

ಮೈಸೂರು: ನಮ್ಮ ಸಮುದಾಯ ಕೇವಲ ಸಭೆ, ಸಮಾರಂಭಕ್ಕೆ ಸೀಮಿತವಾಗಬಾರದು. ಸಮುದಾಯದ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಲು ನಾವೆಲ್ಲ ಒಗ್ಗೂಡಬೇಕಾಗಿದೆ. ಒಕ್ಕಲಿಗರು ಒಕ್ಕಲಿಗರನ್ನೇ ತುಳಿಯುತ್ತಿದ್ದಾರೆ. ಬೇರೆ ಸಮುದಾಯ ನಮ್ಮನ್ನು ತುಳಿಯುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಬೇಸರ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ವತಿಯಿಂದ ನಗರದ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ‘ನಾಡಪ್ರಭು ಕೆಂಪೇಗೌಡ ಮತ್ತು ಒಕ್ಕಲಿಗ ರಾಜಮನೆತನದ ಇತಿಹಾಸ’ ಕುರಿತು ಎರಡು ದಿನಗಳ ಕಾಲ ಹಮ್ಮಿಕೊಂಡ ವಿಚಾರ ಸಂಕಿರ ಣದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.
ಸಮುದಾಯದವರನ್ನು ಒಗ್ಗೂಡಿಸಲು ಪ್ರಾರಂಭಗೊಂಡಿರುವ ಮಹಾಸಭೆಗೆ ನಗರದಲ್ಲಿ ಎರಡು ಎಕರೆ ಸಿಎ ನಿವೇಶನ ಕೊಡಿಸುತ್ತೇನೆ. ಅಲ್ಲದೆ ಭವನ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲಾಗುವುದು. ಸಾಕಷ್ಟು ಸಮುದಾಯಗಳು ಸಿಎ ನಿವೇಶನ ಪಡೆಯಲು ಮುಂದೆ ಬರುತ್ತಿದ್ದಾರೆ. ಅದೇ ರೀತಿ ಒಕ್ಕಲಿಗರು ಸಹ ಸೌಲಭ್ಯಗಳನ್ನು ಪಡೆಯಲು ಮುಂದೆ ಬರಬೇಕು. ನಾನು ವಿಧಾನಸಭೆಯ ಮೆಟ್ಟಿಲು ಹತ್ತಲು ನಮ್ಮ ಸಮುದಾಯ ಕಾರಣ. ಅದಕ್ಕೆ ನಾನು ಸಮುದಾಯಕ್ಕೆ ಚಿರಋಣಿ ಎಂದು ಹೇಳಿದರು.