ಸಂಪುಟ ವಿಸ್ತರಣೆ: ಖಾತೆ ಕ್ಯಾತೆ, ಯಡಿಯೂರಪ್ಪ ಜಾಗ್ರತೆ

vidhana soudha
Published on

ಬೆಂಗಳೂರು: ಸಂಪುಟ ವಿಸ್ತರಣೆಗೆ ಪಕ್ಷದ ವರಿಷ್ಠರು ಅಸ್ತು ಎಂದ ಮೇಲೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮತ್ತೊಂದು ಸವಾಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಿದೆ. ಜತೆಗೆ ಖಾತೆಗಳ ಕ್ಯಾತೆಯು ಬಗೆಹರಿಸಬೇಕಿರುವ ಕಾರಣ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ.

ಹೈಕಮಾಂಡ್​ನ ಟಾಸ್ಕ್ ಪೂರ್ಣಗೊಳಿಸಿ, ಪ್ರತಿಪಕ್ಷಗಳು ನಿರೀಕ್ಷಿಸಿರುವ ‘ಸ್ಪೋಟ’ ನಿಷ್ಕ್ರಿಯಕ್ಕೆಂದು ಸಿಎಂ ಕಾಲಾವಕಾಶ ತೆಗೆದುಕೊಂಡಿದ್ದಾರೆ. ಜತೆಗೆ ತಮ್ಮ ಬತ್ತಳಿಕೆಯಲ್ಲಿರುವ ‘ಅನುಕೂಲ, ಪ್ರಭಾವ, ನೆರವು’ ಇತ್ಯಾದಿ ಅಸ್ತ್ರಗಳನ್ನು ಬಳಸಿಕೊಂಡು ಮನವೊಲಿಸುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಏನದು ಟಾಸ್ಕ್: ಪಕ್ಷ ಹಾಗೂ ಸರ್ಕಾರಕ್ಕೆ ತೊಡಕಾಗದ ರೀತಿ ಪಟ್ಟಿಗೆ ಒಮ್ಮತ ಮೂಡಿಸುವುದು ಬಿಎಸ್​ವೈಗೆ ಹೈಕಮಾಂಡ್ ನೀಡಿರುವ ಟಾಸ್ಕ್. ದಶಕದ ಹಿಂದಿನ ಕಹಿ ಅನುಭವವನ್ನು ಹೈಕಮಾಂಡ್ ಮರೆತಿಲ್ಲ. ಹೀಗಾಗಿ ಈ ಬಾರಿ ಎಚ್ಚರಿಕೆಯ ನಡೆಗೆ ಒತ್ತು ಕೊಟ್ಟಿದ್ದಾರೆ.

ಬಿಎಸ್​ವೈ ಕೊಂಡೊಯ್ದ ವಿಸ್ತರಣೆ ಪ್ರಸ್ತಾಪಕ್ಕೆ ಒಪ್ಪಿಗೆ ನೀಡುವ ಮುನ್ನ ಮನವೊಲಿಕೆ ಹೊಣೆ ಒಪ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವರಿಷ್ಠರ ಮುಂದಿಟ್ಟ 10+3 ಪಟ್ಟಿಯೇ ಅಂತಿಮ ಎನ್ನಲಾಗದು. ಸಚಿವರ ಸಂಖ್ಯೆ ಹಾಗೂ ಹೆಸರುಗಳಲ್ಲಿ ವ್ಯತ್ಯಾಸದ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸಂಧಾನ ಸಫಲ?: ಎಂಟಿಬಿ ನಾಗರಾಜ್ ಜತೆ ಸಿಎಂ ನಡೆಸಿದ ರಾಜಿ ಸಂಧಾನ ಬಹುತೇಕ ಸಫಲವಾಗಿದೆ. ಈಗಲೇ ಮಂತ್ರಿಯಾಗಬೇಕೆಂಬ ಅವಸರವಿಲ್ಲ, ಬಿಎಸ್​ವೈ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂದು ಮಾಜಿ ಶಾಸಕ ಎಂಟಿಬಿ ಹೇಳಿದ್ದು, ಸಂಧಾನ ಸಫಲವಾಗಿರುವುದಕ್ಕೆ ಇಂಬು ನೀಡಿದೆ.

ಸುಪ್ರೀಂ ಕೋರ್ಟ್ ತೀರ್ಪಿನತ್ತ ಸಿಎಂ ಬೊಟ್ಟು ಮಾಡಿರುವ ಕಾರಣ ಮಾಜಿ ಸಚಿವ ಎಚ್.ವಿಶ್ವನಾಥ್ ವ್ಯಗ್ರರಾಗಿದ್ದು, ಬಿಎಸ್​ವೈ ಪಾಲಿಗಿದು ಸದ್ಯದ ಕಗ್ಗಂಟು. ಅರ್ಹ ಶಾಸಕರ ಪೈಕಿ ಮಹೇಶ ಕುಮಠಳ್ಳಿ ಕೈಬಿಡುವವರ ಪಟ್ಟಿಗೆ ಸೇರಿದ್ದು, ಅವರನ್ನು ಸಮಾಧಾನಪಡಿಸುವ ಜವಾಬ್ದಾರಿ ರಮೇಶ ಜಾರಕಿಹೊಳಿ ಹೆಗಲೇರಿದೆ. ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಸಚಿವಸ್ಥಾನದ ಮೇಲೆ ಕಣ್ಣಿಟ್ಟ 20ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನ ಪಡೆದುಕೊಳ್ಳಲು ಸಿಎಂ ಮೇಲೆ ದಂಬಾಲು ಬಿದ್ದಿದ್ದರು. ಜಾತಿ, ಪ್ರದೇಶ, ಹಿರಿತನ ಹೀಗೆ ವಿವಿಧ ಅಸ್ತ್ರ ಬಳಸಿ ಸಚಿವ ಸ್ಥಾನಕ್ಕೆ ಪ್ರಯತ್ನಿಸಿದ್ದರು.

ಆದರೆ, ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿ ಅನರ್ಹತೆ ಪಟ್ಟವನ್ನೂ ಕಟ್ಟಿಕೊಂಡು ಕೊನೆಗೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದವರಿಗೆ ಸಂಪುಟದಲ್ಲಿ ಆದ್ಯತೆ ನೀಡಬೇಕಿದ್ದ ಕಾರಣ ಮೊದಲ ಸಂಪುಟ ವಿಸ್ತರಣೆಯಲ್ಲಿ ಕೇವಲ 16 ಮಂದಿಗೆ ಅವಕಾಶ ಸಿಕ್ಕಿತ್ತು. ಹೀಗಾಗಿ ಹತ್ತಾರು ಶಾಸಕರು 2ನೇ ಅವಕಾಶಕ್ಕೆ ಕದ ತಟ್ಟುತ್ತಲೇ ಇದ್ದರು. ಇದೀಗ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಸಂಪುಟ ವಿಸ್ತರಣೆ ದಿನಾಂಕದೊಳಗೆ ಈ ರೀತಿ ಪ್ರಯತ್ನ ಮಾಡುತ್ತಿರುವವರನ್ನು ಕರೆದು ಮಾತನಾಡಿಸಿ ಸಮಾಧಾನ ಪಡಿಸುವ ಗುರಿ ಯಡಿಯೂರಪ್ಪನವರದ್ದಾಗಿದೆ.

ಸಂಪುಟ ವಿಸ್ತರಣೆ ಬಳಿಕ ಯಾವುದೇ ಗೊಂದಲ ಆಗಬಾರದು, ನೀವೇ ಎಲ್ಲವನ್ನೂ ನಿಭಾಯಿಸಿ. ನಿಮ್ಮ ಸಮಸ್ಯೆಯನ್ನು ಮತ್ತೆ ದೆಹಲಿಗೆ ತರುವುದು ಬೇಡ. ಸಾವಧಾನವಾಗಿಯೇ ನಿರ್ಧರಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಪಕ್ಷದ ವರಿಷ್ಠರು ಸಿಎಂಗೆ ಪಾಠಮಾಡಿ ಕಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಸೋತವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಕಾನೂನಿನಲ್ಲಿ ನಿರ್ಬಂಧ ಇಲ್ಲ. ನಾನು ಮಂತ್ರಿ ಆಗಲೇಬೇಕು ಎಂದು ಆಸೆ ಇದ್ದರೂ ಮಂತ್ರಿಯಾಗದಿದ್ದರೆ ಆಕಾಶ ಬೀಳಲ್ಲ. ಮಂತ್ರಿಮಂಡಲದಲ್ಲಿ ಸ್ಥಾನ ಕೊಡುವುದಾಗಿ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ. ಹಾಗಾಗಿ ನನ್ನ ಕೈ ಬಿಡುವುದಿಲ್ಲ ಎನ್ನುವ ವಿಶ್ವಾಸವಿದೆ. | ಎಚ್.ವಿಶ್ವನಾಥ್ ಮಾಜಿ ಶಾಸಕ ಡಿಸಿಎಂ ಸ್ಥಾನ ವಿಚಾರದಲ್ಲಿ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧ. ಯಾವ ಸಮಯದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದು ಪಕ್ಷದ ಮುಖಂಡರಿಗೆ ಗೊತ್ತಿದೆ. | ಬಿ.ಶ್ರೀರಾಮುಲು ಸಚಿವ ಉಪ ಚುನಾವಣೆ ಸೋತವರಿಗೂ ಸಚಿವ ಸ್ಥಾನ ನೀಡಬೇಕು. ನಾವು 17 ಜನ ಒಟ್ಟಾಗಿದ್ದೇವೆ. ನಾಲ್ಕನೇ ಡಿಸಿಎಂ ಹುದ್ದೆ ಸೃಷ್ಟಿ ಮಾಡಿದರೆ ಅದನ್ನು ವಾಲ್ಮೀಕಿ ಸಮುದಾಯಕ್ಕೆ ಕೊಡಬೇಕು. | ಪ್ರತಾಪಗೌಡ ಪಾಟೀಲ್ ಅನರ್ಹ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net