ಬೈಂದೂರಿಗೆ ಬೇಕಿದೆ ತಂಗುದಾಣ

bus
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ತಾಲೂಕು ಕೇಂದ್ರವಾದ ಬೈಂದೂರಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರಯಾಣಿಕರ ತಂಗುದಾಣವಿಲ್ಲ. ನಿತ್ಯ ನೂರಾರು ಜನರು ಸಂಚರಿಸುವ ಬೈಂದೂರು ಪಟ್ಟಣ ಪ್ರಮುಖ ಜಂಕ್ಷನ್. ಸುತ್ತಮುತ್ತ ಹತ್ತಾರು ಹಳ್ಳಿಗಳಿಂದ ಬರುವ ಜನರು ಭಟ್ಕಳ ಹಾಗೂ ಕುಂದಾಪುರಕ್ಕೆ ತೆರಳಬೇಕಾದರೆ ಪ್ಲೈಓವರ್ ಕೆಳಗೆ ಸರ್ವೀಸ್ ರಸ್ತೆಯಲ್ಲಿ ನಿಲ್ಲಬೇಕು. ಈ ಹಿಂದೆ ಕುಂದಾಪುರಕ್ಕೆ ಹೋಗುವ ಪ್ರಯಾಣಿಕರಿಗೆ ಗ್ರಾಮ ಪಂಚಾಯಿತಿ ನಿಲ್ದಾಣ ನಿರ್ಮಿಸಿಕೊಟ್ಟಿತ್ತು. ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ ನಿಲ್ದಾಣವಿಲ್ಲದೇ ಚರಂಡಿ ಬದಿ ನಿಲ್ಲಬೇಕು.

ಇನ್ನು ಭಟ್ಕಳ ಕಡೆ ಸಾಗುವ ಪ್ರಯಾಣಿಕರ ಪಾಡು ಹೇಳತೀರದು. ಅಂಗಡಿ, ಬೇಕರಿ ಮುಂಭಾಗದಲ್ಲಿ ನಿಂತು ಬಸ್ಸಿಗಾಗಿ ಕಾಯಬೇಕಿದೆ. ಒಂದು ಕಡೆ ರಥಬೀದಿ, ಇನ್ನೊಂದೆಡೆ ಅಂಡರ್‌ಪಾಸ್ ಇದರ ನಡುವೆ ಸರ್ವೀಸ್ ರಸ್ತೆಯಲ್ಲಿ ವಾಹನ ಜಂಜಾಟದ ನಡುವೆ ಬಸ್‌ಗಾಗಿ ಕಾಯಬೇಕು. ಉಳಿದ ಪ್ರದೇಶಗಳಿಗೆ ಹೋಲಿಸಿದರೆ ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ ಬಸ್ ತಂಗುದಾಣ ಅತ್ಯಂತ ಅವಶ್ಯ. ಐದಕ್ಕೂ ಅಧಿಕ ಫ್ರೌಢಶಾಲೆ, ಪದವಿ ಹಾಗೂ ಪ್ರಥಮ ದರ್ಜೆ ಕಾಲೇಜು, ಕುಂದಾಪುರ, ಭಟ್ಕಳ ಸೇರಿ ಪ್ರತಿದಿನ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಇದರ ನಡುವೆ ಹಳ್ಳಿಗಳಿಂದ ಬರುವ ರೈತರು, ದೂರದೂರಿನಿಂದ ಬರುವ ಜನಸಾಮಾನ್ಯರು, ನೂರಾರು ನೌಕರರು ರಸ್ತೆ ಬದಿಯಲ್ಲೆ ಕಾಯಬೇಕು.

ಹಲವು ವರ್ಷದಿಂದ ಬೈಂದೂರು ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ತಂಗುದಾಣದ ಬೇಡಿಕೆಯಿದ್ದು, ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿ ನಡೆಸುವ ಕಂಪನಿ ಹಲವು ಮಾನದಂಡದ ಕಾರಣ ತಂಗುದಾಣ ವ್ಯವಸ್ಥಿತವಾಗಿ ನಿರ್ಮಾಣಗೊಂಡಿಲ್ಲ. ಹೀಗಾಗಿ ಮಳೆಗಾಲ ಸೇರಿ ವರ್ಷವಿಡಿ ಪ್ರಯಾಣಿಕರು ಅಂಗಡಿ ಮುಂಗಟ್ಟು ಅವಲಂಬಿಸಬೇಕಾಗಿದೆ. ಬೈಂದೂರು ಕೇಂದ್ರ ಭಾಗದಲ್ಲಿ ಸುಸಜ್ಜಿತ ಪ್ರಯಾಣಿಕರ ತಂಗುದಾಣ ನಿರ್ಮಾಣವಾಗಬೇಕಿದೆ.

ಪ್ರಯಾಣಿಕರಿಗೆ ಅನುಕೂಲವಿಲ್ಲ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾಸ್ಥಳ. ಪ್ರತಿದಿನ ನೂರಾರು ಭಕ್ತರು ರಾಜ್ಯ, ಹೊರರಾಜ್ಯದಿಂದ ಆಗಮಿಸುತ್ತಾರೆ. ರೈಲ್ವೆ ನಿಲ್ದಾಣದಿಂದ ಬೈಂದೂರಿಗೆ ಆಗಮಿಸಿ ಬಳಿಕ ಬಸ್‌ನಲ್ಲಿ ತೆರಳಬೇಕು. ಹೊಸ ಬಸ್ ನಿಲ್ದಾಣದ ಬಳಿ ಸಾರ್ವಜನಿಕರ ನಿತ್ಯಯಾತನೆ ಕಂಡು ಸಂಸದರ ನಿಧಿಯಿಂದ ಭಟ್ಕಳ ಕಡೆ ಹಾಗೂ ಖಾಸಗಿ ಸಹಕಾರದಲ್ಲಿ ಕುಂದಾಪುರ ಕಡೆ ಪ್ರಯಾಣಿಸುವವರಿಗೆ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಯಡ್ತರೆ ಕ್ರಾಸ್ ಮೂಲಕ ಕೊಲ್ಲೂರಿಗೆ ಸಾಗುವ ಭಕ್ತರಿಗೆ ಯಡ್ತರೆಯಲ್ಲಿ ಸದ್ಯ ಸಣ್ಣ ನಿಲ್ದಾಣವಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಿಲ್ಲ.

ಸಾರ್ವಜನಿಕರಿಂದಲೇ ನಿರ್ಮಾಣ

ಬೈಂದೂರು ಪಟ್ಟಣ ಪ್ರದೇಶ ಸೇರಿದಂತೆ ಶಿರೂರಿನಿಂದ ಉಪ್ಪುಂದದವರೆಗೆ ಅಗತ್ಯ ಇರುವ ಕಡೆ ನಿಲ್ದಾಣಗಳಿಲ್ಲ. ಹೆದ್ದಾರಿ ಲೆಕ್ಕಾಚಾರದಲ್ಲಿ ಪಟ್ಟಣ ಪ್ರದೇಶ ಸಾಕಷ್ಟು ಅಂತರದಲ್ಲಿ ಚಿಕ್ಕ ತಂಗುದಾಣ ನಿರ್ಮಿಸಲಾಗಿದೆ. ಈ ನಿಲ್ದಾಣದಲ್ಲಿ ಹತ್ತು ಜನರು ಕೂಡ ನಿಲ್ಲಲಾಗುವುದಿಲ್ಲ. ಹೆದ್ದಾರಿ ಸಮೀಪದಲ್ಲಿ ಈ ಹಿಂದೆ ಇರುವ ನಿಲ್ದಾಣಗಳನ್ನು ಕೆಡವಲಾಗಿದೆ. ಕೆಳಪೇಟೆಯಲ್ಲಿ ತಾಪಂ ಹಾಗೂ ಸಂಸದರ ನಿಧಿಯಿಂದ ಎರಡು ಬಸ್ ನಿಲ್ದಾಣ ನಿರ್ಮಾಣಗೊಂಡಿದೆ. ಶಿರೂರು ಮಾರ್ಕೆಟ್ ಹಾಗೂ ಅಳ್ವೆಗದ್ದೆ ಕ್ರಾಸ್‌ನಲ್ಲಿ ದಾನಿಗಳ ನೆರವು ಪಡೆದು ಸಾರ್ವಜನಿಕರೇ ತಂಗುದಾಣ ನಿರ್ಮಿಸಿದ್ದಾರೆ.

ಬೈಂದೂರಿನಲ್ಲಿ ಪ್ರಸ್ತುತ ಪ್ರಯಾಣಿಕರಿಗೆ ಸೂಕ್ತ ತಂಗುದಾಣ ಇಲ್ಲದಿರುವುದು ನಿತ್ಯದ ಸಮಸ್ಯೆಯಾಗಿದೆ. ಹೆದ್ದಾರಿ ಕಾಮಗಾರಿ ಮುಗಿದ ಬಳಿಕ ತಂಗುದಾಣ ನಿರ್ಮಾಣ ಮಾಡುವುದಾಗಿ ಕಾಮಗಾರಿ ನಡೆಸುವ ಅಧಿಕಾರಿಗಳು ತಿಳಿಸಿದ್ದರು. ಬೇಸಿಗೆಯಲ್ಲಿ ಬಿಸಿಲಿನ ತಾಪ ಜಾಸ್ತಿ ಇರುವುದರಿಂದ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಿಸುವ ಕುರಿತು ಸಂಬಂಧಪಟ್ಟ ಇಲಾಖೆ ಜತೆ ಮಾತನಾಡಿದ್ದು, ಶೀಘ್ರವಾಗಿ ಸಮರ್ಪಕ ನಿಲ್ದಾಣ ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದೇವೆ. -ಗುರುರಾಜ ಗಂಟಿಹೊಳೆ, ಶಾಸಕರು ಬೈಂದೂರು. ಬೈಂದೂರಿನಲ್ಲಿ ಈಗಿರುವ ಮುಖ್ಯರಸ್ತೆ ಸರ್ವೀಸ್ ರಸ್ತೆಯಾಗಿ ಮಾರ್ಪಟ್ಟಿದೆ. ಪ್ರಯಾಣಿಕರಿಗೆ ಅನೂಕೂಲವಾಗುವಂತೆ ಯಡ್ತರೆ ಹಾಗೂ ಬೈಂದೂರಿನಲ್ಲಿ ತಂಗುದಾಣ ನಿರ್ಮಿಸುವ ಪ್ರಸ್ತಾವನೆ ಕಳುಹಿಸಲಾಗಿದೆ. ಬೇಸಿಗೆಯಲ್ಲಿ ಪ್ರಯಾಣಿಕರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. -ಹೆದ್ದಾರಿ ಗುತ್ತಿಗೆದಾರ ಕಂಪನಿ ಅಧಿಕಾರಿ https://www.vijayavani.net/throwball-tournament-4 https://www.vijayavani.net/shop-breaking-and-theft

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net