

ಬ್ಯಾಡಗಿ: ಕರೊನಾ ಪ್ರಕರಣಗಳು ಹೆಚ್ಚಿರುವ ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಿಂದ ಪಟ್ಟಣಕ್ಕೆ ಎಲೆಕೋಸು ಒಯ್ಯಲು ಬರುವ ಲಾರಿ ಚಾಲಕರು ಮತ್ತು ಕ್ಲೀನರ್ಗಳು ಎಲ್ಲೆಂದರಲ್ಲಿ ಓಡಾಡುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ತಾಲೂಕಿನ ಬ್ಯಾಡಗಿ ಹೋಬಳಿಯಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ಎಲೆಕೋಸು ಬೆಳೆದಿದ್ದು, ವ್ಯಾಪಾರವೂ ಭರ್ಜರಿಯಾಗಿಯೇ ನಡೆದಿದೆ. ಇಲ್ಲಿನ ಎಲೆಕೋಸು ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಸೇರಿ ಹಲವು ರಾಜ್ಯಗಳಿಗೆ ತೆರಳುತ್ತಿದ್ದು, ಬೆಳೆಯನ್ನು ಕೊಂಡೊಯ್ಯಲು ಸಾಕಷ್ಟು ಲಾರಿಗಳು ಆಗಮಿಸುತ್ತಿವೆ.
ಹೀಗೆ ಅನ್ಯ ರಾಜ್ಯಗಳಿಂದ ಬರುವ ಲಾರಿ ಡ್ರೖೆವರ್ಗಳು ಮತ್ತು ಕ್ಲೀನರ್ಗಳು ಊಟ, ಉಪಾಹಾರಕ್ಕಾಗಿ ಹೋಟೆಲ್, ಡಾಬಾಗಳನ್ನು ಆಶ್ರಯಿಸುತ್ತಿದ್ದಾರೆ. ಪರಸ್ಪರ ಅಂತರ, ಮಾಸ್ಕ್ ಧರಿಸದೇ ಎಲ್ಲೆಂದರಲ್ಲಿ ಓಡಾಡುತ್ತಿರುವುದು ಕಂಡುಬರುತ್ತಿದೆ. ಇದು ಸಹಜವಾಗಿಯೇ ಸ್ಥಳೀಯರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ.
ತಪಾಸಣೆ ಇಲ್ಲ: ಈ ಹಿಂದೆ ಅಧಿಕಾರಿಗಳು ಪಟ್ಟಣಕ್ಕೆ ಬೇರೆ ರಾಜ್ಯ, ಜಿಲ್ಲೆಗಳಿಂದ ಬಂದುಹೋಗುವರ ಮೇಲೆ ನಿಗಾ ವಹಿಸಿದ್ದರು. ಆದರೆ, ಈಗ ಇದ್ಯಾವುದೂ ನಡೆಯುತ್ತಿಲ್ಲ. ಎಪಿಎಂಸಿ ಅಧಿಕಾರಿಗಳು ಎಲೆಕೋಸು ಬೆಳೆ ನಮ್ಮ ವ್ಯಾಪ್ತಿಗೆ ಬರೋದಿಲ್ಲ ಎನ್ನುತ್ತಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಮಗೆ ವ್ಯಾಪಾರ ಕುರಿತು ಸಂಬಂಧವಿಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ. ಹೀಗೆ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹೇಳುತ್ತ ಸುರಕ್ಷತಾ ಕ್ರಮ ಅನುಸರಿಸದೇ ಇರುವುದರಿಂದ ಪಟ್ಟಣದ ಸಾರ್ವಜನಿಕರು ಮಾತ್ರ ಭಯದಲ್ಲಿ ಕಾಲಕಳೆಯುವಂತಾಗಿದೆ.
ತಾಲೂಕಿನ ಎಲೆಕೋಸು ಬೆಳೆಯನ್ನು ಮಹಾರಾಷ್ಟ್ರ, ಪುಣೆ, ಗುಜರಾತ್, ಬೆಂಗಳೂರು ಇತ್ಯಾದಿ ಪ್ರದೇಶಗಳಿಗೆ ಕಳುಹಿಸುತ್ತಿದ್ದಾರೆ. ಇದು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಸೇರಿದ್ದರೂ, ಬೆಳೆ ಮಾರಾಟಕ್ಕೆ ನಾವು ಜವಾಬ್ದಾರರಲ್ಲ.| ಅಶೋಕ ಕುರುಬರ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಹೊರರಾಜ್ಯ, ಜಿಲ್ಲೆಗಳಿಂದ ವಾಹನಗಳಲ್ಲಿ ಬಂದುಹೋಗುವವರಿಗೆ ನಾವೇನೂ ಮಾಡಲು ಸಾಧ್ಯವಿಲ್ಲ. ಚೆಕ್ಪೋಸ್ಟ್, ತಪಾಸಣೆ ಕೇಂದ್ರಗಳನ್ನು ಸರ್ಕಾರ ತೆಗೆದು ಹಾಕಿದೆ. ಸರ್ಕಾರದ ಆದೇಶದಂತೆ ನಾವು ಹೊರಗಿನಿಂದ ಬಂದ ವ್ಯಕ್ತಿಗಳು ಸ್ಥಳೀಯವಾಗಿ ವಾಸವಾದಲ್ಲಿ, ಮುಲಾಜಿಲ್ಲದೆ ಹೋಮ್ ಕ್ವಾರಂಟೈನ್ಗೆ ಸೂಚಿಸುತ್ತೇವೆ. ಈ ಕುರಿತು ಪೊಲೀಸ್ ಹಾಗೂ ತಹಸೀಲ್ದಾರ್ ಕಚೇರಿಗೆ ಮಾಹಿತಿ ನೀಡಲಾಗುವುದು.| ಡಾ.ಬಿ.ಆರ್. ಲಮಾಣಿ ತಾಲೂಕು ಆರೋಗ್ಯಾಧಿಕಾರಿಕರೊನಾ ವೈರಸ್ ನಿಯಂತ್ರಣಕ್ಕೆ ನಾವು ಸಾಕಷ್ಟು ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದು, ಹೊರಗಡೆಯಿಂದ ಬರುವವರ ಮೇಲೆ ಸಂಪೂರ್ಣ ನಿಗಾವಹಿಸಲಾಗಿದೆ. ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕಾರ್ಯೋನ್ಮುಖವಾಗಿದೆ. ಸ್ಥಳೀಯ ಫುಟ್ಪಾತ್ ವ್ಯಾಪಾರಿಗಳ ಜೊತೆ ಲಾರಿ ಚಾಲಕರು ಬೆರೆಯದಂತೆ, ಅಂತರ ಕಾಯ್ದುಕೊಳ್ಳಲು ತಿಳಿಸಲಾಗುವುದು.| ವಿ.ಎಂ.ಪೂಜಾರ, ಪುರಸಭೆ ಮುಖ್ಯಾಧಿಕಾರಿ