

ಹುಬ್ಬಳ್ಳಿ: ವೀರಶೈವ ಸಮಾಜವಷ್ಟೇ ಅಲ್ಲ ಇಂದು ಬಹಳಷ್ಟು ಸಮಾಜಗಳು ಕವಲು ದಾರಿಯಲ್ಲಿವೆ. ಸಮಾಧಾನ, ಸಂತೋಷ ಎಂಬುದು ಎಲ್ಲಿಯೂ ಕಾಣುತ್ತಿಲ್ಲ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿಲ್ಲ, ಕುಟುಂಬಗಳಲ್ಲಿಯೂ ಅನ್ಯೋನ್ಯತೆ ಮಾಯವಾಗಿದೆ. ಇಂತಹ ಸಂದರ್ಭದಲ್ಲಿ ಮಠಗಳು, ಸ್ವಾಮೀಜಿಗಳು ಸಮಾಜವನ್ನು ತಿದ್ದುವ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.
ನಗರದ ಮಂಗಳವಾರಪೇಟೆಯ ಶ್ರೀ ರುದ್ರಾಕ್ಷಿಮಠದಲ್ಲಿ ಏರ್ಪಡಿಸಿರುವ ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಉಚಿತ ಆರೋಗ್ಯ ತಪಾಸಣೆ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಯಾರೊಬ್ಬರ ಏಳಿಗೆಯನ್ನು ಸಹಿಸದ ವಾತಾವರಣ ನಿರ್ಮಾಣವಾಗಿದೆ. ಈ ದಿಸೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರ ಕೊಡಬೇಕಾಗಿದೆ ಎಂದರು.
ಕ್ರಿಶ್ಚಿಯನ್ ಮಿಶಿನರಿಗಳು ಅಷ್ಟೇ ಅಲ್ಲ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಕೂಡ ಭಾರತದ ಸಂಸ್ಕೃತಿ, ಸಂಪ್ರದಾಯ ಹಾಗೂ ಶಿಕ್ಷಣ ಪದ್ಧತಿಯನ್ನು ನಾಶ ಮಾಡಿ ದೇಶದ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದರು. ಅಂತಹ ಸಂಕಷ್ಟದ ಸಂದರ್ಭದಲ್ಲಿ ಮಠ-ಮಾನ್ಯಗಳು ಉಚಿತ ಅನ್ನ, ಅಕ್ಷರ ದಾಸೋಹ ಮಾಡುವ ಮೂಲಕ ದೇಶದ ಪರಂಪರೆ ಉಳಿಸಲು ಶ್ರಮಿಸಿದವು ಎಂದರು.
ಸಾನ್ನಿಧ್ಯ ವಹಿಸಿದ್ದ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ತಂದೆ ಬಿ.ಎಸ್. ಯಡಿಯೂರಪ್ಪ ಅವರಂತೆ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅಧಿಕಾರ ತೆಗೆದುಕೊಂಡು ಒಂದೇ ವರ್ಷದಲ್ಲಿ ರಾಜ್ಯವನ್ನು ಸುತ್ತಿದ್ದಾರೆ. ಜನರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ ಎಂದರು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಮಠ-ಮಾನ್ಯಗಳಿಗೆ ನೀಡಿದ್ದ ವಿಶೇಷ ಅನುದಾನಗಳಿಂದಲೇ ಇಂದು ಅನೇಕ ಮಠಗಳು ಅಭಿವೃದ್ಧಿಯಾಗಿವೆ. ವಿಜಯೇಂದ್ರ ಅವರಿಂದಲೂ ರಾಜ್ಯದಲ್ಲಿ ಇನ್ನೂ ಹೆಚ್ಚಿನ ಕಾರ್ಯಗಳು ಆಗಲಿ ಎಂದು ಹಾರೈಸಿದರು.
ಉತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಮಾತನಾಡಿ, ಶ್ರೀ ನಿಜಗುಣ ಶಿಯೋಗಿಗಳ ಜನನ, ಶಿಕ್ಷಣ, ಅಧ್ಯಾತ್ಮಿಕ ಪ್ರಚಾರ ಹಾಗೂ ಅವರ ಸಾಧನೆಗಳ ಬಗ್ಗೆ ವಿವರಿಸಿದರು.
ಉಚಿತ ಶಿಬಿರಕ್ಕೆ ನೆರವಾದ ಡಾ. ಪಿ.ಎನ್. ಬಿರಾದಾರ, ಡಾ. ಅನಿತಾ ಹಳಕಟ್ಟಿ, ಡಾ. ಲಕ್ಷಿ$್ಮ ಪಾಟೀಲ, ಡಾ. ಸವಿತಾ ಸಜ್ಜನ, ಡಾ. ವಿಶಾಲ ಕುಮಾರ್, ಡಾ. ಎಸ್.ಎ. ಪಾಟೀಲ, ಡಾ. ರಾಜಶ್ರೀ ಸೂಜಿ, ರಾಷ್ಟ್ರೊತ್ಥಾನ ರಕ್ತನಿಧಿ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಕಾರಂಜಿ ಮಠದ ಶ್ರೀ ಶಿವಯೋಗಿ ದೇವರು, ದೋಟಿಹಾಳದ ಶ್ರೀ ಚಂದ್ರಶೇಖರ ದೇವರು, ಶ್ರೀ ಸದಾನಂದ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ವಿಶ್ವನಾಥ ಅಮರಶೆಟ್ಟಿ, ಸವಿತಾ ಅಮರಶೆಟ್ಟಿ, ವಿರೂಪಾಕ್ಷ ಯಮಕನಮರಡಿ, ಡಾ. ಮಹೇಶ ನಾಲವಾಡ, ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಬಸವರಾಜ ಕುಂದಗೋಳಮಠ, ಮಹಾಂತೇಶ ಗಿರಿಮಠ, ಪ್ರಭು ಹುಕ್ಕೇರಿಮಠ, ಮಲ್ಲಿಕಾರ್ಜುನ ಶಿರಗುಪ್ಪಿ, ಇತರರು ಪಾಲ್ಗೊಂಡಿದ್ದರು.