ಗುಡ್ಡೇಕಲ್, ಕೊಲ್ಲೂರು ಅಭಿವೃದ್ಧಿಗೆ ಬಿವೈಆರ್ ಮನವಿ

byr
ಸಂಸದ ಬಿ.ವೈ.ರಾಘವೇಂದ್ರ ದೆಹಲಿಯಲ್ಲಿ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿಯಾಗಿ ಶಿವಮೊಗ್ಗದ ಗುಡ್ಡೇಕಲ್ ಹಾಗೂ ಕೊಲ್ಲೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ವಿವಿಧ ಬೇಡಿಕೆ ಸಲ್ಲಿಸಿದರು.
Published on

ಶಿವಮೊಗ್ಗ: ನಗರದ ಗುಡ್ಡೇಕಲ್‌ನಲ್ಲಿ 151 ಅಡಿ ಎತ್ತರದ ಬಾಲಸುಬ್ರಹ್ಮಣ್ಯ ಸ್ವಾಮಿ ಪ್ರತಿಮೆ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ಅನುದಾನ ನೀಡುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿ ಶುಕ್ರವಾರ ಸಚಿವರನ್ನು ಭೇಟಿಯಾದ ಬಿವೈಆರ್, ಗುಡ್ಡೇಕಲ್ ಬೆಟ್ಟದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿಶ್ವದಲ್ಲೇ ಅತಿ ಎತ್ತರದ ಬಾಲಸುಬ್ರಹ್ಮಣ್ಯಸ್ವಾಮಿ ಪ್ರತಿಮೆ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ಈ ಸ್ಥಳಕ್ಕೆ ಸುಮಾರು 100 ವರ್ಷಗಳ ಇತಿಹಾಸವಿದೆ. ಇದೊಂದು ಪುಣ್ಯಕ್ಷೇತ್ರ ಎಂದು ವಿವರಿಸಿದರು.
ರಾಜ್ಯ ಸರ್ಕಾರವು ಈ ದೇವಸ್ಥಾನದ ಅಭಿವೃದ್ಧಿಗೆ 3.25 ಎಕರೆ ಭೂಮಿ ನೀಡಿದೆ. ಇಲ್ಲಿ ಬಾಲಸುಬ್ರಹ್ಮಣ್ಯಸ್ವಾಮಿ ಮುಖ್ಯ ದೇವಾಲಯವಲ್ಲದೆ ಗಣಪತಿ, ಅಯ್ಯಪ್ಪಸ್ವಾಮಿ, ರಾಜರಾಜೇಶ್ವರಿ, ದಕ್ಷಿಣಾಮೂರ್ತಿ, ಆದಿಪರಾಶಕ್ತಿ, ಹಿಡಂಬಾಸುರ, ನವಗ್ರಹ, ನಾಗದೇವತೆ ದೇವಸ್ಥಾನಗಳೂ ಇಲ್ಲಿವೆ. ಭಕ್ತಾದಿಗಳ ಅನುಕೂಲಕ್ಕಾಗಿ ಮೂರು ಸಭಾಭವನಗಳನ್ನು ನಿರ್ಮಿಸಲಾಗಿದೆ. ನೆರೆಯ ಜಿಲ್ಲೆಗಳಿಂದಲೂ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ ಎಂದು ಸಚಿವರ ಗಮನ ಸೆಳೆದರು.
ಈ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಅತಿ ಎತ್ತರದ 151 ಅಡಿ ಎತ್ತರದ ಅಂದಾಜು 12.20 ಕೋಟಿ ರೂ. ವೆಚ್ಚದಲ್ಲಿ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಲಾಗಿದೆ. ಈ ಕಾಮಗಾರಿ ನಡೆದರೆ ಇದು ಪ್ರಮುಖ ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ. ಪ್ರವಾಸೋದ್ಯಮ ಇಲಾಖೆಯಿಂದ ಇದಕ್ಕೆ ಆರು ಕೋಟಿ ರೂ. ನೆರವು ನೀಡಬೇಕೆಂದು ಮನವಿ ಮಾಡಿದರು. ಸಂಸದರ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಇದೇ ವೇಳೆ ಕೊಲ್ಲೂರು ಮೂಕಾಂಬಿಕಾ ಕಾರಿಡಾರ್ ಅಭಿವೃದ್ಧಿ ಬಗ್ಗೆಯೂ ಕೇಂದ್ರ ಪ್ರವಾಸೋದ್ಯಮ ಸಚಿವರೊಂದಿಗೆ ಬಿವೈಆರ್ ಚರ್ಚಿಸಿದರು. ಶಂಕರಾಚಾರ್ಯ ಥೀಮ್ ಪಾರ್ಕ್, ಮೂಕಾಂಬಿಕಾ ರೈಲ್ವೆ ನಿಲ್ದಾಣದ ಅಭಿವೃದ್ಧಿ, ಕೊಲ್ಲೂರು ಸಮೀಪ ಏರ್‌ಪೋರ್ಟ್ ನಿರ್ಮಾಣ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net