

ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 2019-20ನೇ ಸಾಲಿನ ಗೊರುಚ ದತ್ತಿ ನಿಧಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
2019ರ ಗೊರುಚ ಶರಣ ಪ್ರಶಸ್ತಿಗೆ ಹಿರಿಯ ಸಾಹಿತಿ, ಚಿಂತಕ ಡಾ. ಸಿ. ವೀರಣ್ಣ ಆಯ್ಕೆಯಾಗಿದ್ದಾರೆ. ಅದೇ ಸಾಲಿನ ಗೊರುಚ ಜಾನಪದ ಪ್ರಶಸ್ತಿಗೆ ಲೇಖಕ ಡಾ. ಬಿ.ಎಸ್. ಸ್ವಾಮಿ, ಗೊರುಚ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿಗೆ ನಾಟಕಕಾರ, ಕವಿ ಪ್ರೊ ಬಿ.ಆರ್. ಪೊಲೀಸ್ ಪಾಟೀಲ, ಗೊರುಚ ಜನಪದ ಸಾಹಿತ್ಯ ಗ್ರಂಥ ಪ್ರಶಸ್ತಿಗೆ ಪಿ.ಡಿ. ವಾಲೀಕಾರ ಭಾಜನರಾಗಿದ್ದಾರೆ.
2020ರ ಗೊರುಚ ಶರಣ ಪ್ರಶಸ್ತಿಗೆ ಡಾ. ಬಸವರಾಜ ಸಾದರ ಆಯ್ಕೆಯಾಗಿದ್ದಾರೆ. ಅದೇ ಸಾಲಿನ ಗೊರುಚ ಜಾನಪದ ಪ್ರಶಸ್ತಿಗೆ ಡಾ. ಎಚ್.ಬಿ. ಪೋತೆ, ಗೊರುಚ ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿಗೆ ಡಾ. ಬಸವರಾಜ ಸಬರದ, ಗೊರುಚ ಜನಪದ ಸಾಹಿತ್ಯ ಗ್ರಂಥ ಪ್ರಶಸ್ತಿಗೆ ಡಾ. ಕುರುವ ಬಸವರಾಜ್ ಭಾಜನರಾಗಿದ್ದಾರೆ.
ಗೊರುಚ ಶರಣ ಪ್ರಶಸ್ತಿ ಮತ್ತು ಗೊರುಚ ಜಾನಪದ ಪ್ರಶಸ್ತಿ ತಲಾ 25 ಸಾವಿರ ರೂ. ಮತ್ತು ಗೊರುಚ ಗ್ರಂಥ ಪ್ರಶಸ್ತಿಗೆ ತಲಾ 10 ಸಾವಿರ ರೂ. ಕೊಡಲಾಗುತ್ತದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳ ಪ್ರಶಸ್ತಿಗಳನ್ನು ಈ ಸಲ ಒಟ್ಟಿಗೇ ಆ. 1ರಂದು ಭಾನುವಾರ ಮೈಸೂರಿನಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.