

ಗಂಗೊಳ್ಳಿ: ಪ್ರಥಮ ವಿಧಾನಸಭಾ ಚುನಾವಣೆಯಲ್ಲಿ ಸೋಲಾದ ಬಳಿಕ ಕ್ಷೇತ್ರದ ಮೂಲೆಮೂಲೆಗೂ ಹೋಗಿ ಕಾರ್ಯಕರ್ತರ ಹೋರಾಟ, ಪರಿಶ್ರಮ ಹಾಗೂ ಸಹಕಾರದಿಂದ ಪಕ್ಷ, ಸಂಘಟನೆ ಕಟ್ಟಿದ ಪರಿಣಾಮ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಬೈಂದೂರು ವಿಧಾನಸಭಾ ಕ್ಷೇತ್ರ ಈಗ ಸಂಪೂರ್ಣ ಬಿಜೆಪಿಯ ಕೇಂದ್ರವಾಗಿ ಬದಲಾಗಿದೆ ಎಂದು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.
ಆಲೂರು ಕ್ರಾಸ್ ಬಳಿಯ ಚಿತ್ತೂರಿನಲ್ಲಿ ಮಂಗಳವಾರ ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ಕ್ಷೇತ್ರದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು. ಕುಡಿಯುವ ನೀರು, ವೆಂಟೆಡ್ ಡ್ಯಾಂ, ರಸ್ತೆ, ಮೀನುಗಾರಿಕೆ ಮುಂತಾದ ಮೂಲ ಸೌಕರ್ಯಗಳಿಗೆ ಒತ್ತು ನೀಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಸಹಕಾರದಿಂದಾಗಿ ಬೈಂದೂರು ಕ್ಷೇತ್ರ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನು ಕೂಡ ಉನ್ನತ ಸ್ಥಾನಕ್ಕೇರುವ ವ್ಯವಸ್ಥೆ ಇದೆ. ಇಂದು ಗ್ರಾಮೀಣ ಮಟ್ಟದಲ್ಲಿ ಮಾತ್ರ ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಂಡಿದೆ. ಗ್ರಾ.ಪಂ. ಚುನಾವಣೆ ಬಂದಾಗ ಅವೆಲ್ಲವೂ ಅಣಬೆಯಂತೆ ತಲೆ ಎತ್ತುತ್ತವೆ. ಕ್ಷೇತ್ರ ವ್ಯಾಪ್ತಿಯ 39 ಗ್ರಾ.ಪಂ ಚುನಾವಣೆಯಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಈ ಕ್ಷೇತ್ರ ಬಿಜೆಪಿ ಕ್ಷೇತ್ರ ಎನ್ನುವುದನ್ನು ಕಾರ್ಯಕರ್ಯರು ಮತ್ತೆ ಸಾಬೀತು ಮಾಡಬೇಕು ಎಂದರು.
ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮಂಡಲ ಪ್ರಭಾರಿ ಶ್ರೀಶ ನಾಯಕ್ ಉಪಸ್ಥಿತರಿದ್ದರು.
ಅಗಲಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕೇಂದ್ರ ಸಚಿವ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಹಾಗೂ ಕೊಡೇರಿ ಬಂದರು ದೋಣಿ ದುರಂತ ಪ್ರಕರಣದಲ್ಲಿ ನಿಧನ ಹೊಂದಿದ ಮೀನುಗಾರರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮೀನುಗಾರರ ವಿವಿಧ ಬೇಡಿಕೆಗಳ ಬಗ್ಗೆ ಮೀನುಗಾರ ಮುಂಖಂಡ ಎ.ಆನಂದ ಖಾರ್ವಿ, ಗೋಹತ್ಯೆ ನಿಷೇಧದ ಬಗ್ಗೆ ನಿರ್ಣಯವನ್ನು ಸಂಸಾಡಿ ಅಶೋಕ್ ಕುಮಾರ್ ಶೆಟ್ಟಿ ಮಂಡಿಸಿದರು. ಬಿಜೆಪಿ ಬೈಂದೂರು ಮಂಡಲ ವಿನೋದ್ ಭಂಡಾರಿ ಸ್ವಾಗತಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾದರ್ಶಿನಿ ದೇವಾಡಿಗ ನಿರೂಪಿಸಿದರು. ಪ್ರಕಾಶ್ ಪೂಜಾರಿ ಜೆಡ್ಡು ವಂದಿಸಿದರು.
ಕಾರ್ಯಕಾರಿಣಿ ಸಭೆಯಲ್ಲಾದ ವಿಚಾರಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಆಗಬೇಕು. ಕಾರ್ಯಕರ್ತರೆಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಮುಂದಿನ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಬಹುದು. - ಬಿ.ಎಂ. ಸುಕುಮಾರ ಶೆಟ್ಟಿ ಶಾಸಕ