ರಾಜ್ಯ ಸರ್ಕಾರದ ವಿರುದ್ಧ ಬಿವೈವಿ ವಾಗ್ದಾಳಿ

byv
ಶಿವಮೊಗ್ಗ ಬಸವಕೇಂದ್ರದಲ್ಲಿ ಶ್ರೀ ಬಸವಮರುಳಸಿದ್ದ ಸ್ವಾಮಿಜಿ ಶನಿವಾರ ಬಿ.ವೈ.ವಿಜಯೇಂದ್ರ ಅವರನ್ನು ಆಶೀರ್ವದಿಸಿ ಗೌರವಿಸಿದರು. ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಎನ್.ಸಜ್ಜನ್, ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ, ಪ್ರಮುಖರಾದ ಸಂತೋಷ್ ಬಳ್ಳೇಕೆರೆ, ಪ್ರೊ.ಚಂದ್ರಶೇಖರ್ ಮುಂತಾದವರಿದ್ದರು.
Published on

ಶಿವಮೊಗ್ಗ: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪದೇಪದೆ ಹಿಂದುಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಗಣೇಶ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ಪೆಟ್ರೋಲ್ ಬಾಂಬ್ ಹಾಕಲಾಗಿದೆ. ದಾವಣಗೆರೆಲ್ಲಿ ಕಲ್ಲು ತೂರಾಟ ನಡೆದಿದೆ. ಹಬ್ಬದ ಸಂಭ್ರಮದಲ್ಲೇ ಹಿಂದುಗಳ ಮೇಲೆ ದಾಳಿಯಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಬಸವಕೇಂದ್ರಕ್ಕೆ ಭೇಟಿ ನೀಡಿ ಶ್ರೀ ಬಸವಮರುಳಸಿದ್ದ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ನಮ್ಮ ರಾಜ್ಯದಲ್ಲಿ ಯಾವ ಸರ್ಕಾರವೂ ಹಿಂದುಗಳ ವಿರುದ್ಧ ಇಷ್ಟೊಂದು ಕೆಟ್ಟದಾಗಿ ನಡೆದುಕೊಂಡಿರಲಿಲ್ಲ. ರಾಜ್ಯ ಸರ್ಕಾರದ ನಡವಳಿಕೆ ದೇಶದ್ರೋಹಿಗಳಿಗೆ ಶಕ್ತಿ ತುಂಬುವಂತಿದೆ. ಸರ್ಕಾರ ತನ್ನ ವರ್ತನೆ ಬದಲಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಹಲವೆಡೆ ಪ್ಯಾಲಿಸ್ತೇನ್ ಧ್ವಜ ಹಾರಿಸಿದ್ದಾರೆ. ಹೀಗೆ ಮುಂದುವರಿದರೆ ಮುಂದೊಂದು ದಿನ ಪಾಕಿಸ್ತಾನದ ಧ್ವಜವನ್ನೂ ಹಾರಿಸುತ್ತಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಸರ್ಕಾರ ಆರಂಭದಿಂದಲೇ ಬಿಗಿಯಾದ ಕ್ರಮ ಕೈಗೊಂಡಿದ್ದರೆ ಇಂದು ರಾಜ್ಯದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಯಬಹುದಿತ್ತು ಎಂದರು.
ಸರ್ಕಾರ ಬೆದರಿಕೆ ಹಾಕುತ್ತಿದೆ: ಶಾಸಕ ಮುನಿರತ್ನ ಪ್ರಕರಣದಲ್ಲಿ ಸಮರ್ಪಕ ತನಿಖೆಯಾಗಬೇಕು. ಅವರು ತಪ್ಪು ಮಾಡಿದ್ದಾರೆ ಎಂಬುದು ಸಾಭೀತಾದರೆ ಕಾನೂನು ಕ್ರಮ ಜರುಗಿಸಲಿ. ಅದಕ್ಕೆ ನಮ್ಮ ಪಕ್ಷದ ಆಕ್ಷೇಪವಿಲ್ಲ. ಆದರೆ ಸರ್ಕಾರ ಪ್ರತಿಪಕ್ಷಗಳಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದೆ. ಪ್ರಕರಣ ದಾಖಲಿಸುತ್ತೇವೆ, ತನಿಖೆ ನಡೆಸುತ್ತೇವೆ ಎಂದು ಬೆದರಿಸಲಾಗುತ್ತಿದೆ. ಮುನಿರತ್ನ ಪ್ರಕರಣದಲ್ಲಿ ಸರ್ಕಾರ ದ್ವೇಷ ಸಾಧಿಸಬಾರದು ಎಂದು ವಿಜಯೇಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net