ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಸಂಪುಟದ ಅನುಮೋದನೆ ಬಾಕಿ

New Joshi meeting new 23654
Published on

ಹುಬ್ಬಳ್ಳಿ : ಬಹುನಿರೀಕ್ಷಿತ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ 17,146 ಕೋಟಿ ರೂ. ಪರಿಷ್ಕೃತ ಡಿಪಿಆರ್ ಅನ್ನು ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಲಾಗಿದ್ದು, ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ದೊರೆತ ನಂತರ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಇಲ್ಲಿನ ರೈಲ್ ಸೌಧದಲ್ಲಿ ನೈಋತ್ಯ ರೈಲ್ವೆ ವಲಯದ ಹಿರಿಯ ಅಧಿಕಾರಿಗಳೊಂದಿಗೆ ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಕುರಿತು ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವ ಜೋಶಿ, ವನ್ಯಜೀವಿ ಮಂಡಳಿ ಹಾಗೂ ಅರಣ್ಯ ಇಲಾಖೆಗಳು ನೀಡಿರುವ ಸಲಹೆಗಳನ್ನು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

ಹುಬ್ಬಳ್ಳಿ-ಅಂಕೋಲಾ ಮಧ್ಯೆ ದ್ವಿಪಥ ರೈಲು ಮಾರ್ಗ ನಿರ್ವಿುಸಲಾಗುವುದು. ಇದರೊಂದಿಗೆ ಬೇಲಿಕೇರಿ ಸೇರಿದಂತೆ ಒಟ್ಟು ಎರಡು ಬಂದರುಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದರಿಂದ ಈ ಭಾಗದ ವಾಣಿಜ್ಯ-ವ್ಯವಹಾರಕ್ಕೆ ಮತ್ತಷ್ಟು ವೇಗ ಸಿಗಲಿದೆ. ಸರಕುಗಳ ರಫ್ತಿಗೆ ಸಹಾಯವಾಗಲಿದೆ ಎಂದರು.

ಹುಬ್ಬಳ್ಳಿ ರೈಲು ನಿಲ್ದಾಣವನ್ನು ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ರೈಲ್ವೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಮೃತ ಭಾರತ ಯೋಜನೆಯ 2ನೇ ಹಂತದಲ್ಲಿ ಸುಮಾರು 17.2 ಕೋಟಿ ರೂ. ವೆಚ್ಚದಲ್ಲಿ ಅಭಿವದ್ಧಿಪಡಿಸಿರುವ ಅಳ್ನಾವರ ನಿಲ್ದಾಣ ಶೀಘ್ರ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಧಾರವಾಡ- ಬೆಳಗಾವಿ ನೇರ ರೈಲು ಮಾರ್ಗ ಸೇರಿದಂತೆ ಇನ್ನಿತರ ಯೋಜನೆಗಳಿಗೆ ರಾಜ್ಯ ಸರ್ಕಾರ ಭೂಮಿ ವಶಪಡಿಸಿಕೊಳ್ಳುವ ಕಾರ್ಯಕ್ಕೆ ವೇಗ ನೀಡಬೇಕಾಗಿದೆ. ತುಮಕೂರು-ಚಿತ್ರದುರ್ಗ ನೇರ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಂಡಲ್ಲಿ ಧಾರವಾಡ-ಬೆಂಗಳೂರಿನ ಪ್ರಯಾಣ ಒಂದು ತಾಸು ಇಳಿಕೆಯಾಗಲಿದೆ ಎಂದು ಹೇಳಿದರು.

ಗದಗ- ಧಾರವಾಡ ಮಧ್ಯೆ ನಿತ್ಯ ಪ್ಯಾಸೆಂಜರ್ ರೈಲು ಸಂಚಾರದ ಬೇಡಿಕೆ ಇದ್ದು, ಶೀಘ್ರ ಪ್ರಾರಂಭಗೊಳ್ಳಲಿದೆ. ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ಹೊಸ ರೈಲು ಮಾರ್ಗದ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು, 2026ರ ಜೂನ್​ವರೆಗೆ ಡಿಪಿಆರ್ ಸಿದ್ಧಪಡಿಸಲಾಗುವುದು. ಗದಗ-ಯಾಲವಿಗಿ ಹೊಸ ಮಾರ್ಗದ ಡಿಪಿಆರ್ ಅನ್ನು ಇದೇ ಡಿಸೆಂಬರ್​ಗೆ ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಲಾಗುವುದು. ಆಲಮಟ್ಟಿ-ಯಾದಗಿರಿ ಹೊಸ ಮಾರ್ಗದ ಸರ್ವೆ ಕಾರ್ಯಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್, ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಂದ ಸರನ್ ಮಾಥುರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net