ರಾಜ್ಯದಲ್ಲಿ ಯಾರೂ ನೆಮ್ಮದಿಯಿಂದ ಇಲ್ಲ,  ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ

IMG_20241121_203246_669.jpg
Published on

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾರೂ ನೆಮ್ಮದಿಯಿಂದ ಇಲ್ಲ, ಅಭಿವೃದ್ಧಿ ಕಾರ್ಯಗಳು ನಡೆಯದೇ ಆಡಳಿತ ಪಕ್ಷದ ಶಾಸಕರೂ ನೆಮ್ಮದಿ ಕಾಣದಾಗಿದ್ದಾರೆ. ಸಿದ್ದರಾಮಯ್ಯ ಒಬ್ಬ ಅಸಮರ್ಥ ಮುಖ್ಯಮಂತ್ರಿ ಎಂದು ಅವರ ಶಾಸಕರೇ ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ನಗರದ ರುದ್ರಾಕ್ಷಿಮಠದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರೀ ನಿಜಗುಣರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

15 ಬಾರಿ ಬಜೆಟ್ ಮಂಡನೆ ಮಾಡಿರುವ ಸಿಎಂ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಕೆಲ ಶಾಸಕರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬರುತ್ತಿದೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ನೋಡಿದರೆ ಅಯ್ಯೋ ಪಾಪ ಎನಿಸುತ್ತಿದೆ. ಸಿಎಂ ಸ್ಥಾನದ ನತೆ ಹಾಳು ಮಾಡಿದ್ದಾರೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.

ಒಂದೆಡೆ ಬಿಪಿಎಲ್ ಕಾರ್ಡ್ ರದ್ದು ಮಾಡುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಹುನ್ನಾರ ಸಿಎಂ ಮಾಡಿದ್ದಾರೆ. ಸುಮಾರು 25 ಲಕ್ಷ ಕಾರ್ಡ್ ರದ್ದು ಪಡಿಸುವ ಉದ್ದೇಶ ಅವರಿಗಿದೆ. ಇದರಿಂದ ಗ್ಯಾರಂಟಿ ಯೋಜನೆ ಮೇಲಿನ ಹೊರೆ ಕಡಿಮೆ ಮಾಡಿ ಹಣ ಉಳಿಸುವ ಸಂಚು ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.

ಹಾಗೆ ನೋಡಿದರೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿ ಶೇ. 92.5ರಷ್ಟು ಸಹಾಯವನ್ನು ಕೇಂದ್ರ ಸರ್ಕಾರವೇ ಮಾಡುತ್ತಿದೆ. ಉಳಿದ 7.5 ಮಾತ್ರ ರಾಜ್ಯ ಸರ್ಕಾರ ನಿರ್ವಹಣೆ ಮಾಡುತ್ತದೆ. ಹೀಗಿದ್ದರೂ ಬಡವರ ಬಿಪಿಎಲ್ ರದ್ದು ಮಾಡಿ ಅವರನ್ನು ಬೀದಿಗೆ ತರುತ್ತಿದ್ದಾರೆ. ಯಾವ ಮಾನದಂಡದ ಆಧಾರದಲ್ಲಿ ಬಿಪಿಎಲ್ ರದ್ದು ಮಾಡುತ್ತೀರಿ? ಬೀದಿ ಬದಿ ವ್ಯಾಪಾರಿ ಕೂಡ ಇಂದು ಪ್ಯಾನ್ ಕಾರ್ಡ್ ಹೊಂದಿರುತ್ತಾನೆ. ಅಧಿಕಾರಿಗಳು ಕಂಪ್ಯೂಟರ್ ಮುಂದೆ ಕುಳಿತು ಪ್ಯಾನ್ ಇದ್ದಿದ್ದಕ್ಕೆ ರದ್ದು ಎಂದು ಹೇಳಿದರೆ ಹೇಗೆ? ಎಂದು ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕಕ್ಕೆ ಕೇಂದ್ರದ ಅನುದಾನ ಕಡಿತ ಎಂದು ಸುಖಾಸುಮ್ಮನೇ ಆರೋಪ ಮಾಡುವುದು ಸರಿಯಲ್ಲ. ಕರ್ನಾಟಕ ಮಾತ್ರವಲ್ಲ, ದೇಶದ ಎಲ್ಲ ರಾಜ್ಯಗಳಿಗೂ ಕಡಿತ ಆಗಿದೆ. ಇದು ಯಾಕೆ ಎಂಬುದು ಸಿಎಂಗೆ ಗೊತ್ತಿದೆ. ಗ್ಯಾರಂಟಿ ಹೆಸರಲ್ಲಿ ಜನರ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಎದುರಾದ ಹಣಕಾಸಿನ ಮುಗ್ಗಟ್ಟು ಒಪ್ಪಿಕೊಳ್ಳದೇ ತಮ್ಮ ತಪು$್ಪ ಮರೆಮಾಚಲು ಹೊರಟಿದ್ದಾರೆ ಎಂದು ಗುಡುಗಿದರು.

ವಕ್ಫ ವಿಚಾರದಲ್ಲಿ ರೈತರಿಗೆ ನೋಟಿಸ್ ಕೊಟ್ಟಿರುವುದು ತಮಗೆ ಗೊತ್ತೇ ಇಲ್ಲ ಎನ್ನುತ್ತಾರೆ. ಇನ್ನೊಂದೆಡೆ ಅಧಿಕಾರಿಗಳು, ಸಚಿವರು ಸಿಎಂ ಸೂಚನೆ ಮೇರೆಗೆ ಮಾಡಿದ್ದೇವೆ ಎನ್ನುತ್ತಾರೆ. ಇಂತಹ ದ್ವಂದ್ವ ಏಕೆ? ಎಂದರು.

ವಕ್ಫ ಹೋರಾಟದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಲ್ಲಿ ಯಾರು ಮೊದಲು ಹೋರಾಟ ಶುರು ಮಾಡಿದ್ದಾರೆ ಎಂಬುದು ಮುಖ್ಯ ಅಲ್ಲ. ಪ್ರಧಾನಿ ಮೋದಿ ಅವರು ವಕ್ಫ ತಿದ್ದುಪಡಿ ತರಲು ಹೊರಟಿದ್ದಾರೆ. ಅದಕ್ಕೆ ಪೂರಕ ಹೋರಾಟ ನಡೆಸಲಾಗುತ್ತಿದೆ. ಪಕ್ಷಕ್ಕೆ ರೈತರ ಹಿತ ಮುಖ್ಯವಾಗಿದೆ. ಅದಕ್ಕಾಗಿ ಮೂರು ತಂಡವಾಗಿ ರಾಜ್ಯ ಪ್ರವಾಸ ಮಾಡಲಿದ್ದೇವೆ. ರೈತರ ಪರ ಹೋರಾಟ ಮಾಡುವುದು ಪಕ್ಷದ ಅಧ್ಯಕ್ಷನಾಗಿ ನನ್ನ ಕರ್ತವ್ಯವಾಗಿದೆ. ಬಸನಗೌಡ ಪಾಟೀಲ ಯತ್ನಾಳ ಅವರು ಹೋರಾಟದಲ್ಲಿ ಇರುತ್ತಾರೆ. ಇದರಲ್ಲಿ ಕ್ರೆಡಿಟ್ ತೆಗೆದುಕೊಳ್ಳುವುದು ನನಗೆ ಮುಖ್ಯವಲ್ಲ ಎಂದು ಉತ್ತರಿಸಿದರು.

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆರ್ ನೀಡುವ ಅಗತ್ಯ ನಮಗಿಲ್ಲ. 66 ಶಾಸಕರು ಇರುವ ಬಿಜೆಪಿಗೆ ಸರ್ಕಾರ ಮಾಡುವ ಅಗತ್ಯವೂ ಇಲ್ಲ. ಸಿಎಂ ಸಿದ್ಧರಾಮಯ್ಯ ಅವರೇ ಸ್ವತಃ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಅದರಿಂದ ಪಾರಾಗಲು ಇಲ್ಲಸಲ್ಲದ ಆಫರ ಬಗ್ಗೆ ಮಾತಾಡುತ್ತಾರೆ. ಸಿಎಂ ಕುರ್ಚಿಯನ್ನೇ ಅವರು ಹರಾಜಿಗೆ ಇಟ್ಟಿದ್ದಾರೆ ಎಂದು ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net