

ಸಂಡೂರು: ಇಪ್ಪತ್ತೆರಡನೇ ವಾರ್ಡ್‌ನಲ್ಲಿ ಅದಿರು ಲಾರಿಗಳು ನಿಯಮ ಮೀರಿ ಸಂಚರಿಸುತ್ತಿದ್ದು ಅವುಗಳಿಗೆ ಕಡಿವಾಣ ಹಾಕಬೇಕೆಂದು ತಾಲೂಕು ಭೋವಿ ಸಂಘದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅನಿಲ್ ಕುಮಾರ್‌ಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಭೋವಿ ಪದ್ಮಣ್ಣ ಮಾತನಾಡಿ, ಪುರಸಭೆಯ 22ನೇ ವಾರ್ಡಿಗೆ ಸೇರಿದ ಸೀನಬಸಪ್ಪ ಕ್ಯಾಂಪ್ ಬಳಿ ಸೆ.3ರಂದು ಅಂಜಿನಿ ಎಂಬ ವಿದ್ಯಾರ್ಥಿನಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದಳು.
ಆ.27ರಂದು ಲಕ್ಷ್ಮೀಪುರದ ಭೋವಿ ಗಂಗಾಧರ್ ಎನ್ನುವವರ ಮೇಲೆ ಗಣಿವಾಹನ ಹರಿದ ಪರಿಣಾಮ ಎರಡೂ ಕಾಲುಗಳಿಗೆ ತೀವ್ರ ಹಾನಿಯಾಗಿದ್ದು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರಸ್ತೆಯಲ್ಲಿ ಅನೇಕ ರಸ್ತೆ ಅಪಘಾತಗಳಾಗುತ್ತಿವೆ. ಗಣಿ ಕಂಪನಿಗಳು ರಸ್ತೆಗೆ ನೀರು ಸಿಂಪಡಿಸದೆ ಇರುವುದರಿಂದ ರಸ್ತೆ ತುಂಬಾ ಧೂಳು ತುಂಬಿಕೊಂಡ ಕಾರಣ ರಸ್ತೆಯಲ್ಲಿ ಏನಿದೆ ಎಂಬುದು ಕಾಣದಂತಾಗುತ್ತದೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ.
ಕ್ಯಾಂಪ್‌ನಲ್ಲಿ ವೇಗದ ಮೀತಿ 20 ಕಿ.ಮಿ.ಗೆ ನಿಗದಿಗೊಳಿಸಬೇಕು. ಶೀಘ್ರ ಬೈಪಾಸ್ ನಿರ್ಮಿಸಬೇಕು. ಕ್ಯಾಂಪ್ ಬಳಿ ಇರುವ ಸರ್ಕಾರಿ ಶಾಲೆ ಸ್ಥಳಾಂತರ ಮಾಡಬೇಕು. ಅದಿರು ವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸದಂತೆ ಕ್ರಮವಹಿಸಬೇಕು ಎಂದು ಮನವಿ ಸಲ್ಲಿಸಿದರು.
ತಾಲೂಕು ಯುವಘಟಕದ ಅಧ್ಯಕ್ಷ ಬಿಎಂಆರ್.ಕುಮಾರಸ್ವಾಮಿ, ನಗರ ಘಟಕ ಅಧ್ಯಕ್ಷ ವೃಷಭೇಂದ್ರ, ಮುಖಂಡರಾದ ಸೋಮಶೇಖರ, ವೆಂಕಟೇಶ, ಚರಮರೆಡ್ಡಿ, ತಿಪ್ಪೇಸ್ವಾಮಿ, ಲಕ್ಷ್ಮೀಪುರದ ಸತ್ಯ, ಶಶಿಕುಮಾರ, ಮೋಹನ, ವೀರೇಶ, ಮಂಜಪ್ಪ ಇತರರಿದ್ದರು.