ನೆಲಗಡಲೆಗೆ ಜಾನುವಾರು ಕಾಟ

kadale
Published on

ಬೈಂದೂರು: ಕರಾವಳಿ ತೀರದ ಪ್ರಮುಖ ಬೆಳೆಯಾದ ನೆಲಗಡಲೆ ಬೆಳೆಯಲ್ಲಿ ಈ ಬಾರಿ ವಿಪರೀತ ಕಳೆ ಕಂಡುಬಂದಿದ್ದು ರೈತರನ್ನು ಹೈರಾಣಾಗಿಸಿದೆ. ಇದು ಸಾಲದೆಂಬಂತೆ ಬೀಡಾಡಿ ಜಾನುವಾರುಗಳ ಹಾವಳಿಯಿಂದ ರೈತ ಮತ್ತಷ್ಟು ಕೆಂಗೆಡುವಂತೆ ಮಾಡಿದೆ.

ಕರಾವಳಿ ಭಾಗದಲ್ಲಿ ಬೈಂದೂರು ತಾಲೂಕು ಅತಿ ಹೆಚ್ಚು ನೆಲಗಡಲೆ ಬೆಳೆ ಬೆಳೆಯುವ ಪ್ರಮುಖ ಪ್ರದೇಶ. ಕುಂದಾಪುರದಲ್ಲಿ 1300 ಹೆಕ್ಟೇರ್, ಬೈಂದೂರು ತಾಲೂಕಿನಲ್ಲಿ ಸುಮಾರು 1000 ಹೆಕ್ಟರ್ ಪ್ರದೇಶದಲ್ಲಿ ಅಂದಾಜು 4 ಸಾವಿರಕ್ಕೂ ಹೆಚ್ಚು ರೈತರು ಹಿಂಗಾರು ಹಂಗಾಮಿನಲ್ಲಿ ಇದನ್ನೇ ನೆಚ್ಚಿಕೊಂಡಿದ್ದಾರೆ. ಈ ಸಾಲಿನಲ್ಲಿ ನವೆಂಬರ್ ಕೊನೆಯವರೆಗೂ ಮಳೆಯಾಗಿರುವುದರಿಂದ ಗದ್ದೆಗಳು ಉತ್ತಮ ತೇವಾಂಶದಿಂದ ಕೂಡಿದೆ. ಬೈಂದೂರು ವ್ಯಾಪ್ತಿಯ ಯಡ್ತರೆ, ಬಿಜೂರು, ಉಪ್ಪುಂದ, ಶಾಲೆಬಾಗಿಲು, ನಾಯ್ಕನಕಟ್ಟೆ ಪ್ರದೇಶದ ಹೆಚ್ಚಿನ ರೈತರು ಉತ್ತಮ ಇಳುವರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನೆಲಗಡಲೆ ಕೃಷಿಗೆ ಪ್ರತಿವರ್ಷ ಸಾಕಷ್ಟು ಅಡೆತಡೆಗಳು ಎದುರಾಗುಲ್ಲೇ ಇರುತ್ತವೆ. ಪ್ರತಿ ಬಾರಿಯೂ ಭತ್ತ ಕಟಾವು ಬಳಿಕ ನೆಲಗಡಲೆ ಬೀಜ ಬಿತ್ತನೆ ಮಾಡುವ ಒಂದು ತಿಂಗಳು ಗದ್ದೆ ಖಾಲಿಯಾಗಿರುತ್ತದೆ. ಇತರೆ ಗಿಡಗಳು, ಕಳೆ ಬೆಳೆದಾಗ ರೈತರು ಅವುಗಳನ್ನು ಮೊದಲೇ ತೆಗೆದು ನಿರ್ವಹಣೆ ಮಾಡುತ್ತಾರೆ. ಈ ಸಲ ಮಳೆಯಿಂದ ಭತ್ತ ಕಟಾವು ವಿಳಂಬವಾಗಿದ್ದರಿಂದ ಅದಕ್ಕೆ ಅವಕಾಶ ಸಿಕ್ಕಿಲ್ಲ. ಕೃಷಿ ಕಾರ್ಮಿಕರ ಕೊರತೆ, ದುಬಾರಿ ಕೂಲಿ ಮಧ್ಯೆ ನೆಲಗಡಲೆ ಬೆಳೆ ಜತೆಗೆ ವಿಪರೀತ ಕಳೆ ಬೆಳೆದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ಬೀಡಾಡಿ ಜಾನುವಾರು ಹಾವಳಿ: ಮಳೆಯಾದರೆ ಬೆಳೆ ಇಲ್ಲ, ಬೆಳೆಯಾಗುವಾಗ ಮಳೆ ಇಲ್ಲ... ಹೀಗೆ ಒಂದಿಲ್ಲೊಂದು ರೀತಿ ರೈತರ ಬದುಕು ಸಂಕಷ್ಟದಲ್ಲಿ ಇರುತ್ತದೆ. ಇದೆಲ್ಲ ಸಾಲದೆಂಬಂತೆ ಬೀಡಾಡಿ ಜಾನುವಾರುಗಳ ಹಾವಳಿಯಿಂದ ಕೃಷಿಕರ ಸಮಸ್ಯೆ ಬಿಗಡಾಯಿಸುತ್ತಿದೆ. ಕೆಲವರು ಗಂಡು ಕರು ಮತ್ತು ಗೊಡ್ಡು ಜಾನುವಾರುಗಳನ್ನು ಹೊರಗೆ ಬಿಡುತ್ತಾರೆ. ಅವುಗಳು ರೈತರ ಹೊಲಗಳಿಗೆ ನುಗ್ಗಿ ಅವರು ಕಷ್ಟಪಟ್ಟು ಬೆಳೆದಿರುವ ಬೆಳೆಯನ್ನು ತಿಂದು ಹಾಕುತ್ತಿವೆ. ಇದು ಹಗಲೂ ರಾತ್ರಿಯೂ ನಡೆಯುತ್ತಿದೆ. ಅಂಥ ಜಾನುವಾರುಗಳ ನಿಯಂತ್ರಣಕ್ಕೆ ಯಾವ ವ್ಯವಸ್ಥೆಯೂ ಇಲ್ಲ. ಇದರಿಂದ ನಷ್ಟ ನೆಲಗಡಲೆ ಬೆಳೆಗಾರರಿಗೆ.

ಬಲೆ, ಸೀರೆಗಳ ಮೊರೆ: ಬೀಡಾಡಿ ಜಾನುವಾರುಗಳ ಉಪಟಳದಿಂದ ತಪ್ಪಿಸಿಕೊಳ್ಳಲು ಉಪ್ಪುಂದ, ಬಿಜೂರು, ಕಂಚಿಕಾನ್ ಮೊದಲಾದ ಕಡೆಯ ರೈತರು ತಮ್ಮ ಗದ್ದೆಗಳಲ್ಲಿ ಬಲೆ ಹಾಕಿ, ತಾತ್ಕಾಲಿಕ ರಕ್ಷಣೆಗೆ ಮುಂದಾಗಿದ್ದಾರೆ. ಈ ಸಮಯದಲ್ಲಿ ಗದ್ದೆಗಳು ತುಂಬ ಹಸಿರಿನಿಂದ ಕಂಗೊಳಿಸುತ್ತಿರುವುದರಿಂದ ಜಾನುವಾರುಗಳು ನೆಲಗಡಲೆ ಗಿಡ ತಿನ್ನುವ ಆಸೆಗೆ ಬೇಲಿಗಳನ್ನೇ ಧ್ವಂಸ ಮಾಡಿ ಹೊಲಕ್ಕೆ ಧಾವಿಸುತ್ತವೆ. ರೈತರು ಬಲೆಗಳಿಗೆ ಹಳೆಯ ಸೀರೆಗಳನ್ನು ಅಡ್ಡ ಕಟ್ಟುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಸಾಮರ್ಥ್ಯ ಇರುವ ಕೆಲವು ರೈತರು ಬೇಲಿ ಮಾಡಿಕೊಂಡು ಬೆಳೆ ರಕ್ಷಿಸಿಕೊಳ್ಳುತ್ತಾರೆ. ಇದು ಎಲ್ಲ ರೈತರಿಂದ ಸಾಧ್ಯವಿಲ್ಲ.

ಕೃತಕ ಗರ್ಭಧಾರಣೆ ಸಂದರ್ಭ ಗಂಡು ಕರು ಹುಟ್ಟದಂತೆ ತಡೆಯಲು ಇರುವ ವಿಧಾನ ಅನುಸರಿಸಿದರೆ ಪರಿಹಾರ ಕಂಡುಕೊಳ್ಳಬಹುದು. ಇದಕ್ಕೆ 1450 ರೂ. ವೆಚ್ಚವಾಗಲಿದೆ. ಇದಕ್ಕೆ ಸರ್ಕಾರ ಒಂದು ಸಾವಿರ ರೂಪಾಯಿ ನೀಡುತ್ತದೆ. ದನಗಳಿಗೆ ಕೃತಕ ಗಭರ್ಧಾರಣೆಯ ಚುಚ್ಚುಮದ್ದು ನೀಡುವಾಗ ಈ ವಿಧಾನ ಆಯ್ಕೆ ಮಾಡಿದರೆ ಗಂಡು ಕರುಗಳೇ ಹುಟ್ಟುವುದಿಲ್ಲ. -ಡಾ.ಕೆ.ಶಂಕರ ಶೆಟ್ಟಿ, ಸಹಾಯಕ ನಿರ್ದೇಶಕ ಪಶುಸಂಗೋಪನಾ ಇಲಾಖೆ ಗದ್ದೆಗಳಲ್ಲಿ ಈ ಬಾರಿ ಅಧಿಕ ಪ್ರಮಾಣದಲ್ಲಿ ಕಳೆ ಬೆಳೆದಿದೆ. ಕೂಲಿಯಾಳುಗಳ ವೇತನ ಅಧಿಕವಾಗಿರುವುದರಿಂದ ಬೆಳೆ ಬೆಳೆಯುವ ವೆಚ್ಚ ಹೆಚ್ಚಳವಾಗಲಿದೆ. ಬೀಡಾಡಿ ಜಾನುವಾರುಗಳು ಬೆಳೆದ ಬೆಳೆಯನ್ನು ತಿಂದು ಹಾಕುತ್ತಿವೆ. ಇವುಗಳನ್ನು ನಿಯಂತ್ರಿಸುವುದೇ ದೊಡ್ಡ ಸಮಸ್ಯೆ. ಸಂಬಂಧಪಟ್ಟವರು ರೈತರ ಸಮಸ್ಯೆಗೆ ಸ್ಪಂದಿಸಬೇಕು. -ವೆಂಕಟರಮಣ, ನೆಲಗಡಲೆ ಬೆಳೆ ಕೃಷಿಕರು ಬಿಜೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net