

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ, ವಿಸ್ತರಣೆ ಕುರಿತ ಕುತೂಹಲ, ನಿರೀಕ್ಷೆಗಳು ಮುಂದುವರಿದಿರುವಂತೆಯೇ ಅದಕ್ಕೂ ಮೊದಲು ನಿಗಮ, ಮಂಡಳಿಗಳ ಸ್ಥಾನ ತುಂಬುವ ಕೆಲಸ ಮಾಡಿದ್ರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಆದಾಗ್ಯೂ, ಸಚಿವಸಂಪುಟ ವಿಸ್ತರಣೆ, ಪುನಾರಚನೆ ಕುತೂಹಲ ಉಳಿಸಿಕೊಂಡಿರುವ ಬಿಎಸ್ವೈ ಒಂದೊಂದೇ ಸುಳಿವು ನೀಡಲಾರಂಭಿಸಿದ್ದಾರೆ.
ಸಿ.ಪಿ.ಯೋಗೀಶ್ವರ್ ಅವರಿಗೆ ಸಚಿವ ಸ್ಥಾನ ನೀಡುವುದರ ಬಗ್ಗೆ ಬಿಎಸ್ವೈ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕ ರೇಣುಕಾಚಾರ್ಯ ವಿರೋಧ ವ್ಯಕ್ತಪಡಿಸಿದ್ದರು. ಸುದ್ದಿಗಾರರು ಈ ಬಗ್ಗೆ ಸಿಎಂ ಅವರನ್ನು ಪ್ರಶ್ನಿಸಿದಾಗ, ಸಿ.ಪಿ.ಯೋಗೀಶ್ವರ್ ಸಚಿವರಾಗೋದು ಖಚಿತ ಎಂದು ಬಿಎಸ್ವೈ ಸ್ಪಷ್ಟಪಡಿಸಿದರು.
ಅವರು ಮಂಗಳವಾರ ಬೆಳಗ್ಗೆ ರಾಜ್ಯದ ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿ ನಿಮಿತ್ತ ಅವರ ಪ್ರತಿಮೆ ಗೌರವ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೇಳೆ ಸಚಿವ ಸಂಪುಟಕ್ಕೆ ಸಿಪಿವೈ ಸೇರ್ಪಡೆ ವಿಷಯ ದೃಢೀಕರಿಸಿದರು.