ಕೃತಕ ಬುದ್ಧಿಮತ್ತೆ ಬಳಕೆ ಸಮರ್ಪಕವಾಗಲಿ,  ಐಐಟಿ ನಿರ್ದೇಶಕ ವೆಂಕಪ್ಪಯ್ಯ ದೇಸಾಯಿ ಅಭಿಮತ,  ಐಸಿಎಐ 37ನೇ ವಾರ್ಷಿಕ ಸಮ್ಮೇಳನ ಉದ್ಘಾಟನೆ

IMG_20241221_115358_638.jpg
Published on

ಹುಬ್ಬಳ್ಳಿ: ಕೃತಕ ಬುದ್ಧಿಮತ್ತೆ (ಆರ್ಟಿಫಿಸಿಯಲ್ ಇಂಟಲಿಜೆನ್ಸ್- ಎಐ) ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಭಾರತದಂತ ಬಹುದೊಡ್ಡ ಮಾನವ ಸಂಪನ್ಮೂಲ ಹೊಂದಿದ ದೇಶದಲ್ಲಿಯೂ ಇದನ್ನು ಸಮರ್ಪಕ ಹಾಗೂ ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ಅಗತ್ಯವಿದೆ ಎಂದು ಧಾರವಾಡ ಐಐಟಿ ನಿರ್ದೇಶಕ ವೆಂಕಪ್ಪಯ್ಯ ದೇಸಾಯಿ ಹೇಳಿದರು.

ಇಲ್ಲಿಯ ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್  ಅಕೌಂಟಂಟ್ ಆಫ್ ಇಂಡಿಯಾ (ಐಸಿಎಐ) ಹುಬ್ಬಳ್ಳಿ ಶಾಖೆಯ ವತಿಯಿಂದ ನಗರದ ಖಾಸಗಿ ಹೋಟೆಲ್ ನಲ್ಲಿ ಶನಿವಾರ ಏರ್ಪಡಿಸಿದ್ದ 37ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಕೃತಕ ಬುದ್ಧಿಮತ್ತೆ ಎಷ್ಟೇ ಅಭಿವೃದ್ಧಿಯಾಗಿದ್ದರೂ ಸೈಬರ್ ಕ್ರೈಮ್ ಪತ್ತೆ ಹಚ್ಚುವಲ್ಲಿ ಅಥವಾ ಕಡಿಮೆ ಮಾಡುವಲ್ಲಿ ಹಿಂದೆ ಬಿದ್ದಿದೆ. ಇದು ದೌರ್ಭಾಗ್ಯದ ಸಂಗತಿ. ಬೇರೆಲ್ಲ ಕಡೆಗಳಿಗಿಂತ ಭಾರತೀಯರಲ್ಲಿ ಎಐ ಜಪ ಹೆಚ್ಚಾಗಿದೆ. ಇದನ್ನು ಹೇಗೆ, ಯಾವುದಕ್ಕೆ ಬಳಸಬೇಕು ಎಂಬುದರ ಅರಿವು ಖಂಡಿತ ಬೇಕು ಎಂದು ಸಲಹೆ ನೀಡಿದರು.

ಕೃತಕ ಬುದ್ಧಿಮತ್ತೆಯ ಉಪಯೋಗಗಳು ಹೇಗಿವೆಯೋ ಅದರ ದುರುಪಯೋಗಗಳು ಸಹ ಇವೆ. ಹಾಗಾಗಿ ಬಹಳ ಎಚ್ಚರಿಕೆ ಇರಬೇಕು ಎಂದು ಅಭಿಪ್ರಾಯಪಟ್ಟರು.

ಐಸಿಎಐ ಪದ ನಿಮಿತ್ತ ಸದಸ್ಯ ಪನ್ನಾ ರಾಜ್ ಎಸ್. ಮಾತನಾಡಿ, ವೃತ್ತಿಯಲ್ಲಿರುವ ಲೆಕ್ಕ ಪರಿಶೋಧಕರಿಗೆ ಪ್ರಸ್ತುತ ಬದಲಾವಣೆಗಳ ಬಗ್ಗೆ ಮಾಹಿತಿ ನೀಡುವುದು ಕಾರ್ಯಕ್ರಮದ ಉದ್ದೇಶ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಬೆನ್ನೆಲುಬು. ಕೃಷಿ ಕ್ಷೇತ್ರ ಬಿಟ್ಟರೆ ಅವು ಅತಿ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಒದಗಿಸಿವೆ. ಎಂಎಸ್ಎಂಇ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಲೆಕ್ಕ ಪರಿಶೋಧಕರು ಸೂಕ್ತ ಮಾರ್ಗದರ್ಶನ ನೀಡಬೇಕು. ಅವು ಸುಸ್ಥಿರ ಅಭಿವೃದ್ಧಿಯತ್ತ ಸಾಗಬೇಕು ಎಂದು ಅಭಿಪ್ರಾಯಿಸಿದರು.

ಎಐ ಬಳಸಿಕೊಂಡು ಹಣಕಾಸಿನ ನಿಖರತೆ ಸಾಧಿಸುವ ದಿಸೆಯಲ್ಲಿ ಆಯೋಜಿಸಿದ್ದ "ಅರ್ಥಸಿದ್ಧಿ' ಎಂಬ ಕಾರ್ಯಕ್ರಮದಲ್ಲಿ ಮುನ್ನೂರಕ್ಕೂ ಹೆಚ್ಚು ಲೆಕ್ಕಪರಿಶೋಧಕರು ಪಾಲ್ಗೊಂಡಿದ್ದರು. ವಿವಿಧ ಗೋಷ್ಠಿಗಳಲ್ಲಿ ಭಾಗಿಯಾಗಿ ತಮ್ಮ ಸಂದೇಹಗಳಿಗೆ ಪರಿಹಾರ ಕಂಡುಕೊಂಡರು.

ತಾಂತ್ರಿಕತೆ ಹಾಗೂ ಕೃತಕ ಬುದ್ಧಿಮತ್ತೆ ಕುರಿತು ನಡೆದ ಮೊದಲ ಗೋಷ್ಠಿಯಲ್ಲಿ ಹೈದ್ರಾಬಾದನ ಸಿಎ ಶರಣಕುಮಾರ, ಲೆಕ್ಕ ಪರಿಶೋಧನೆಯಲ್ಲಿ ಕಂಪ್ಯೂಟರ್ ಹಾಗೂ ಎಐ ಅನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಲೆಕ್ಕ ಪರಿಶೋಧಕರಾದ ನರೇಂದ್ರ ಜೈನ್, ಕೆ.ವಿ. ದೇಶಪಾಂಡೆ, ಅರವಿಂದ ಹೆಜಿಬ್, ವೈ.ಎಂ. ಖಟಾವಕರ, ಅಕ್ಷಯಕುಮಾರ ಸಿಂಘಿ, ರಿಷಭ ಉಪಾಧ್ಯಾಯ, ಎಚ್.ಎನ್. ಆಡಿನವರ, ಅಮಿತ ಬಾಬಜಿ, ಸಂತೋಷ ಮಾಗಾವಿ, ಜತಿನ್ ಕ್ರಿಸ್ಟೋಪರ್, ಆನಂದ ಪೋತ್ನಿಸ್, ಇತರರು ಪಾಲ್ಗೊಂಡಿದ್ದರು. ಗಾಯತ್ರಿ ಪ್ರಾರ್ಥನೆ ಹಾಡಿದರು. ಹುಬ್ಬಳ್ಳಿ ಶಾಖೆ ಅಧ್ಯಕ್ಷ ಧನಪಾಲ್ ಮುನ್ನೋಳಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net