

ಹುಬ್ಬಳ್ಳಿ: ನವಲಗುಂದ ಪಟ್ಟಣಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕೆಂಬ ಬಹುದಿನಗಳ ಕನಸು ಇದೀಗ ಈಡೇರುತ್ತಿರುವುದಕ್ಕೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
2022ರ ಜೂನ್ 22ರಂದು ದೆಹಲಿಯಲ್ಲಿ ಕೇಂದ್ರ ಸಚಿವರ ಸಮ್ಮುಖದಲ್ಲಿ ನಡೆಸಿದ ಸಭೆಯ ಪರಿಣಾಮ ಇದೀಗ ಕೇಂದ್ರದ ಬಿಜೆಪಿ ಸರ್ಕಾರ 350 ಕೋಟಿ ರೂಪಾಯಿ ಅನುದಾನವನ್ನು ಬೈಪಾಸ್ ಗಾಗಿ ಬಿಡುಗಡೆ ಮಾಡುತ್ತಿದೆ.
ನವಲಗುಂದ ಪಟ್ಟಣದ ಎಡಭಾಗದಿಂದ ಬೈಪಾಸ್ ಮಾಡಲು ಅಧಿಕಾರಿಗಳು ಮೊದಲು ವಿಸತ ಯೋಜನಾ ವರದಿ (ಡಿಪಿಆರ್) ಮಾಡಿದ್ದರು. ಅದರ ಪ್ರಕಾರ ರಸ್ತೆ ನಿರ್ಮಾಣ ಮಾಡಿದ್ದರೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು.
ಇದೇ ಕಾರಣದಿಂದ ಕ್ಷೇತ್ರದ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜತೆಗೆ ಚಚಿರ್ಸಲಾಯಿತು. ಪಟ್ಟಣದ ಬಲಭಾಗದಿಂದ ಬೈಪಾಸ್ ನಿರ್ಮಾಣ ಮಾಡಲು ಕೇಂದ್ರದ ಗಮನ ಸೆಳೆಯಲಾಗಿತ್ತು. ಈ ವಿಷಯದಲ್ಲಿ ಪ್ರಲ್ಹಾದ ಜೋಶಿ ಅವರ ಪ್ರಯತ್ನವೂ ಸಾಕಷ್ಟಿದೆ ಎಂದು ಮುನೇನಕೊಪ್ಪ ಸ್ಮರಿಸಿಕೊಂಡಿದ್ದಾರೆ.
ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ನವಲಗುಂದ ಬೈಪಾಸ್ನ ವಿಸ್ತ್ರತ ವರದಿಯನ್ನು ನೀಡಿ, ಪಟ್ಟಣದ ಅಭಿವೃದ್ಧಿಗೆ ಪೂರಕವಾಗಬೇಕೆಂದು ಮುನೇನಕೊಪ್ಪ ಅವರು ಕೇಳಿಕೊಂಡಿದ್ದರು.
ಇದೀಗ ಕೇಂದ್ರ ಸರ್ಕಾರ ಬೈಪಾಸ್ ಗೆ ಹಣ ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಸಚಿವರಾದ ನಿತಿನ್ ಗಡ್ಕರಿ ಹಾಗೂ ಪ್ರಲ್ಹಾದ ಜೋಶಿ ಅವರಿಗೆ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಭಿನಂದನೆ ಸಲ್ಲಿಸಿದ್ದಾರೆ.