ನನ್ನ ಶಕ್ತಿ ಏನೆಂದು ತೋರಿಸಿದ್ದೇನೆ ಎಂದ ಸಿಪಿವೈ ಆಡಿಯೋ ವೈರಲ್: ಸ್ಕೆಚ್ ಹಾಕಿ ಎಚ್​ಡಿಕೆ ಸರ್ಕಾರ ಬೀಳಿಸಿದ್ದು ನಾನೇ

9-cpt-2p (2)
Published on

ಚನ್ನಪಟ್ಟಣ: ಕುಮಾರಸ್ವಾಮಿ ಸರ್ಕಾರವನ್ನು ಸ್ಕೆಚ್ ಹಾಕಿ ತೆಗೆದಿದ್ದು ನಾನೇ.., ನನ್ನ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ ಡಿ.ಕೆ. ಸಹೋದರು ಹಾಗೂ ದೇವೇಗೌಡರ ಮನೆಯವರಿಗೆ ನನ್ನ ಶಕ್ತಿ ಏನೆಂದು ತೋರಿಸಿಕೊಟ್ಟಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಧ್ವನಿಯಲ್ಲಿರುವ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ತಾಲೂಕಿನ ಬೇವೂರು ಗ್ರಾಮದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಿಪಿವೈ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದ್ದು, ಭಾಷಣದುದ್ದಕ್ಕೂ ಎಚ್​ಡಿಕೆ ಹಾಗೂ ಡಿಕೆ ಸೋದರರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಈ ಇಬ್ಬರು ನಾಯಕರು ಕುತಂತ್ರದಿಂದ ನನ್ನನ್ನು ಸೋಲಿಸಿದರು. ಅದಕ್ಕಾಗಿ ನಾನು ಬೆಂಗಳೂರಿನಲ್ಲಿ ಸ್ಕೆಚ್ ಹಾಕಿ ಸರ್ಕಾರವನ್ನು ತೆಗೆದೆ ಎಂದು ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಪತನಗೊಳಿಸಿದ ವಿಷಯವನ್ನು ಹೇಳಿರುವುದು ಆಡಿಯೋದಲ್ಲಿದೆ.

ಮಂತ್ರಿಯಾಗುವುದನ್ನು ತಡೆಯಲು ಯತ್ನ: ಇಲ್ಲಿನ ಶಾಸಕರಿಗೆ ತಾಲೂಕಿನ ಹತ್ತು ಊರಿನ ಹೆಸರು ಗೊತ್ತಿಲ್ಲ, ಮೂರು ನಾಯಕರನ್ನು ಬಿಟ್ಟರೆ ಯಾರೊಬ್ಬರೂ ಗೊತ್ತಿಲ್ಲ. ಕ್ಷೇತ್ರದ ಪರಿಚಯವೇ ಅವರಿಗೆ ಇಲ್ಲ. ಆದರೂ, ಜನ ಅವರನ್ನು ಗೆಲ್ಲಿಸಿದರು. ಗೆದ್ದ ನಂತರ ಸಿಕ್ಕ ಅಧಿಕಾರದಿಂದಲೂ ತಾಲೂಕಿಗೆ ಅವರ ಕೊಡುಗೆ ಶೂನ್ಯ. ನನ್ನ ನೀರಾವರಿ ಯೋಜನೆಯನ್ನು ತಮ್ಮದೆಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಬಿಜೆಪಿಗೆ ಸಹಾಯ ಮಾಡಲಿ ಎಂದು ಕುಮಾರಸ್ವಾಮಿಯನ್ನು ಯಾರೂ ಕೇಳಿಕೊಳ್ಳುತ್ತಿಲ್ಲ. ಆದರೂ ಪಕ್ಷ ಉಳಿಸಿಕೊಳ್ಳಲು ಬಿಜೆಪಿಗೆ ಸಹಕಾರ ಮಾಡುತ್ತಿದ್ದಾರೆ. ಯೋಗೇಶ್ವರ್ ಮಂತ್ರಿಯಾದರೆ, ಇರುವ ಮೂವತ್ತು ಜನ ಶಾಸಕರಲ್ಲಿ ಇಪ್ಪತ್ತು ಜನ ಶಾಸಕರನ್ನು ಖಾಲಿ ಮಾಡಿಸುತ್ತಾನೆ ಎಂಬ ಭಯದಿಂದ ನಾನು ಮಂತ್ರಿಯಾಗುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವುದು ಆಡಿಯೋದಲ್ಲಿದೆ.

ತಿಹಾರ್ ಜೈಲಿಗೆ ಹೋದವರು ಇಂದು ಕೆಪಿಸಿಸಿ ಅಧ್ಯಕ್ಷ

ಅವತ್ತು ಜೋಡೆತ್ತುಗಳಾಗಿದ್ದ ಈ ಇಬ್ಬರು ಇಂದು ಕಿತ್ತಾಡುತ್ತಿದ್ದಾರೆ. ಇನ್ನು ಅಧಿಕಾರ ಹೋಗುತ್ತಿದ್ದಂತೆ ಶಿವಕುಮಾರ ತಿಹಾರ್ ಜೈಲಿಗೆ ಹೋದ. ಕರ್ನಾಟಕ ರಾಜ್ಯದಿಂದ ಅಲ್ಲಿಗೆ ಹೋದವನು ಶಿವಕುಮಾರ್ ಒಬ್ಬನೇ, ಈಗ ಕೆಪಿಸಿಸಿ ಅಧ್ಯಕ್ಷನಾಗಿದ್ದಾನೆ. ಅವನ ತಮ್ಮ ಎಂಪಿ ಸುರೇಶ ನನ್ನನ್ನು ಯಾರು ಅಂತಿದ್ದ, ಈಗ ಅಣ್ಣ-ತಮ್ಮನಿಗೆ ಚನ್ನಪಟ್ಟಣದವರ ಶಕ್ತಿ ಗೊತ್ತಾಗಿದೆ. ದೇವೇಗೌಡರ ಮನೆಯವರಿಗೂ ನಾನು ಏನೆಂದು ಗೊತ್ತಾಗಿದೆ ಎಂದು ಗುಡುಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net