

ಶಿವಮೊಗ್ಗ: ವಕ್ಫ್ ವರದಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಣಿಪ್ಪಾಡಿ ಅವರಿಗೆ ಈ ಹಿಂದೆ ಬಿ.ವೈ.ವಿಜಯೇಂದ್ರ 150 ಕೋಟಿ ರೂ. ಆಮಿಷವೊಡ್ಡಿದ್ದರು ಎಂಬ ಕಾಂಗ್ರೆಸ್ಸಿಗರ ಆರೋಪ ನಿರಾಧಾರ. ಈ ಬಗ್ಗೆ ಮಣಿಪ್ಪಾಡಿ ಕೂಡಾ ಸ್ಪಷ್ಟನೆ ನೀಡಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರಿಂದ ಕಾಂಗ್ರೆಸ್‌ನವರಿಗೆ ಮುಖಭಂಗವಾಗಿದೆ. ಕೋಟ್ಯಂತರ ರೂ. ಬೆಲೆಬಾಳುವ ವಕ್ಫ್ ಆಸ್ತಿಯನ್ನು ಪರಭಾರೆ ಮಾಡಿರುವ ವಿಚಾರವನ್ನು ವರದಿಯಲ್ಲಿ ಉಲ್ಲೇಖಿಸದಂತೆ ಕಾಂಗ್ರೆಸ್‌ನವರೇ ಹಣದ ಆಮಿಷವೊಡ್ಡಿದ್ದರು ಎಂಬುದನ್ನು ಮಣಿಪ್ಪಾಡಿ ಈಗಾಗಲೇ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದರು.
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿ ಯಾವುದೇ ಅವಸರದ ತೀರ್ಮಾನಗಳನ್ನು ಕೈಗೊಳ್ಳುವುದಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿರಂತರವಾಗಿ ಸಂಘಟನೆಯಲ್ಲಿ ತೊಡಗಿದ್ದಾರೆ. ಅವರನ್ನು ಬದಲಾಯಿಸುವ ಯಾವುದೇ ಚಿಂತನೆ ರಾಷ್ಟ್ರೀಯ ನಾಯಕರಿಗೆ ಇಲ್ಲ. ವಿಜಯೇಂದ್ರ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಬಿವೈಆರ್ ಪ್ರತಿಕ್ರಿಯಿಸಿದರು.