ಕೊಡಗು ವಿವಿ ಉಳಿಸಲು ಬೈಕ್ ಜಾಥಾ

byke jatha
Published on

ಕುಶಾಲನಗರ:

ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕೊಡಗು ವಿವಿ ಮುಚ್ಚಬಾರದು ಎಂದು ಒತ್ತಾಯಿಸಿ ಕೊಡಗು ವಿವಿ ಬೋಧಕರು, ಬೋಧಕೇತರರು ಮತ್ತು ವಿದ್ಯಾರ್ಥಿಗಳು ಚಿಕ್ಕ ಅಳುವಾರದ ವಿವಿ ಕ್ಯಾಂಪಸ್‌ನಿAದ ಕುಶಾಲನಗರದ ತಹಸೀಲ್ದಾರ್ ಕಚೇರಿ ತನಕ ಮಂಗಳವಾರ ಬೈಕ್ ಜಾಥಾ ನಡೆಸಿ ಮುಖ್ಯ ಮಂತ್ರಿಗಳಿಗೆ ಅಂಚೆ ಪತ್ರ ಅಭಿಯಾನ ಮಾಡಿದರು.

ಸುಮಾರು 16 ಕಿಮೀ ಬೈಕ್ ಜಾಥಾದಲ್ಲಿ ಕ್ರಮಿಸಿ ತಾಲೂಕು ಕೇಂದ್ರ ಕುಶಾಲನಗರಕ್ಕೆ ಆಗಮಿಸಿದ ತಂಡ ತಹಸೀಲ್ದಾರ್ ಕಿರಣ್ ಗೌರಯ್ಯ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭ ಜಾಥಾದಲ್ಲಿ ಕೊಡಗು ವಿವಿ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಕೂಡ ಆಗಮಿಸಿದರು. ಜಾಥಾದಲ್ಲಿ ಬಂದವರನ್ನು ಉದ್ದೇಶಿಸಿ ತಹಸೀಲ್ದಾರ್ ಕಚೇರಿ ಬಳಿ ಮಾತನಾಡಿದ ಕೊಡಗು ವಿವಿ ಹಿತರಕ್ಷಣಾ ಸಮಿತಿ ಗೌರವ ಅಧ್ಯಕ್ಷ ವಿ.ಪಿ. ಶಶಿಧರ್, ಕೊಡಗು ವಿವಿ ಕೊಡಗಿನ ನೆಲದ ಹೆಮ್ಮೆಯ ಪ್ರತೀಕವಾಗಿದೆ. ಸರ್ಕಾರ ಯಾವುದೇ ಇರಲಿ, ತಟ್ಟೆಗೆ ಊಟ ಬಡಿಸಿ ಹಸಿದವರಿಗೆ ಕೊಟ್ಟು ಕಿತ್ತುಕೊಳ್ಳುವ ಕೆಲಸ ಮಾಡಬಾರದು.

ಇಲ್ಲಿ ಕಳೆದ ಎರಡು ವರ್ಷಗಳಿಂದ ಸರ್ಕಾರದಿಂದ ಅನುದಾನ ಇಲ್ಲದಿದ್ದರೂ ವಿವಿ ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದೆ. ಇನ್ಫೋಸಿಸ್, ಟಾಟಾ ಸೇರಿದಂತೆ ಹೆಸರಾಂತ ಉದ್ಯಮ ಸಂಸ್ಥೆಗಳ ಜೊತೆ ಸಂಪರ್ಕ ಮಾಡಿ ಕೊಡಗು ವಿವಿಗೆ ಆರ್ಥಿಕ ಸಹಾಯ ಕೋರಲಾಗಿತ್ತು. ಇನ್ನೇನು ಅನುದಾನ ಬರಬೇಕು ಎನ್ನುವಷ್ಟರಲ್ಲಿ ಸರ್ಕಾರದಿಂದ ಕಳೆದ ಒಂದು ವರ್ಷದಿಂದಲೂ ವಿವಿ ಮುಚ್ಚುವ ಗುಸು ಗುಸು ಕೇಳಿ ಬರುತ್ತಲೇ ಇತ್ತು. ಜತೆಗೆ ವಿವಿಯ ಒಳಗಿರುವ ಕೆಲವು ಹಿತಶತ್ರುಗಳು ವಿವಿ ಮುಚ್ಚುತ್ತದೆ ಎಂಬ ವ್ಯವಸ್ಥಿತ ಅಪಚಾರ ಮಾಡುತ್ತಾ ಬಂದಿದ್ದಾರೆ. ಈಗಲೂ ಅದನ್ನು ಮುಂದುವರೆಸಿದ್ದಾರೆ. ಇದನ್ನು ಸಹಿಸಲಾಗದು.

ಮಂಗಳೂರು ವಿವಿ ಅಧೀನದಲ್ಲಿ ಜ್ಞಾನ ಕಾವೇರಿ ಇದ್ದಾಗ ಏನೆಲ್ಲಾ ಆವಾಂತರಗಳು ನಡೆದಿದ್ದವು ಎಲ್ಲಾ ಮಾಹಿತಿ ಇದೆ. ಆದರೆ ಕೊಡಗು ಜಿಲ್ಲೆಗೆ ಸ್ವಾಯತ್ತ ವಿವಿ ಘೋಷಣೆಯಾಗಿ ಪೂರಕವಾದ ಅನುದಾನ ಹರಿದು ಬಂದರೆ ಕೊಡಗು ವಿವಿ ರಾಜ್ಯದಲ್ಲಿಯೇ ವಿಶೇಷ ವಿವಿ ಯಾಗಲಿದೆ. ಆದ್ದರಿಂದ ಸರ್ಕಾರ ಕೂಡಲೇ ಮುಚ್ಚುವ ನಿರ್ಧಾರದಿಂದ ದೂರ ಸರಿಯಬೇಕು. ಈ ನಿಟ್ಟಿನಲ್ಲಿ ಶಾಸಕ ಡಾ. ಮಂತರಗೌಡರ ನೇತೃತ್ವದಲ್ಲಿ ಈ ತಿಂಗಳ 7 ರ ನಂತರ ಕೊಡಗು ವಿವಿ ಹಿತರಕ್ಷಣಾ ಸಮಿತಿಯಿಂದ ನಿಯೋಗ ಬೆಂಗಳೂರಿಗೆ ತೆರಳಲಿದೆ ಎಂದರು.

ಕೊಡಗು ವಿವಿ ಅಧ್ಯಾಪಕರ ಪರವಾಗಿ ಮಾತನಾಡಿದ ಡಾ. ಜಮೀರ್ ಅಹಮದ್, ಕೊಡಗು ವಿವಿಗೆ ಮಾರ್ಚ್ 28 ಕ್ಕೆ ಎರಡು ವರ್ಷ ತುಂಬುತ್ತಿದೆ.

ಈಗಾಗಲೇ ಕಳೆದ ಎರಡು ವಷÀðಗಳಲ್ಲಿ ವಿವಿ ಶೈಕ್ಷಣಿಕವಾಗಿ ಬಹಳಷ್ಟು ಮೈಲಿಗಲ್ಲು ಸಾಧಿಸಿದೆ. ಕೊಡಗಿನ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಲು ದೇಶದ ಬೇರೆ ಬೇರೆ ಪ್ರತಿಷ್ಠಿತ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಕೊಡಗು ವಿವಿ 12 ಕೌಶಲ್ಯಾಭಿವೃದ್ದಿ ಕೋರ್ಸ್ಗಳನ್ನು ತೆರೆದು ವಿದ್ಯಾರ್ಥಿಗಳ ಜೀವನ ಭದ್ರತೆಗೆ ಮುಂದಾಗಿದೆ. ಕೆಲವರು ವಿವಿಯ ವಿರುದ್ಧವೇ ಅಪಪ್ರಚಾರ ಮಾಡುತ್ತಾ ವಿವಿಗೆ ಕಂಟಕರಾಗಿದ್ದಾರೆ. ಆದ್ದರಿಂದ ಕೊಡಗು ವಿವಿಯ ಬಗ್ಗೆ ಟೀಕೆ ಮಾಡುವ ಯಾರೇ ಬೇಕಾದರೂ ಅಗತ್ಯ ಅಂಕಿ ಅಂಶಗಳನ್ನು ಪಡೆದುಕೊಳ್ಳಬಹುದು. ರಾಜ್ಯ ಸರ್ಕಾರ ಕೂಡಲೇ ಕೊಡಗಿನ ಪ್ರಾಕೃತಿಕ ಸನ್ನಿವೇಶಕ್ಕನುಗುಣವಾಗಿ ಇಲ್ಲಿ ತೆರೆಯಲಾದ ವಿವಿ ಯನ್ನು ಮುಚ್ಚದಂತೆ ಕ್ರಮ ತೆಗೆದುಕೊಳ್ಳಬೇಕುಎ ಎಂದು ಮನವಿ ಮಾಡಿದರು.

ಕೊಡಗು ವಿವಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ ಸಂಚಾಲಕರಾದ ಕೆ.ಎಸ್. ಮೂರ್ತಿ, ಎಂ.ಎನ್. ಚಂದ್ರಮೋಹನ್, ಟಿ.ಬಿ.ಜಗದೀಶ್ ಹಾಗೂ ವಿವಿಯ ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net