾಕುವ ಅಧಿಕಾರ ಇರಲಿದೆ. ತಡವಾಗಿ ತೆರಿಗೆ ಪಾವತಿಸುವವರಿಗೆ ಶೇ.9 ದಂಡ ವಿಧಿಸಲಾಗುತ್ತದೆ.
ವಿಧೇಯಕದಲ್ಲಿನ ಮುಖ್ಯಾಂಶಗಳು:
* ಜಿಬಿಎ, ಕಾರ್ಪೊರೇಷನ್ ಹಾಗೂ ವಾರ್ಡ್ ಸಮಿತಿಯ 3 ಹಂತದ ಆಡಳಿತ ವ್ಯವಸ್ಥೆ ಇರಲಿದೆ.
* 10 ಲಕ್ಷ ಜನಸಂಖ್ಯೆಗೆ ಕಡಿಮೆ ಇಲ್ಲದಂತೆ ಗರಿಷ್ಠ ಹತ್ತು ಪಾಲಿಕೆ ಇರಲಿವೆ.
* ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಹಾಗೂ ಸರ್ಕಾರ ನಿಗದಿ ಮಾಡುವ ಇನ್ನಿತ ಪ್ರದೇಶಗಳು ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿರಲಿವೆ.
* ಎಲ್ಲ ಪಾಲಿಕೆಗಳು ಹಾಗೂ ಸರ್ಕಾರದ ಎಲ್ಲ ಸಂಸ್ಥೆಗಳು ಸಮನ್ವಯ ಮೂಲಕವೇ ಕೆಲಸ ನಿರ್ವಹಿಸಬೇಕು.
* ಮುಖ್ಯ ಆಯುಕ್ತರು ಜಿಬಿಎ ಆಡಳಿತ ನಿರ್ವಹಿಸಲಿದ್ದು, ಆಯಾ ಪಾಲಿಕೆಗಳಲ್ಲೂ ಹಿರಿಯ ಅಧಿಕಾರಿಗಳು ಜವಾಬ್ದಾರಿ ಹೊರಲಿದ್ದಾರೆ.
* ಜಿಬಿಎಗೆ ಅಧಿಕಾರಿಗಳನ್ನು ನೇಮಿಸುವ ಅಧಿಕಾರಿ ರಾಜ್ಯ ಸರ್ಕಾರಕ್ಕೆ ಇರಲಿದೆ.
* ಜಿಬಿಎ ಮುಖ್ಯಸ್ಥರ ಅಧ್ಯಕ್ಷತೆಯಲ್ಲಿ ಪ್ರತೀ 3 ತಿಂಗಳಿಗೊಮ್ಮೆ ಸಭೆ ಸೇರಿ ಆಡಳಿತ ವ್ಯವಸ್ಥೆ ಪರಾಮರ್ಶಿಸಲಿದೆ.
* ಹಣಕಾಸು ಸಂಪನ್ಮೂಲಕ್ಕಾಗಿ ಪ್ರತ್ಯೇಕವಾಗಿ ನಗರಾಭಿವೃದ್ಧಿ ಸಚಿವ ನೇತೃತ್ವದಲ್ಲಿ ‘ಆರ್ಥಿಕ ಅಭಿವೃದ್ಧಿ ಏಜೆನ್ಸಿ’ ರಚನೆಯಾಗಲಿದೆ.
* ಪಾಲಿಕೆಗಳ ಸ್ವತ್ತು ರಕ್ಷಣೆಗೆ ಗ್ರೇಟರ್ ಬೆಂಗಳೂರು ಭದ್ರತಾ ಪಡೆ ರಚಿಸಲಾಗುತ್ತದೆ.
* ಹಿರಿಯ ಅಧಿಕಾರಿಗಳು, ಪರಿಣಿತರು ಒಳಗೊಂಡ ‘ಹಣಕಾಸು ಸಲಹಾ ಸಮಿತಿ ರಚಿಸಲಾಗುತ್ತದೆ.
* ಆಸ್ತಿತೆರಿಗೆ ನಿಗದಿ, ಘನತ್ಯಾಜ್ಯ ನಿರ್ವಹಣೆ, ನೀರು, ವಿದ್ಯುತ್, ಮೇಲ್ಸೇತುವೆಗಳ ನಿರ್ಮಾಣ, ಬೃಹತ್ ರಸ್ತೆಗಳ ನಿರ್ಮಾಣವನ್ನು ಸಮಿತಿ ನಿರ್ಧರಿಸುತ್ತದೆ.
* ಬಜೆಟ್‌ಗೆ ಅನುಮೋದನೆ, ಪಾಲಿಕೆಗಳಿಗೆ ಹೆಚ್ಚಿನ ಅನುದಾನ ನಿಗದಿ ಅಧಿಕಾರ ಜಿಬಿಎಗೆ ಇರಲಿದೆ.
* ವಾರ್ಡ್ ಸಭಾಗಳಿಗೆ ಹೆಚ್ಚಿನ ಅಧಿಕಾರ, ಕೌನ್ಸಿಲರ್ ಮೂಲಕ ಸ್ಥಳೀಯ ಅಭಿವೃದ್ಧಿ ನಕ್ಷೆ ಸಲ್ಲಿಕೆಗೆ ಅವಕಾಶ.
* ನಗರದಲ್ಲಿರುವ ಎಲ್ಲ ಸರ್ಕಾರಿ ಸ್ವತ್ತುಗಳು ಪಾಲಿಕೆ ವ್ಯಾಪ್ತಿಗೆ ಬರಲಿವೆ. ನಾಗರಿಕ ಸೇವೆ ಲೀಸ್ ಆಧಾರದಲ್ಲಿ ಹಂಚಿಕೆ ಮಾಡುವ ಅಧಿಕಾರ ಮುಖ್ಯ ಆಯುಕ್ತರಿಗೆ ಇರಲಿದೆ.