

ಶಿವಮೊಗ್ಗ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಂಗಳವಾರ ಬೆಂಗಳೂರಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಜಿಲ್ಲೆಗೆ ಸಂಬಂಧಿಸಿ ಹಲವು ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು. ಮುಖ್ಯವಾಗಿ ತ್ಯಾವರೆಕೊಪ್ಪ ಸಿಂಹಧಾಮದ ಅಭಿವೃದ್ಧಿಗೆ ಅನುದಾನ, ಶರಾವತಿ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡುವುದು, ಪರಿಸರ ಸೂಕ್ಷ್ಮ ಪ್ರದೇಶ ಕಡಿತಗೊಳಿಸುವ ಕುರಿತು ಚರ್ಚಿಸಿದ್ದಾರೆ.
ಶೆಟ್ಟಿಹಳ್ಳಿ ವನ್ಯಜೀವಿ ಪರಿಸರದ ಸೀಮಾರೇಖೆಯ ಮರು ಅಧಿಸೂಚನೆ ಹೊರಡಿಸುವ ಪ್ರಯುಕ್ತ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಅದನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದಿಂದ ಆದೇಶವಾಗಬೇಕು. ಈ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಬೇಕು. ಶಿವಮೊಗ್ಗ ನಗರದ ಆರ್ಥಿಕ, ಸಾಮಾಜಿಕ ಬೆಳವಣಿಗೆಯ ವೇಗ ಹೆಚ್ಚಿಸುವ ಉದ್ದೇಶದಿಂದ ಶಿವಮೊಗ್ಗದ ಪರಿಸರ ಸೂಕ್ಷ್ಮ ಪ್ರದೇಶವನ್ನು ಒಂದು ಕಿಮೀಗೆ ಮಿತಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಲಿಂಗನಮಕ್ಕಿ ಜಲಾಶಯ ನಿರ್ಮಿಸುವ ಸಂದರ್ಭ ಅಲ್ಲಿದ್ದ ಭೂ ಹಿಡುವಳಿದಾರರ ಪಟ್ಟಿ ನೀಡುವಂತೆ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಯಾರಿಗೂ ತೊಂದರೆ ಆಗದಂತೆ ನಿಜವಾದ ಭೂ ಅನುಭೋಗದಾರರನ್ನು ಗುರುತಿಸಿ ರಾಜ್ಯ ಸರ್ಕಾರ ಪಟ್ಟಿ ಕಳುಹಿಸಬೇಕು. ತ್ಯಾವರೆಕೊಪ್ಪದಲ್ಲಿರುವ ಮೃಗಾಲಯ, ಹುಲಿ-ಸಿಂಹಧಾಮದ ಅಭಿವೃದ್ಧಿಗೆ ಐದು ಕೋಟಿ ರೂ. ಅನುದಾನ ನೀಡುವಂತೆ ಬಿವೈಆರ್ ಮನವಿ ಮಾಡಿದ್ದು, ಇದಕ್ಕೆ ಅರಣ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.