ಸಮಾರೋಪ ಅಧಿವೇಶನದಲ್ಲಿ ಅತ್ಯುತ್ತಮ ಪ್ರಬಂಧ ನಿರೂಪಕರಿಗೆ ಗೌರವ
ಮಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಇದರ ದಕ್ಷಿಣ ಭಾರತ ಚಾರ್ಟರ್ಡ್ ಅಕೌಂಟೆಂಟ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಸ್‌ಐಸಿಎಎಸ್‌ಎ) ಇದರ ಮಂಗಳೂರು ಶಾಖೆ ವತಿಯಿಂದ ಕುದುಮುಲ್ ರಂಗರಾವ್ ಪುರಭವನದಲ್ಲಿ ಜೂ. 5 ಮತ್ತು 6ರಂದು ಸಿಎ ವಿದ್ಯಾರ್ಥಿಗಳಿಗೆ ಸಮ್ಮೇಳನ ನಡೆಯಲಿದೆ ಎಂದು ಸಮ್ಮೇಳನದ ಸಂಯೋಜಕ ಹಾಗೂ ಐಸಿಎಐನ ಮಂಗಳೂರು ಶಾಖೆಯ ಅಧ್ಯಕ್ಷ ಡೇನಿಯಲ್ ಮಾರ್ಷ್ ಪೆರೇರಾ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಸಮ್ಮೇಳನದಲ್ಲಿ ಲೆಕ್ಕಪರಿಶೋಧನೆ ಮತ್ತು ತೆರಿಗೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ, ತೆರಿಗೆ ಕಾನೂನು, ಜಿಎಸ್‌ಟಿಯಲ್ಲಿನ ನವೀಕರಣ, ನವೋದ್ಯಮ ಪರಿಸರ ವ್ಯವಸ್ಥೆಗಳು ಬಂಡವಾಳ ಮಾರುಕಟ್ಟೆಗಳು, ಮಾನಸಿಕ ಸ್ವಾಸ್ಥ್ಯ, ಪರೀಕ್ಷಾ ತಂತ್ರ ಮತ್ತು ವೃತ್ತಿಪರ ಬ್ರಾಂಡಿಂಗ್ ಬಗ್ಗೆ ಚರ್ಚೆ ನಡೆಯಲಿದೆ.
ಸಮ್ಮೇಳನದ ಉದ್ಘಾಟನೆ ಜೂ. 5ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ. ಮೊದಲ ದಿನದ ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಐಸಿಎಐನ ಅಧ್ಯಕ್ಷರು ಸೇರಿದಂತೆ ಇತರ ಹಲವು ತಜ್ಞರು ವಿಷಯ ಮಂಡಿಸಲಿದ್ದಾರೆ. ವಿದ್ಯಾರ್ಥಿಗಳು ವಿವಿಧ ಜ್ಞಾನ ಅಧಿವೇಶನಗಳ ಕುರಿತು ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿದ್ದು, 2ನೇ ದಿನದ ಸಮಾರೋಪ ಅಧಿವೇಶನದಲ್ಲಿ ಅತ್ಯುತ್ತಮ ಪ್ರಬಂಧ ನಿರೂಪಕರನ್ನು ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಸಂಯೋಜಕ ಗೌರವ್ ರಾಮಚಂದ್ರ ಹೆಗಡೆ, ಮಮತಾ ರಾವ್, ಬಾಲಸುಬ್ರಹ್ಮಣ್ಯ ಎನ್., ಬಿ. ಕೃಷ್ಣಾನಂದ ಪೈ, ಪ್ರಶಾಂತ್ ಪೈ, ಸೌಪರ್ಣಿಕಾ, ಅಭಿಶ್ಯಾಮ್, ನಿತಿನ್ ಬಾಳಿಗ ಅವರು ಸುದ್ದಿಗೋಷ್ಠಿಯಲ್ಲಿದ್ದರು.