ಪೌರತ್ವ ನೋಂದಣಿ ಮಾಡಿಸಿ ರಾಷ್ಟ್ರೀಯ ಮನೋಭಾವ ಬೆಳೆಸಿಕೊಳ್ಳಿ

05mbl 1
Published on

ಮುಳಬಾಗಿಲು: ಭಾರತಕ್ಕೆ ಇತರ ದೇಶದವರು ಎರಡು-ಮೂರು ದಾಖಲೆಗಳನ್ನು ನೀಡಿ ಪೌರತ್ವದ ನೋಂದಣಿ ಮಾಡಿಸಿಕೊಳ್ಳುವ ಮೂಲಕ ರಾಷ್ಟ್ರೀಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ನಗರದ ಶಾಸಕರ ಕಚೇರಿಯಲ್ಲಿ ಶನಿವಾರ ಸಾರ್ವಜನಿಕರ ಕುಂದುಕೊರತೆಗಳ ಅರ್ಜಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಪೌರತ್ವ ಕಾಯ್ದೆ ವಿರೋಧಿಸಬಾರದು. ಮುಗ್ಧ ಜನರ ದಿಕ್ಕು ತಪ್ಪಿಸಬಾರದು. ಜನರೂ ಈ ಬಗ್ಗೆ ಜಾಗೃತರಾಗಬೇಕು ಎಂದರು.

ಸ್ಮಶಾನ ಅಭಿವೃದ್ಧಿಗೆ ಆದ್ಯತೆ: ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಸ್ಮಶಾನ ಒತ್ತುವರಿ ತೆರವುಗೊಳಿಸಿ ಕಾಂಪೌಂಡ್ ನಿರ್ಮಿಸಿ ಅಭಿವೃದ್ಧಿಪಡಿಸಲಾಗುವುದು. ನಗರದಲ್ಲಿ ಎಲ್ಲ ಸಮುದಾಯದವರಿಗೆ ಪ್ರತ್ಯೇಕವಾಗಿ ಸ್ಮಶಾನ ನಿರ್ಮಿಸಲು ಈಗಾಗಲೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸರ್ವೇ ಕಾರ್ಯ ನಡೆಯುತ್ತಿದೆ. ನಗರದಲ್ಲಿ ಆಧುನಿಕ ತಂತ್ರಜ್ಞಾನದ ವಿದ್ಯುತ್ ಶವಾಗಾರ ನಿರ್ಮಿಸಿಕೊಡಲು ಚಿಂತಿಸಲಾಗಿದೆ ಎಂದರು.

ನಗರಸಭೆ ಸದಸ್ಯರೊಂದಿಗೆ ಶೀಘ್ರ ಸಾರ್ವಜನಿಕ ಕುಂದು-ಕೊರತೆ ಸಭೆ ನಡೆಸಿ ಅಭಿವೃದ್ಧಿ ಕಾರ್ಯ ಸೇರಿ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.

ಹೋಬಳಿಮಟ್ಟದ ಕುಂದು ಕೊರತೆ ಸಭೆಗಳನ್ನು ನಡೆಸಲಾಗಿದ್ದು, ಜ.8ರಿಂದ ಗ್ರಾಪಂ ಮಟ್ಟದಲ್ಲಿ ಸಭೆ ಏರ್ಪಡಿಸಲಾಗಿದೆ. ಊರುಕುಂಟೆ ಮಿಟ್ಟೂರು ಗ್ರಾಮದಲ್ಲಿ ಮೊದಲ ಸಭೆ ನಡೆಯಲಿದೆ ಎಂದರು.

ರಾಜ್ಯಾದ್ಯಂತ ಸರ್ಕಾರಿ ಐಟಿಐ ಕೇಂದ್ರಗಳಲ್ಲಿ 350 ಅತಿಥಿ ಉಪನ್ಯಾಸಕರು, ಅತಿಥಿ ಬೋಧಕರಾಗಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಒಳ ಗುತ್ತಿಗೆ ಆಧಾರದಲ್ಲಿ ಸರ್ಕಾರದಿಂದ ಸೇವಾ ಭದ್ರತೆ ಒದಗಿಸಬೇಕೆಂದು ಮುಳಬಾಗಿಲು ಐಟಿಐ ತರಬೇತಿ ಕೇಂದ್ರದ ಅತಿಥಿ ಬೋಧಕರು ಸಚಿವರಿಗೆ ಮನವಿ ಸಲ್ಲಿಸಿದಾಗ ಈ ಸಂಬಂಧ ಇಲಾಖೆ ಆಯುಕ್ತರೊಂದಿಗೆ ಚರ್ಚಿಸಿ ಅನುಕೂಲ ಮಾಡಿಕೊಡುವುದಾಗಿ ಬರವಸೆ ನೀಡಿದರು.

ತಾಪಂ ಅಧ್ಯಕ್ಷ ಎ.ವಿ.ಶ್ರೀೀನಿವಾಸ್. ನಗರಸಭಾ ಸದಸ್ಯ ಜಗನ್ ಮೋಹನ್‌ರೆಡ್ಡಿ, ತಹಸೀಲ್ದಾರ್ ಕೆ.ಎನ್.ರಾಜಶೇಖರ್, ಇಒ ಎಂ.ಬಾಬು, ಪೌರಾಯುಕ್ತ ಜಿ.ಶ್ರೀನಿವಾಸಮೂರ್ತಿ ಇದ್ದರು.

ರಾಸುಗಳ ಓಟದ ಸ್ವರ್ಧೆಗೆ ಅವಕಾಶ: ತಾಲೂಕಿನ ದೂಲಪಲ್ಲಿಯಲ್ಲಿ ಸಂಕ್ರಾಂತಿ ಹಬ್ಬ ವಿಶೇಷವಾಗಿ ಆಚರಿಸಲಾಗುವುದು. ರಾಸುಗಳ ಓಟದ ಸ್ಪರ್ಧೆ ನಡೆಸಲಾಗುತ್ತಿತ್ತು. ಸರ್ಕಾರ ಸ್ಪರ್ಧೆಗೆ ನಿರ್ಬಂಧ ಹೇರುವುದರಿಂದ ಕೆಲ ವರ್ಷಗಳಿಂದ ಸ್ಪರ್ಧೆ ನಡೆಸುತ್ತಿಲ್ಲ. ಈ ಬಗ್ಗೆ ಗ್ರಾಮಸ್ಥರು ಸಚಿವರಲ್ಲಿ ಮನವಿ ಸಲ್ಲಿಸಿ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕೆಂದು ಕೋರಿದಾಗ ಸರ್ಕಾರದಿಂದ ಅನುಮತಿ ಕೊಡಿರುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net