ಅಂಬೇಡ್ಕರ್ ಭವನ ಅವ್ಯವಸ್ಥೆಯ ಆಗರ

BYN
Published on

| ನರಸಿಂಹ ನಾಯಕ್ ಬೈಂದೂರು ಸರ್ಕಾರ ಜನ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಯೋಜನೆಗಳು ಕೇವಲ ಉದ್ಘಾಟನೆಗೆ ಸೀಮಿತವಾಗಿ ಬಳಿಕ ಜನೋಪಯೋಗದಿಂದ ದೂರ ಆಗುತ್ತಿರುವುದು ವ್ಯವಸ್ಥೆಯ ಲೋಪಗಳಿಗೆ ಹಿಡಿದ ಕೈಗನ್ನಡಿ. ಬೈಂದೂರು ತಾಲೂಕು ಸೇರಿದಂತೆ ಬಹುತೇಕ ಭಾಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ನಿರ್ಮಿಸಿದ ಅಂಬೇಡ್ಕರ್ ಭವನಗಳು ನಿರ್ವಹಣೆ ಕೊರತೆಯಿಂದಾಗಿ ಐದಾರು ವರ್ಷಗಳಲ್ಲಿ ಅವ್ಯವಸ್ಥೆಯ ಆಗರವಾಗಿಬಿಟ್ಟಿವೆ. ಇದರಿಂದಾಗಿ ಲಕ್ಷಾಂತರ ರೂ. ಅನುದಾನದಿಂದ ನಿರ್ಮಿಸಿದ ಸಭಾಭವನಗಳು ನಿರುಪಯುಕ್ತ ಸ್ಥಳಗಳಾಗಿ ಮಾರ್ಪಟ್ಟಿವೆ. ಬೈಂದೂರು ಅಂಬೇಡ್ಕರ್ ಯುವಕ ಸಂಘದ ಒತ್ತಾಯದ ಮೇರೆಗೆ ವಿಜಯವಾಣಿ ಸರಣಿ ವರದಿ ಮಾಡಿದ್ದರ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮೂಲೆಗುಂಪಾಗಿದ್ದ ಹಾಗೂ ಅರ್ಧಂಬಧರ್ ನಿರ್ಮಾಣದ ಅಂಬೇಡ್ಕರ್ ಭವನಕ್ಕೆ ಅಂದಿನ ಸಮಾಜ ಕಲ್ಯಾಣ ಸಚಿವ ಆಂಜನೇಯ ತಮ್ಮ ಇಲಾಖೆಯಿಂದ 50 ಲಕ್ಷ ರೂ. ಹಾಗೂ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಶಾಸಕರ ನಿಧಿಯಿಂದ 10 ಲಕ್ಷ ರೂ. ಸಹಿತ ಒಟ್ಟು 60 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲಾಗಿತ್ತು. ಆರಂಭದಲ್ಲಿ ಒಂದೆರಡು ಕಾರ್ಯಕ್ರಮಗಳ ಬಳಿಕ ಸರ್ಕಾರಿ ಕಾರ್ಯಕ್ರಮ, ಚುನಾವಣೆ ಕೌಂಟರ್ ರಚನೆ ಮತ್ತು ಕೆಲವೊಂದು ಶಿಬಿರಗಳು ಮಾತ್ರ ನಡೆದಿವೆ. ಆದರೆ ಕಟ್ಟಡದ ನಿರ್ವಹಣೆ ಕೊರತೆಯಿಂದ ಸಭಾಭವನ ಕಸದ ಕೊಂಪೆಯಾಗಿದೆ. ಸ್ವಚ್ಛತೆ ಇಲ್ಲದ ಶೌಚಗೃಹ ಹಾಗೂ ನಿರ್ವಹಣೆ ಇಲ್ಲದ ಕಟ್ಟಡ ಮತ್ತು ಪರಿಸರದ ಬಗ್ಗೆ ಆಯೋಜಕರು ಗಮನಹರಿಸದಿರುವುದು ಬೇಸರದ ವಿಚಾರ. ಹಿಂದೆ ಇದು ಯಡ್ತರೆ ಗ್ರಾಪಂ ಅಧೀನದಲ್ಲಿತ್ತು. ಈಗ ಬೈಂದೂರು ಪಪಂ ವ್ಯಾಪ್ತಿಗೆ ಳಪಟ್ಟಿದೆ. ಸಂಬಂಧಪಟ್ಟ ಇಲಾಖೆ ಮತ್ತು ಜವಾಬ್ದಾರಿ ಪಡೆದ ಸಮುದಾಯಗಳ ಸಂಘಟನೆಗಳು ತಕ್ಷಣ ಗಮನಹರಿಸಿ ಸರ್ಕಾರದಿಂದ ದೊರೆತ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ.

ಸರ್ಕಾರದ ಸುತ್ತೋಲೆಯಂತೆ ಆಯಾಯ ಗ್ರಾಪಂಗಳಿಗೆ ಅಲ್ಲಿನ ಅಂಬೇಡ್ಕರ್ ಭವನದ ಜವಾಬ್ದಾರಿ ವಹಿಸಿಕೊಡಲಾಗಿದೆ. ಅದರ ನಿರ್ವಹಣೆ ಜವಾಬ್ದಾರಿ ಕೂಡ ಗ್ರಾಪಂಗಳದ್ದಾಗಿದೆ. ಇಲಾಖೆ ಈ ಬಗ್ಗೆ ಸ್ಪಷ್ಟಪಡಿಸಿರುವ ಕಾರಣ ನಾಗರಿಕರು ಮತ್ತು ಸ್ಥಳೀಯರೊಂದಿಗೆ ಇದರ ಸುವ್ಯವಸ್ಥೆಗೆ ಗಮನಹರಿಸಬೇಕಿದೆ. | ರಮೇಶ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅಂಬೇಡ್ಕರ್ ಸಭಾಭವನದ ನಿರ್ವಹಣೆಯನ್ನು ಸರ್ಕಾರಿ ಅಧಿಕಾರಿಗಳನ್ನೊಳಗೊಂಡ ಸಮುದಾಯದ ಆಯ್ದ ಸದಸ್ಯರನ್ನು ಸೇರಿಸಿಕೊಂಡು ಒಂದು ಉನ್ನತ ಸಮಿತಿ ರಚಿಸಿ ಅವರಿಗೆ ಇದರ ಜವಾಬ್ದಾರಿ ನೀಡಬೇಕು. ಇದರಿಂದ ಇಲ್ಲಿನ ವಾತಾವರಣ ಸರಿ ಮಾಡಬಹುದು ಎಂಬ ಅಂಶವನ್ನು ಈಗಾಗಲೇ ಹಲವು ಬಾರಿ ಕುಂದು ಕೊರತೆ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಷ್ಟಾದರೂ ಈ ಭವನದ ಅವ್ಯವಸ್ಥೆ ಬಗ್ಗೆ ಯಾರೂ ಕೂಡ ಕ್ಯಾರೆ ಎನ್ನುತ್ತಿಲ್ಲ. | ದಯಾನಂದ ಪಿ. ಕಾರ್ಯದರ್ಶಿ ಅಂಬೇಡ್ಕರ್ ಯುವಕ ಸಂಘ ಬೈಂದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net