

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಸತ್ತೂರಿನ ಎಸ್ಡಿಎಂ ನಾರಾಯಣ ಹೃದಯಾಲಯದಲ್ಲಿ 81 ವರ್ಷದ ಹೈರಿಸ್ಕ್ ರೋಗಿಗೆ ಕೊರೊನರಿ ಆರ್ಟರಿ ಬೈಪಾಸ್ ಗ್ರಾಫ್ಟ್ (ಸಿಎಬಿಜಿ) ಶಸ್ತ್ರ ಚಿಕಿತ್ಸೆಯನ್ನು ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯ ರಾಜೇಂದ್ರ ಭಟ್ (ಹೆಸರು ಬದಲಾಯಿಸಲಾಗಿದೆ) ತೀವ್ರ ತರಹದ ಕೊರೊನರಿ ಸಿಂಡ್ರೋಮ್ (ಎಸಿಎಸ್) ಮತ್ತು ಟ್ರಿಪಲ್ ವೆಸೆಲ್ ಡಿಸೀಸ್ (ಇದು ಜೀವಕ್ಕೆ ಅಪಾಯಕಾರಿ ಹೃದಯದ ಗಂಭೀರ ಸ್ಥಿತಿ. ಹೃದಯಕ್ಕೆ ರಕ್ತ ಪೂರೈಸುವ 3 ಪ್ರಮುಖ ರಕ್ತನಾಳಗಳಲ್ಲಿ ಅಡಚಣೆ ಉಂಟಾಗಿ ಪರಿಚಲನೆ ಸ್ತಬ್ದಗೊಳ್ಳುತ್ತದೆ) ನಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಎಸ್ಡಿಎಂ ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದರು.
ಹಿರಿಯ ಹೃದ್ರೋಗ ತಜ್ಞ ಡಾ. ರಘುಪ್ರಸಾದ ಎಸ್. ತಪಾಸಣೆ ನಡೆಸಿ ಡಾ. ಸಾಯಿ ಸೂರಜ್ ಅವರಿಗೆ ಶಿಫಾರಸ್ಸು ಮಾಡಿದ್ದರು. ಡಾ. ಸಾಯಿಸೂರಜ್ ಹಾಗೂ ತಂಡ ರೋಗಿಯ ತಪಾಸಣೆ ನಡೆಸಿ, ಹೃದಯದ ನೋವು ಕಡಿಮೆ ಮಾಡಿ ಸಿಎಬಿಜಿ ಶಸ್ತ್ರಚಿಕಿತ್ಸೆ ನೇರವೇರಿಸಿದ್ದಾರೆ.
ರೋಗಿಯ ವಯಸ್ಸು ಮತ್ತು ಡಯಾಬಿಟಿಸ್ನ ಕಾರಣದಿಂದ ಶಸ್ತ್ರಚಿಕಿತ್ಸೆ ಜಟಿಲವಾಗಿತ್ತು. ಆದರೂ ನಮ್ಮ ತಂಡದ ಸಹಕಾರದಿಂದ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು, ರೋಗಿಗೆ ಅತ್ಯುತ್ತಮ ನರ್ಸಿಂಗ್ ಸೇವೆ ಹಾಗೂ ಫಿಜಿಯೋಥೆರಪಿ ನೀಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ಡಾ. ಸಾಯಿ ಸೂರಜ್ ತಿಳಿಸಿದ್ದಾರೆ.
ಎಸ್ಡಿಎಂ ನಾರಾಯಣ ಹಾರ್ಟ್ ಕೇರ್ನ ಚಿಕಿತ್ಸೆ ಕುರಿತು ಅಭಿಪ್ರಾಯ ತಿಳಿಸಿರುವ ರಾಜೇಂದ್ರ ಭಟ್, ವೈದ್ಯರು ನನ್ನ ಜೀವ ಉಳಿಸಿದ್ದಾರೆ. ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ತಂಡಕ್ಕೆ ಕೃತಜ್ಞತೆ ತಿಳಿಸಿದ್ದಾರೆ.