

ನರಗುಂದ: ಸರ್ಕಾರದಿಂದ ಕೆಲ ಅನುದಾನ ತಂದು ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ಕೆ ಶಾಸಕ ಸಿ.ಸಿ. ಪಾಟೀಲ ಅವರು ಅಡ್ಡಿಪಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ಲ ಆರೋಪಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಿಎಸ್ಟಿ ಕಡಿಮೆ ಮಾಡಿದ್ದರಿಂದ ರಾಜ್ಯ ಸರ್ಕಾರಕ್ಕೆ 1500 ಕೋಟಿ ರೂ. ನಷ್ಟ ಉಂಟಾಗುತ್ತದೆ. 20 ಸಾವಿರ ಕೋಟಿ ರೂ. ಬಾಕಿ ತೆರಿಗೆ ಹಣ ಪಾವತಿಸಿಲ್ಲ. ಈ ನಡುವೆ ಸಾಕಷ್ಟು ವಿರೋಧಗಳಿದ್ದರೂ ಸಾರ್ವಜನಿಕರು ನಿತ್ಯ ಬಳಸುವ ವಿವಿಧ ವಸ್ತುಗಳಿಗೆ ವಿಧಿಸಿದ್ದ 100 ರೂ. ತೆರಿಗೆಯಲ್ಲಿ ಕೇವಲ ಶೇ.20 ರಷ್ಟು ಇಳಿಕೆ ಮಾಡಿದ್ದಾರೆ. ಇದನ್ನೇ ದೊಡ್ಡಮಟ್ಟದ ಸಾಧನೆ ಎಂಬಂತೆ ಬಿಜೆಪಿಯವರು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವುದು ಖಂಡನೀಯ ಎಂದರು.
ರಾಜ್ಯದಲ್ಲಿ ಪ್ರಸಕ್ತ ವರ್ಷ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಕೆಲ ರಸ್ತೆಗಳು ಹದಗೆಟ್ಟಿವೆ. ಆದರೆ, ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದು ಇದೇ ಮೊದಲಲ್ಲ. ಬಿಜೆಪಿ ಸರ್ಕಾರದಲ್ಲಿ ಪಿಡಬ್ಲುೃಡಿ ಮಂತ್ರಿಯಾಗಿದ್ದ ಸಿ.ಸಿ. ಪಾಟೀಲ 32 ಸಾವಿರ ಕೋಟಿ ರೂ. ಬಿಲ್ ಬಾಕಿ ಇಟ್ಟಿದ್ದರು. ಈ ಪೈಕಿ 22 ಸಾವಿರ ಕೋಟಿ ರೂ. ಕಾಂಗ್ರೆಸ್ ಸರ್ಕಾರ ಪಾವತಿಸಿದೆ ಎಂದರು.
ಬಿಜೆಪಿ ಸರ್ಕಾರದಲ್ಲಿ ನೀವು ಎಷ್ಟು ಗುಂಡಿ ಮುಚ್ಚಿಸಿದ್ದೀರಿ?. ಜವಾಬ್ದಾರಿಯಿಂದ ಗುಣಮಟ್ಟದ ಕೆಲಸ ಮಾಡಿಸಿದ್ದರೆ ಯಾಕೆ ಹೀಗಾಗುತ್ತಿತ್ತು? ಎಂದು ಹರಿಹಾಯ್ದರು.
ಪ್ರವೀಣ ಯಾವಗಲ್ಲ, ಎಂ.ಎಸ್. ಪಾಟೀಲ, ಅಪ್ಪಣಗೌಡ ನಾಯ್ಕರ, ರಾಜು ಕಲಾಲ, ಕೆ.ಬಿ. ಖಲೀಫ್, ಎಂ.ಬಿ. ಅರಹುಣಸಿ, ದ್ಯಾಮಣ್ಣ ಸವದತ್ತಿ, ಮಲ್ಲಣ್ಣ ಕೊಳ್ಳೇರಿ, ರವಿ ಯರಗಟ್ಟಿ, ಪ್ರಕಾಶ ಹಡಗಲಿ, ನೀಲಪ್ಪ ಗುಡದನ್ನವರ, ಸುನೀಲ ಕಳಸಣ್ಣವರ, ಅಮರೇಶ ಕೋಟಿ, ವಿಷ್ಣು ಸಾಠೆ, ಬಿ.ಐ. ಕಡಕೋಳ, ಮೌಲಾಸಾಬ ಅರಬಜಮಾದಾರ, ದಿವಾನಸಾಬ ಕಿಲ್ಲೇದಾರ, ವೀರೇಶ ಚುಳಕಿ, ಅನಿಲ ಕುಟುಕನಕೇರಿ, ಮಲ್ಲೇಶಪ್ಪ ಅಬ್ಬಿಗೇರಿ, ಹನುಮಂತ ರಾಮಣ್ಣವರ, ಇತರರಿದ್ದರು.
ನರಗುಂದ ಬಸವೇಶ್ವರನಗರ ಬಡಾವಣೆಗೆ ನಾನು ಶಾಸಕನಾಗಿದ್ದಾಗ 7ಎಕರೆ ಜಮೀನು ಖರೀದಿಸಿ ಆಶ್ರಯ ಯೋಜನೆಯಡಿ 265 ಮನೆ ನಿರ್ಮಿಸಿಕೊಡಲಾಗಿತ್ತು. ಕಾರಣಾಂತರಗಳಿಂದ ಕೆಲ ಮನೆಗಳಿಗೆ ಇ-ಸ್ವತ್ತು ವಿತರಿಸುವುದು ಬಾಕಿಯಿತ್ತು. ಈ ಬಗ್ಗೆ ಬಿಜೆಪಿ ಸದಸ್ಯರೊಬ್ಬರು ನನ್ನ ಗಮನಕ್ಕೆ ತಂದಿದ್ದರಿಂದ ಅದನ್ನು ಬಗೆಹರಿಸಿಕೊಡಲಾಗಿದೆ. ಆದರೀಗ ಶಾಸಕ ಸಿ.ಸಿ. ಪಾಟೀಲ ಅವರು 30 ವರ್ಷದ ಸಮಸ್ಯೆ ನಾನೇ ಬಗೆಹರಿಸಿದ್ದೇನೆಂದು ಹೇಳುತ್ತಿದ್ದಾರೆ. ಸತ್ಯಹರಿಶ್ಚಂದ್ರರಂತೆ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಯಾರೋ ಮಾಡಿದ ಕೆಲಸವನ್ನು ತಮ್ಮದೆಂಬಂತೆ ಜಂಭ ಕೊಚ್ಚಿಕೊಳ್ಳುವುದು ಒಳ್ಳೆಯದಲ್ಲ. ಬಿ.ಆರ್. ಯಾವಗಲ್ಲ, ಮಾಜಿ ಸಚಿವ