ತನಿಖೆಗೆ ನನ್ನ ಸಹಕಾರವಿದೆ. ಆದರೆ, ಗುತ್ತಿಗೆದಾರರ ಬಿಲ್​ ತಡೆಹಿಡಿಯುವಂತೆ ಸಿಎಂ ಗೆ ಪತ್ರ ಬರೆದ ಹಿಂದಿನ ಉದ್ದೇಶವೇನು? ಬಿ.ಆರ್​. ಯಾವಗಲ್​ ಅವರಿಗೆ ಶಾಸಕ ಸಿ.ಸಿ. ಪಾಟೀಲ ಪ್ರಶ್ನೆ

20231012_154514
Published on

ವಿಜಯವಾಣಿ ಸುದ್ದಿಜಾಲ ಗದಗ
ನರಗುಂದದಲ್ಲಿ ನಡೆದ ಕಾಮಗಾರಿಗಳ ಗುಣಮಟ್ಟ ತನಿಖೆಗೆ ನನ್ನ ಬೆಂಬಲ ಮತ್ತು ಸಹಕಾರವಿದೆ ಆದರೆ, ಮಾಜಿ ಶಾಸಕ ಬಿ.ಆರ್​. ಯಾವಗಲ್​ ಅವರು ಚುನಾವಣಾ ಪೂರ್ವದಲ್ಲೇ ತನಿಖೆಗೆ ಒತ್ತಾಯಿಸುವ ಬದಲಾಗಿ ಚುನಾವಣಾ ನಂತರ ತನಿಖೆಗೆ ಆಗ್ರಹಿಸುತ್ತೀರುವ ಹಿಂದಿನ ಉದ್ದೇಶವೇನು ಎಂಬುದು ಜನರಿಗೆ ಗೊತ್ತಾಗಬೇಕಿದೆ ಎಂದು ಮಾಜಿ ಸಚಿವ ನರಗುಂದ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಾಜಿ ಶಾಸಕ ಬಿ ಆರ್​ ಯಾವಗಲ್​ ಅವರು ಇತ್ತೀಚೆಗೆ ಸುದ್ದಿಗೋಷ್ಟಿ ನಡೆಸಿ ತಮ್ಮ ಮೇಲೆ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಆರೋಪವನ್ನು ತಳ್ಳಿಹಾಕಿದರು.
"ನರಗುಂದ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ತನಿಖೆ ನಡೆಸಬೇಕು ಮತ್ತು ಗುತ್ತಿಗೆದಾರರ ಬಿಲ್​ ತಡೆ ಹಿಡಿಯಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಶಾಸಕ ಬಿ.ಆರ್​. ಯಾವಗಲ್​ ಪತ್ರ ಬರೆದಿದ್ದಾರೆ. ತನಿಖೆ ನಡೆಸುವುದಕ್ಕೆ ನನ್ನದೇನು ತಕರಾರಿಲ್ಲ. ಶಾಸಕನಾಗಿ ತನಿಖೆಗೆ ನನ್ನ ಸಂರ್ಪೂಣ ಬೆಂಬಲ, ಸಹಾಕರವಿದೆ. ಆದರೆ, ಸಾಲ ಮಾಡಿ ಹಣ ಕ್ರೂಢಿಕರಿಸಿ ಗುತ್ತಿಗೆ ಪಡೆದ ಗುತ್ತಿಗೆದಾರನಿಗೆ ಬಿಲ್​ ಪಾವತಿ ಮಾಡಬೇಕು ಎಂದು ಸಿದ್ದರಾಮಯ್ಯ ಅವರಿಗೆ ನಾನೂ ಪತ್ರ ಬರೆದಿದ್ದೇವೆ. ಗುತ್ತಿಗೆದಾರರಿಗೆ ಬಿಲ್​ ಪಾವತಿ ತಡೆ ಹಿಡಿಯಬೇಕು ಎಂದು ಯಾವಗಲ್​ ಅವರು ಪತ್ರ ಬರೆದ ಹಿಂದಿನ ಉದ್ದೇಶ ಬಹಿರಂಗಗೊಳ್ಳಬೇಕಿದೆ ಎಂದರು.
5 ಬಾರಿ ನರಗುಂದ ಕ್ಷೇತ್ರದ ಜನರು ಬಿ.ಆರ್​. ಯಾವಗಲ್​ ಅವರನ್ನು ಆಯ್ಕೆ ಮಾಡಿದ್ದರು. ಕ್ಷೇತ್ರದಲ್ಲಿ ಇಂಜಿನಿಯರಿಂಗ್​ ಕಾಲೇಜು ಹೊರತುಪಡಿಸಿ ಬೇರೆನೂ ಅಭಿವೃದ್ದಿ ಮಾಡಿಲ್ಲ. ನಾನು ಸಚಿವನಾದ ನಂತರ ಹಿಂದೆಂದೂ ಕಾಣದಂತೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ. 1800 ಕೋಟಿ ವೆಚ್ಚದಲ್ಲಿ ರಸ್ತೆ, ಇತರೆ ಕಾಮಗಾರಿಗಳು ನಡೆದಿವೆ ಎಂದರು.

ಬಿ.ಆರ್​. ಯಾವಗಲ್​ ವಿರುದ್ಧ ಹರಿಹಾಯ್ದರು:
ಬಿ.ಆರ್​. ಯಾವಗಲ್​ ರಾಜಕೀಯ ಹತಾಶೆಯಿಂದ ಸುದ್ದಿಗೋಷ್ಟಿ ನಡೆಸಿದ್ದಾರೆ. ಅವರ ವಯಸ್ಸು ಮತ್ತು ನನ್ನ ವಿರುದ್ಧ ನಾಲ್ಕು ಬಾರಿ ಸ್ಪಧಿರ್ಸಿ ಪರಾಭವಗೊಂಡಿದ್ದರಿಂದ ಹತಾಶೆಯಾಗಿದ್ದಾರೆ. ಕಾಂಗ್ರೆಸ್​ ಗಾಳಿಯ ನಡುವೆಯೂ ಚುನಾವಣೆಯಲ್ಲಿ ಸೋತ ನೋವು ಯಾವಗಲ್​ ಅವರನ್ನು ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.
ನರಗುಂದ ಆಯಿಲ್​ ಮಿಲ್​ನಲ್ಲಿ ಗೌಪ್ಯವಾಗಿ ಗುತ್ತಿಗೆದಾರರನ್ನು ಕರೆಸಿ ಬಿ.ಆರ್​. ಯಾವಗಲ್​ ಸಭೆ ಮಾಡುತ್ತಿದ್ದಾರೆ. ಅವರ ಕುಟುಂಬಸ್ಥರು ಎಲ್ಲ ಇಲಾಖೆ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಮರಳು, ಗುತ್ತಿಗೆದಾರರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದರು.
ಚುನಾವಣಾ ಪೂರ್ವದಲ್ಲಿ ಪ್ರತಿ ಬೂತ್​ ನಲ್ಲೂ ಅಭಿವೃದ್ಧಿ ಕುರಿತು ್ಲೆಕ್ಸ್​ ಹಾಕಿ ಜನರಿಗೆ ಮಾಹಿತಿ ನೀಡೆದ್ದವು. ಆಗ ಕಾಂಗ್ರೆಸ್​ ನಾಯಕರೂ ಯಾರೂ ಪ್ರಶ್ನೆ ಮಾಡಲಿಲ್ಲ. ಕಾಮಗಾರಿ ಕಳಪೆ ಆಗಿದೆ ಎಂದು ಯಾರೂ ಪ್ರಶ್ನಿಸಲಿಲ್ಲ. ಚುನಾವಣೆಯಲ್ಲಿ ಸೋತ ನಂತರ ಈಗ ಆರೋಪ ಮಾಡುತ್ತಿದ್ದಾರೆ. ರಾಜಕಾರಣದ ಚೌಕಟ್ಟಿನಲ್ಲಿ ಸುದ್ದಿಗೋಷ್ಟಿ ನಡೆಸಬೇಕು. ಯಾವಗಲ್​ ಅವರು ನನ್ನ ವಿರುದ್ಧ ಮಾಡಿದ ಸುದ್ದಿಗೋಷ್ಟಿ ಮಾನಹಾನಿ ಕೇಸ್​ ಹಾಕುವ ವ್ಯಾಪ್ತಿಗೆ ಬರುತ್ತದೆ ಎಂದರು.

ಮಲಪ್ರಭಾ ಅಚ್ಚುಕಟ್ಟು ಪ್ರದೇಶ:
ಮಲಪ್ರಭಾ ಅಚ್ಚುಕಟ್ಟು ಪ್ರದೇಶ ಕಾಮಗಾರಿಯಲ್ಲಿ 7 ಕೋಟಿ ಅಕ್ರಮ ಎಸಗಿದವರು ಯಾರು ಎಂದು ಪರೋಕ್ಷವಾಗಿ ಮಾತಿನ ವಾಗ್ಭಾಣ ಬಿಟ್ಟ ಸಿ.ಸಿ. ಪಾಟೀಲ, ಧಾರವಾಡ ಕೆಸಿಸಿ ಬ್ಯಾಂಕ್​ ಹಾಳಾಗಲು ಬಿ.ಆರ್​. ಯಾವಗಲ್​ ಪಾತ್ರ ದೊಡ್ಡದಿದೆ. ಕೆಸಿಸಿ ಬ್ಯಾಂಕ್​ ನಿಂದ ನರಗುಂದ ಆಯಿಲ್​ ಮಿಲ್​ ಗೆ ನೂರಾರು ಕೋಟಿ ಹಣ ಮಂಜೂರು ಮಾಡಿಕೊಂಡಿದ್ದಾರೆ. ಅದರಲ್ಲೂ ಅಕ್ರಮ ಎಸಗಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನೆ ಹಾಕುತ್ತೇನೆ ಎಂದು ಆರೋಪಿಸಿದರು.

40 ಎಕರೆ ಗೋಲ್​ ಮಾಲ್​:
ನರಗುಂದ ಗುಡ್ಡದ ಮೇಲೆ 40 ಎಕರೆ ಸರ್ಕಾರಿ ಜಮೀನು ಖರೀದಿಸಿದ್ದ ಬಿ.ಆರ್​. ಯಾವಗಲ್​, ಅದೇ ಜಮೀನನ್ನು ದೊಡ್ಡ ಮೊತ್ತಕ್ಕೆ ಸರ್ಕಾರಕ್ಕೆ ಮರು ಮಾರಾಟ ಮಾಡಿ ಹಣ ಗಳಿಸಿದ್ದಾರೆ. ಇದನ್ನು ಹಗಲು ದರೋಡೆ ಎನ್ನದೇ ಮತ್ತೇನು ಹೇಳಬೇಕು ಎಂದರು.
ಸುದ್ದಿಗೋಷ್ಟಿಯಲ್ಲಿ ಮುತ್ತಣ್ಣ ಲಿಂಗನಗೌಡರ, ನಿಂಗಪ್ಪ ಮಣ್ಣೂರು ಇತರರು ಇದ್ದರು.

ಬಾಕ್ಸ್​:
ಕಳೆದ ಸೋಮವಾರ ಮಾಜಿ ಶಾಸಕ ಬಿ.ಆರ್​. ಯಾವಗಲ್​ ಸುದ್ದಿಗೋಷ್ಟಿ ನಡೆಸಿ, ಸಿ.ಸಿ. ಪಾಟೀಲ ಮೇಲೆ ಅಕ್ರಮ ನಡೆಸಿರುವ ಆರೋಪ ಮಾಡಿದ್ದರು. ನರಗುಂದ ಮತಕ್ಷೇತ್ರದ ವ್ಯಾಪ್ತಿಯಲ್ಲಿ 2022&-23 ನೆ ಸಾಲಿನಲ್ಲಿ ಅನುಷ್ಠಾನಗೊಂಡ ಅಂದಾಜು 500 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ತನಿಖೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ. ನರಗುಂದ ಬೈಪಾಸ್​ ನಿರ್ಮಾಣಕ್ಕೆ 2104 ರಲ್ಲಿ 80 ಕೋಟಿ ರೂ. ಅಂದಾಜು ಮಾಡಲಾಗಿತ್ತು. ಆದರೆ ಸಿ.ಸಿ. ಪಾಟೀಲ ಅವರು 130 ಕೋಟಿಗೆ ಹೆಚ್ಚಿಸಿದ್ದಾರೆ. 5.7 ಕಿ.ಮೀ ರಸ್ತೆಯನ್ನು 7.3 ಕಿ.ಮೀ.ಗೆ ಹೆಚ್ಚಿಸಿದ್ದಾರೆ. 93 ಎಕರೆ ಭೂಸ್ವಾಧಿನವನ್ನು 81 ಎಕರೆಗೆ ಇಳಿಸಿದ್ದಾರೆ. ಇಂಥ ಹಲವಾರು ಅಕ್ರಮಗಳ ಬಗ್ಗೆ ತನಿಖೆ ನಡೆದು, ಸತ್ಯಾಸತ್ಯತೆ ಹೊರಬರ ಬರಬೇಕು ಎಂದು ಸುದ್ದಿಗೋಷ್ಟಿ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net