ನರೇಗಾದಲ್ಲಿ ಬೈಂದೂರಿಗೆ ಅಗ್ರಸ್ಥಾನ

narega
ಕಟ್‌ಬೆಲ್ತೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆದ ಕೆರೆ ಹೂಳೆತ್ತುವಿಕೆ ಕಾಮಗಾರಿ.
Published on

ಕುಂದಾಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2024- 25ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನ ಮಾಡಿರುವ ಬೈಂದೂರು ತಾಲೂಕು ಗುರಿ ಮೀರಿದ ಸಾಧನೆ ಮಾಡಿ ಜಿಲ್ಲೆಯಲ್ಲಿಯೇ ಅಗ್ರಸ್ಥಾನ ಪಡೆದಿದೆ. ಉಡುಪಿ ಜಿಲ್ಲೆಯಾದ್ಯಂತ ನರೇಗಾದಡಿ ಗುರಿ ನಿಗದಿಪಡಿಸಿದ ಪೈಕಿ ಒಟ್ಟಾರೆ ಶೇ.99.06ರಷ್ಟು ಪ್ರಗತಿಯಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ಕಳೆದ ಆರ್ಥಿಕ ವರ್ಷದಲ್ಲಿ 8 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದ್ದು, ಈ ಪೈಕಿ 7,92,466 ದಿನಗಳನ್ನು ಸೃಜನೆ ಮಾಡಿದೆ.

ಮೊದಲ ಸ್ಥಾನ: ಜಿಲ್ಲೆಯ 7 ತಾಲೂಕುಗಳ ಪೈಕಿ ನರೇಗಾ ಗುರಿ ಸಾಧನೆಯಲ್ಲಿ ಬೈಂದೂರು ತಾಲೂಕು ಮೊದಲ ಸ್ಥಾನ ಪಡೆದಿದೆ. ಬೈಂದೂರಿಗೆ ವಾರ್ಷಿಕ 1,19,407 ದಿನಗಳ ಗುರಿ ನೀಡಿದ್ದು, ಬರೋಬ್ಬರಿ 1,28,354 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಗುರಿಯನ್ನೂ ಮೀರಿಸಿದ ಸಾಧನೆ ಮಾಡಿದ್ದು, ಶೇ.107.49 ರಷ್ಟು ಸಾಧನೆ ಮಾಡುವುದರೊಂದಿಗೆ ಮುಂಚೂಣಿಯಲ್ಲಿದೆ. 15 ಗ್ರಾ.ಪಂ.ಗಳ ಪೈಕಿ 12 ಗ್ರಾ.ಪಂ.ಗಳು ಶೇ.100 ರಷ್ಟು ಗುರಿ ಸಾಧಿಸಿದೆ.

ಕುಂದಾಪುರ ತಾಲೂಕಿನಲ್ಲಿಯೂ ನರೇಗಾದಡಿ ಉತ್ತಮ ಸಾಧನೆಯಾಗಿದೆ. ಕುಂದಾಪುರ ತಾಲೂಕಿಗೆ 2,82,477 ದಿನಗಳ ಗುರಿ ನಿಗದಿಪಡಿಸಿದ್ದು, 2,85,183 ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ಶೇ.100.96 ರಷ್ಟು ಪ್ರಗತಿಯಾಗಿದೆ. 45 ಗ್ರಾ.ಪಂ.ಗಳ ಪೈಕಿ 20 ಗ್ರಾ.ಪಂ.ಗಳು ಶೇ.100 ರಷ್ಟು ಸಾಧನೆಗೈದಿದೆ.

ಸಮುದಾಯದ ಕಾಮಗಾರಿಯಲ್ಲಿ ಕೆರೆ ಅಭಿವೃದ್ಧಿ, ತೋಡು ಹೂಳೆತ್ತುವಿಕೆ, ಗ್ರಾ.ಪಂ. ಕಟ್ಟಡ ನಿರ್ಮಾಣ, ಶಾಲಾ ಆವರಣ ಗೋಡೆ, ಮೈದಾನ ಸಮತಟ್ಟು, ಅಂಗನವಾಡಿ ಕಟ್ಟಡ, ಶಾಲಾ ಶೌಚಾಲಯದಂತಹ ಕೆಲಸಗಳು ನಡೆದಿವೆ. ವೈಯಕ್ತಿಕ ಕಾಮಗಾರಿಯಡಿ ದನದ ಹಟ್ಟಿ ರಚನೆ, ಬಾವಿ, ಗೊಬ್ಬರ ಗುಂಡಿ, ಬಚ್ಚಲು ಗುಂಡಿ, ಎರೆಹುಳು ತೊಟ್ಟಿ ಘಟಕಗಳನ್ನು ನಿರ್ಮಿಸಲಾಗಿದೆ.

ಉಡುಪಿ ಜಿಲ್ಲೆಯ 155 ಗ್ರಾ.ಪಂ.ಗಳ ಪೈಕಿ ಆಲೂರು ಗ್ರಾಮ ಪಂಚಾಯಿತಿ ವಿಶೇಷ ಸಾಧನೆ ಮಾಡಿದೆ. ನರೇಗಾದಡಿ 11,241 ವಾರ್ಷಿಕ ಗುರಿ ನೀಡಲಾಗಿದ್ದು, ಬರೋಬ್ಬರಿ 20,048 ಮಾನವ ದಿನಗಳನ್ನು ಸೃಜನೆ ಮಾಡಿದೆ. ಇದರೊಂದಿಗೆ ಜಿಲ್ಲೆಯಲ್ಲಿಯೇ ಅತ್ಯಧಿಕ ಮಾನವ ದಿನಗಳನ್ನು ಸೃಜಿಸಿದ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಿಗದಿಪಡಿಸಿದ ಗುರಿಗಿಂತಲೂ ಶೇ.178.35 ರಷ್ಟು ಮೀರಿದ ಪ್ರಗತಿ ಸಾಧಿಸಿದೆ.

ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಗ್ರಾಮೀಣ ಭಾಗದ ಜನರು ನರೇಗಾ ಯೋಜನೆಯನ್ನು ಹೆಚ್ಚು ಸದುಪಯೋಗ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಅದರಲ್ಲೂ ಉಭಯ ತಾಲೂಕಿನಲ್ಲಿಯೂ ಗುರಿ ಮೀರಿದ ಸಾಧನೆ ಆಗಿರುವುದು ಶ್ಲಾಘನೀಯ. ಯೋಜನೆಯನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸಲು ಅಧಿಕಾರಿಗಳು, ಸಿಬ್ಬಂದಿ, ಗ್ರಾಪಂ ಆಡಳಿತ ಮಂಡಳಿ ಬಹಳಷ್ಟು ಶ್ರಮಿಸಿದೆ. ಡಾ.ರವಿಕುಮಾರ್ ಹುಕ್ಕೇರಿ, ಕಾರ್ಯನಿರ್ವಾಹಣಾಧಿಕಾರಿ, ಕುಂದಾಪುರ ಹಾಗೂ ಬೈಂದೂರು ತಾಪಂ https://www.vijayavani.net/the-great-work-of-saving-the-school-is-commendable https://www.vijayavani.net/kundapur-excellent-college-achievement

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net