

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಉಡುಪಿ ಜಿಲ್ಲೆಯಲ್ಲಿ ನೂತನ 15 ಗ್ರಾಮ ಪಂಚಾಯಿತಿಗಳು ಒಂದು ಅವಧಿಯ ಅಧಿಕಾರ ಮುಗಿಸಿ, ಮತ್ತೊಂದು ಚುನಾವಣೆ ನಡೆದು ಆಡಳಿತ ಮಂಡಳಿ ಅಧಿಕಾರ ಹಿಡಿದರೂ ಸ್ವತಂತ್ರ ಗ್ರಾಮಗಳು ಇನ್ನೂ ಅತಂತ್ರ ಸ್ಥಿತಿಯಲ್ಲಿವೆ.
ಕುಂದಾಪುರ ತಾಲೂಕಿನ ಹೊಸಾಡು, ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮಗಳು ಕಟ್ಟಡ ಕಟ್ಟಿ ಕಚೇರಿ ಆರಂಭಿಸಿವೆ. ಕಂದಾವರ, 74ನೇ ಉಳ್ಳೂರು ಗ್ರಾಮ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿದ್ದು, ಬೀಜಾಡಿ, ಯಡಮೊಗೆ ಪಂಚಾಯಿತಿ ಕಟ್ಟಡಕ್ಕೆ ಇನ್ನೂ ಸ್ಥಳದ ಸ್ಪಷ್ಟತೆಯಿಲ್ಲ. 15ರಲ್ಲಿ ಎರಡು ಗ್ರಾಮ ಬಿಟ್ಟು ಉಳಿದೆಲ್ಲ ಪಂಚಾಯಿತಿ ಕಟ್ಟಡ ಉದ್ಘಾಟನೆಯ ಹಂತದಲ್ಲಿದ್ದರೆ, ಮತ್ತೆ ಕೆಲವು ಕಟ್ಟಡಗಳ ಸಣ್ಣಪುಟ್ಟ ಕೆಲಸ ಬಾಕಿ ಉಳಿದಿವೆ. ಹೊಸ ಗ್ರಾಮಗಳ ರಚನೆಯಲ್ಲಿ ಅತಿ ಹೆಚ್ಚು ಗ್ರಾಮಗಳ ವಿಂಗಡನೆ ಕುಂದಾಪುರ ತಾಲೂಕಿನಲ್ಲಾಗಿದ್ದು, 9 ಹೊಸ ಗ್ರಾಮ ಉದಯವಾಗಿದೆ. ಉಡುಪಿ 1, ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಕಾಪು ಸೇರಿ 5 ಗ್ರಾಮಗಳು ಹೊಸದಾಗಿವೆ. ಒಟ್ಟಾರೆ ಹೊಸ ಗ್ರಾಮಗಳು ಕಟ್ಟಡದ ತಲೆ ಬಿಸಿಯಲ್ಲಿವೆ.
ಪಟ್ಟಣ ಪಂಚಾಯಿತಿ, ಪುರಸಭೆ ಜಟಾಪಟಿ
ಕಾಪು ಪುರಸಭೆ, ಬೈಂದೂರು ಪಟ್ಟಣ ಪಂಚಾಯಿತಿ ಕುರಿತು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜಟಾಪಟಿ ನಡೆದಿತ್ತು. ಜಿಪಂ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ ಕಾಪುಗಿಂತ ಬೈಂದೂರು ದೊಡ್ಡದು, ಬೈಂದೂರನ್ನು ಪಟ್ಟಣ ಪಂಚಾಯಿತಿ ಮಾಡಿ, ಕಾಪು ಪುರಸಭೆ ಮಾಡುವುದು ಸರಿಯಲ್ಲ ಎಂದಿದ್ದಾಗ ಕಾಪು ಜನಸಂಖ್ಯೆ ಆಧಾರದಲ್ಲಿ ಪುರಸಭೆ ಆಗಿದೆ ಎಂಬ ಉತ್ತರ ಸಿಕ್ಕಿತ್ತು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೈಂದೂರು ಮತ್ತು ಯಡ್ತರೆ ಪಂಚಾಯಿತಿಯ ಚುನಾವಣೆ ನಡೆದಿದ್ದು, ಪಡುವರಿದ್ದು ನಡೆದಿಲ್ಲ. ಯಡ್ತರೆ, ಬೈಂದೂರು ಗ್ರಾಮದಲ್ಲಿ ಚುನಾಯಿತ ಗ್ರಾಪಂ ಸದಸ್ಯರಿದ್ದರೂ ಸಭೆ ನಡೆಯದೆ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಪಟ್ಟಣ ಪಂಚಾಯಿತಿಗೂ ಚುನಾವಣೆ ನಡೆದಿಲ್ಲ. ಈ ಮಧ್ಯೆ ಪಟ್ಟಣ ಪಂಚಾಯಿತಿ ಸ್ಥಾನ ಪ್ರಶ್ನಿಸಿ ಯಡ್ತರೆ ಗ್ರಾಮ ನ್ಯಾಯಾಲಯ ಮೆಟ್ಟಿಲೇರಿದೆ.
ಪಂಚಾಯಿತಿ ಜಾಗದ ವಿರುದ್ಧ ಅರ್ಜಿ
ಯಡಮೊಗೆ ಗ್ರಾಪಂ ಕಟ್ಟಡಕ್ಕೆ ಸರ್ಕಾರಿ ಜಾಗ ಗುರುತಿಸಿದ್ದರೂ, ಖಾಸಗಿ ವ್ಯಕ್ತಿ ಅದರ ವಿರುದ್ಧ 53ರಲ್ಲಿ ಅರ್ಜಿ ಹಾಕಿದ್ದಾರೆ. ಸರ್ಕಾರಿ ಉದ್ದೇಶಕ್ಕೆ ಬಳಸುವ ಜಾಗದ ಬಗ್ಗೆ ಖಾಸಗಿಯವರು ಅರ್ಜಿ ಹಾಕಿ ತಕರಾರು ಮಾಡಲು ಅವಕಾಶವಿಲ್ಲದಿದ್ದರೂ ಇಲ್ಲಿ ತದ್ವಿರುದ್ಧ. ಗೋಪಾಡಿ ಮತ್ತು ಬೀಜಾಡಿ ಪಂಚಾಯಿತಿ ವಿಭಜಿಸಿದ್ದರಿಂದ ಬೀಜಾಡಿ ಪಂಚಾಯಿತಿ ಕಟ್ಟಡವಿದ್ದ ಜಾಗ ಗೋಪಾಡಿ ಗ್ರಾಮಕ್ಕೆ ಸೇರಿದೆ. ಆದರೆ ಬೀಜಾಡಿ ಪಂಚಾಯಿತಿ ಕಟ್ಟಡ ಕಟ್ಟಲು ಜಾಗದ ಗುರುತಿಸುವ ಕೆಲಸ ಆಗಿಲ್ಲ.
74ನೇ ಉಳ್ಳೂರು ಗ್ರಾಪಂ, 45 ಸೆಂಟ್ಸ್ ಜಾಗದಲ್ಲಿ 4000 ಚದರ ಅಡಿ ವಿಸ್ತೀರ್ಣದಲ್ಲಿದೆ. ಕಚೇರಿ ಅತ್ಯಂತ ವಿಶಾಲವಾಗಿದ್ದು ಅಧ್ಯಕ್ಷರ ಕೊಠಡಿ, ಉಪಾಧ್ಯಕ್ಷರ ಕೊಠಡಿ, ಮೀಟಿಂಗ್ ಹಾಲ್ ಹಾಗೂ ಸಿಬ್ಬಂದಿ ಹಾಲ್ ಹೊಂದಿದೆ. ಪಂಚಾಯಿತಿ ಕಟ್ಟಡ ಕಚೇರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಪ್ರತಾಪಚಂದ್ರ ಶೆಟ್ಟಿ ಉಪಸ್ಥಿತಿಯಲ್ಲಿ ಉದ್ಘಾಟನೆಯಾಗಿದೆ.
ಪ್ರಸಾದ್ ಶೆಟ್ಟಿ ಕಟ್ಟಿನಬೈಲ್, ಅಧ್ಯಕ್ಷ, 74ನೇ ಉಳ್ಳೂರು ಗ್ರಾಮ ಪಂಚಾಯಿತಿ
ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಜಾಗ ಗುರುತಿಸಲು ಸೂಚಿಸಿದ್ದು, ಗೋಮಾಳವಾದರೂ ಕೊಡುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ. ಯಡಮೊಗೆ ಹಾಗೂ ಬಿಜೂರು ಗ್ರಾಮಗಳಿಗೆ ಸರ್ಕಾರಿ ಜಾಗ ಗುರುತಿಸಲು ಸೂಚಿಸಿದ್ದೇವೆ. ನರೇಗಾದಲ್ಲಿ ಪಂಚಾಯಿತಿ ಕಟ್ಟಡ ಕಟ್ಟಲು ಅವಕಾಶವಿದ್ದು, ಹಳೇ ಕಟ್ಟಡ ಮತು ಶೀಥಿಲವಾಗಿರುವ 5 ಗ್ರಾಮ ಪಂಚಾಯಿತಿ ಕಟ್ಟಡ ಕಟ್ಟಲು ಸಿದ್ದತೆ ಮಾಡಲಾಗಿದೆ. ಯಡಮೊಗೆ ಗ್ರಾಪಂ ಕಟ್ಟಡ ಗುರುತಿಸಿದ ಸ್ಥಳದ ಬಗ್ಗೆ ಖಾಸಗಿ ವ್ಯಕ್ತಿ ಅಡ್ಡಗಾಲಿಕ್ಕಿರುವುದರ ಕುರಿತು ಪರಿಶೀಲಿಸಲಾಗುವುದು.
ಡಾ.ನವೀನ್ ಭಟ್, ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ