

ಕೋಲಾರ: ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಜಿಲ್ಲೆಯ ಉಸ್ತುವಾರಿ ಹೆಗಲೇರುವುದು ಬಹುತೇಕ ಖಚಿತ. ಈ ವಿಷಯವನ್ನು ಸ್ವತಃ ಸಚಿವರೇ ಕಾರ್ಯಕರ್ತರ ಸಮ್ಮುಖದಲ್ಲಿ ಬಹಿರಂಗಪಡಿಸಿದ್ದಾರೆ.
ಅಬಕಾರಿ ಸಚಿವರಾಗಿದ್ದ ಎಚ್.ನಾಗೇಶ್ ಜಿಲ್ಲಾ ಉಸ್ತುವಾರಿ ಸಚಿವರಾಗಿ 14 ತಿಂಗಳು ಕಾರ್ಯನಿರ್ವಹಿಸಿದ್ದರು. ಸಂಪುಟ ಪುನಾರಚನೆ ವೇಳೆ ರಾಜೀನಾಮೆ ಪಡೆದಿದ್ದರಿಂದ ಜಿಲ್ಲಾ ಉಸ್ತುವಾರಿ ತೆರವಾಗಿದ್ದು, ಜಿಲ್ಲೆಯಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣಕ್ಕೆ ಸಿ.ಪಿ.ಯೋಗೇಶ್ವರ್ ನಿಯೋಜಿತರಾಗಿದ್ದರು.
ಸಚಿವರಾಗಿ ಜಿಲ್ಲೆಗೆ ಮೊದಲ ಭೇಟಿ ವೇಳೆ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಸಿಎಂ ನನ್ನನ್ನು ಕರೆದು ‘ನಿನಗೆ ರಾಮನಗರ ಬೇಡ, ಅಲ್ಲಿ ಯಾವಾಗ್ಲೂ ಗಲಾಟೆ ಜಾಸ್ತಿ, ಕೋಲಾರಕ್ಕೆ ಹೋಗು’ ಎಂದಿದ್ದಾರೆ. ಈ ಬಗ್ಗೆ ಎರಡ್ಮೂರು ದಿನದಲ್ಲಿ ಅಧಿಕೃತ ಆದೇಶ ಹೊರಬೀಳಬಹುದು ಎನ್ನುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ತಮಗೆ ಸಿಗಲಿದೆ ಎಂಬ ಸುಳಿವು ನೀಡಿದ್ದಾರೆ.
ಇದಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡುವಾಗಲೂ ನನಗೆ ರಾಮನಗರ, ಕೋಲಾರ ಬೇರೆಯಲ್ಲ. ಎರಡೂ ಕರ್ನಾಟಕದಲ್ಲೇ ಇರೋದು, ಕೋಲಾರ ಜಿಲ್ಲೆಯ ಉಸ್ತುವಾರಿ ಕೊಟ್ಟರೆ ಖುಷಿಯಿದೆ ಎಂದಿದ್ದರು.
ಬಿಜೆಪಿ ಕಾರ್ಯಾಲಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಗೇಶ್ವರ್, ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಬಲಿಷ್ಠಗೊಳಿಸಲು ಕಾರ್ಯತಂತ್ರ ರೂಪಿಸುತ್ತಿದ್ದೇವೆ. ಭಿನ್ನಾಭಿಪ್ರಾಯ ಬಗೆಹರಿಸಿ ಒಟ್ಟಿಗೆ ಕೆಲಸ ಮಾಡಿದರೆ ಮುಂಬರುವ ಚುನಾವಣೆಯಲ್ಲಿ 6 ಕ್ಷೇತ್ರಗಳನ್ನು ಗೆಲ್ಲುವುದು ಕಷ್ಟವಲ್ಲ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಮಾತನಾಡಿ, ಕೆಸಿ ವ್ಯಾಲಿ ಯೋಜನೆಯಡಿ ಕೆರೆಗಳಿಗೆ ಹರಿಸುತ್ತಿರುವ ನೀರಿನ 3ನೇ ಹಂತದ ಶುದ್ಧೀಕರಣಕ್ಕೆ ಒತ್ತು ನೀಡಬೇಕು. ಎತ್ತಿನಹೊಳೆ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ನೀರು ಹರಿಸಬೇಕು. ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಬನ್ನಿ, ಪಕ್ಷ ಸಂಘಟನೆಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಬಿಜೆಪಿ ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಕೋರ್ ಕಮಿಟಿ ಸದಸ್ಯ ವಿಜಯಕುಮಾರ್, ಮುಖಂಡರಾದ ಎಸ್.ಬಿ. ಮುನಿವೆಂಕಟಪ್ಪ, ನಗರಾಧ್ಯಕ್ಷ ತಿಮ್ಮರಾಯಪ್ಪ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣಗೌಡ, ಕುಡಾ ಸದಸ್ಯರಾದ ಮಮತಮ್ಮ, ಸತ್ಯನಾರಾಯಣರಾವ್ ಇತರರಿದ್ದರು.
ನನಗೆ ಖಾತೆ ತೃಪ್ತಿಯಿದೆ: ಆಡಳಿತ್ಮಕವಾಗಿ ಸರಿದೂಗಿಸಲು ಸಿಎಂ ಕೆಲವು ಸಚಿವರ ಖಾತೆ ಬದಲಾವಣೆ ಮಾಡಿದ್ದಾರೆ. ಖಾತೆ ಹಂಚಿಕೆ ಸಿಎಂ ವಿವೇಚನೆಗೆ ಬಿಟ್ಟಿದ್ದು, ಅವರ ಪರಮಾಧಿಕಾರ. ಒಪ್ಪಿಕೊಳ್ಳುವುದು ನಮ್ಮ ಕರ್ತವ್ಯ, ಮುಖ್ಯಮಂತ್ರಿಗಳಿಗೆ ಸಹಕಾರ ನೀಡಬೇಕಾಗುತ್ತದೆ. ನನಗೆ ವಹಿಸಿರುವ ಖಾತೆಯಲ್ಲಿ ತೃಪ್ತಿ ಇದೆ. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚು ಅವಕಾಶಗಳಿರುವುದರಿಂದ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ಸಿ.ಪಿ. ಯೋಗೇಶ್ವರ್ ನುಡಿದರು.