ಬಿವೈಆರ್ ಟೀಕೆ ಅರ್ಥವಿಲ್ಲದ್ದು: ಆಯನೂರು

ayanoor manjunath
ಆಯನೂರು ಮಂಜುನಾಥ್
Published on

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಗ್ಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅರ್ಥವಿಲ್ಲದ ಟೀಕೆ ಮಾಡುತ್ತಿದ್ದಾರೆ. ಕೆಲವು ವಿಷಯಗಳಲ್ಲಿ ರಾಘವೇಂದ್ರ ಗೊಂದಲದಲ್ಲಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ಮಧು ಬಂಗಾರಪ್ಪ ಅರ್ಹತೆ ಬಗ್ಗೆ ಮಾತನಾಡುವ ರಾಘವೇಂದ್ರ ಅವರಿಗೆ ಮೊದಲ ಬಾರಿ ಲೋಕಸಭೆ ಟಿಕೆಟ್ ಸಿಗುವ ಮುನ್ನ ಏನು ಸಾಧನೆ ಮಾಡಿದ್ದರು? ಯಡಿಯೂರಪ್ಪ ಅವರ ಹೋರಾಟದ ಬಗ್ಗೆ ನಮಗೆ ಗೌರವವಿದೆ. ಆದರೆ ರಾಘವೇಂದ್ರ ಹಾಗೂ ವಿಜಯೇಂದ್ರ ಹೋರಾಟದ ಹಾದಿಯಿಂದ ಬಂದು ರಾಜಕೀಯ ಸ್ಥಾನಮಾನ ಪಡೆದಿದ್ದಾರೆಯೇ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಬಗ್ಗೆಯೂ ರಾಘವೇಂದ್ರ ಅವರಲ್ಲಿ ಗೊಂದಲವಿದ್ದಂತಿದೆ. ಅವರೇ ನಿರ್ದೇಶಕರಾಗಿರುವ ಅಖಿಲ ಭಾರತ ವೀರಶೈವ ಮಹಾಸಭಾ ಸಮೀಕ್ಷೆ ವೇಳೆ ವೀರಶೈವ ಲಿಂಗಾಯತ ಎಂದು ನಮೂದಿಸಬೇಕು. ಧರ್ಮದ ಕಾಲಂನಲ್ಲಿ ಏನು ಬರೆಸಬೇಕೆಂಬ ಆಯ್ಕೆ ಅವರವರ ವಿವೇಚನೆಗೆ ಬಿಟ್ಟಿದ್ದು ಎಂದು ತೀರ್ಮಾನ ಕೈಗೊಂಡಿತು. ಆಗ ರಾಘವೇಂದ್ರ ಮೌನವಾಗಿದ್ದರು. ಬಿಜೆಪಿ ವೇದಿಕೆಯಲ್ಲಿ ಮಾತ್ರ ಧರ್ಮದ ಕಾಲಂನಲ್ಲಿ ಹಿಂದು ಎಂದೇ ಬರೆಸುವಂತೆ ಅವರು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಯಡಿಯೂರಪ್ಪ ಲಿಂಗಾಯತರೇ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದರೂ ಯಡಿಯೂರಪ್ಪ ಹಾಗೂ ಅವರ ಇಬ್ಬರು ಪುತ್ರರು ಅದನ್ನು ಖಂಡಿಸುತ್ತಿಲ್ಲವೇಕೆ? ಶಿಕಾರಿಪುರ ಬಳಿ ಇರುವ ಟೋಲ್‌ಗೇಟ್ ಯಾರ ಕಾಲದಲ್ಲಿ ಆಗಿತ್ತು? ಇದಕ್ಕೆ ಟೆಂಡರ್ ಕೊಟ್ಟವರು ಯಾರು? ರಾಘವೇಂದ್ರ ಅವರಿಗೂ ಈ ವಿಷಯದಲ್ಲಿ ಗೊಂದಲವಿದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಟಿ.ಹಾಲಪ್ಪ, ರಮೇಶ್ ಶಂಕರಘಟ್ಟ, ಶಿವಕುಮಾರ್, ವೈ.ಎಚ್.ನಾಗರಾಜ್, ಜಿ.ಡಿ.ಮಂಜುನಾಥ್, ಧೀರರಾಜ್ ಹೊನ್ನವಿಲೆ, ಕಲಗೋಡು ರತ್ನಾಕರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net