

ಹನೂರು : ತಾಲೂಕಿನ ಹೊಗೆನಕಲ್ ಜಲಪಾತದ ಕಾವೇರಿ ನದಿಯಲ್ಲಿ ಯಾವುದೇ ಸುರಕ್ಷತಾ ಕ್ರಮವನ್ನು ಅನುಸರಿಸದೇ ಗಡಿಯನ್ನು ದಾಟಲು ದುಸ್ಸಾಹಸದಿಂದ ಬೈಕ್‌ಗಳನ್ನು ತೆಪ್ಪದ ಮೂಲಕ ಸಾಗಿಸುತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಮಲೆಮಹದೇಶ್ವರ ಬೆಟ್ಟದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ತಮಿಳುನಾಡು- ಕರ್ನಾಟಕದ ಗಡಿ ಹೊಗೆನಕಲ್ ಫಾಲ್ಸ್‌ಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಇದರಲ್ಲಿ ಬೈಕ್‌ನಲ್ಲಿ ಆಗಮಿಸಿದ ಕೆಲ ಪ್ರವಾಸಿಗರು ಅದರಲ್ಲೂ ಯುವಕರು ತಮಿಳುನಾಡು ಭಾಗದಿಂದ ಕರ್ನಾಟಕಕ್ಕೆ ಹಾಗೂ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನದಿಯಲ್ಲಿ ತೆಪ್ಪದ ಮೂಲಕ ಹರಸಾಹಸ ಪಟ್ಟು ವಾಹನ ಸಮೇತ ತೆರಳುತ್ತಿದ್ದಾರೆ. ಅಂಬಿಗರು ಇವರನ್ನು ಕರೆದೊಯ್ಯುತ್ತಿದ್ದಾರೆ. ಪ್ರತಿ ಬೈಕ್‌ಗೆ 70 ರೂ ದರ ನಿಗದಿ ಪಡಿಸಲಾಗಿದೆ.
ಇವರು ಸಾಹಸಪಟ್ಟು ತೆರಳುವ ಕಾವೇರಿ ನದಿಯ ಈ ಜಲ ಮಾರ್ಗದಲ್ಲಿ ಹೆಚ್ಚು ಆಳವಿದೆ. ಹಾಗಾಗಿ ಒಂದು ವೇಳೆ ತೆಪ್ಪ ನಡೆಸುವವರು ಸಲ್ಪ ಎಚ್ಚರ ತಪ್ಪಿದರೂ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಇದನ್ನು ಲೆಕ್ಕಿಸದ ಪ್ರವಾಸಿಗರು ಯಾವುದೇ ಸುರಕ್ಷಾ ನಿಯಮವನ್ನು ಅನುಸರಿಸದೇ ಬೈಕ್‌ಗಳನ್ನು ಸಾಗಿಸುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಇದು ಕಾನೂನು ಬಾಹಿರ ಕೆಲಸವೂ ಆಗಿದೆ.
ಈ ಬಗ್ಗೆ ತಮಿಳುನಾಡಿನ ಹೊಗೇನಕಲ್ ಭಾಗದಿಂದ ಕರ್ನಾಟಕದ ಭಾಗಕ್ಕೆ 8 ಜನರು ಒಳಗೊಂಡಂತೆ 5 ಬೈಕ್‌ಗಳನ್ನು ಹರ ಸಾಹಸಪಟ್ಟು ತೆಪ್ಪದಲ್ಲಿ ಸಾಗಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡಲಾಗಿದೆ. ಬೈಕ್‌ಗಳನ್ನು ತೆಪ್ಪದಲ್ಲಿ ಕೊಂಡೊಯ್ಯುತ್ತಿರುವ ಬಗ್ಗೆ 2 ರಾಜ್ಯಗಳ ಪೊಲೀಸರಿಗೆ ತಿಳಿದಿದ್ದರೂ ಮೌನ ವಹಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಪೊಲೀಸರು ಇನ್ನಾದರೂ ಇತ್ತ ಗಮನಹರಿಸಿ ಅನಾಹುತ ಸಂಭವಿಸುವ ಮುನ್ನ ದುಸ್ಸಾಹಾಸಕ್ಕೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.