ತೊಕ್ಕೊಟ್ಟಿಗೆ ಬ್ಯಾರಿ ಭವನ ಶಿಫ್ಟ್

byari bavana
Published on

ಉಳ್ಳಾಲ: ಬ್ಯಾರಿ ಅಕಾಡೆಮಿ ಸ್ವಂತ ಕಟ್ಟಡ ‘ಬ್ಯಾರಿ ಭವನ’ ನೀರುಮಾರ್ಗದ ಬೈತುರ್ಲಿಯಿಂದ ತೊಕ್ಕೊಟ್ಟಿಗೆ ಸ್ಥಳಾಂತರವಾಗಿದೆ.

ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿ ಆರಂಭದಿಂದಲೂ ಬಾಡಿಗೆ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿದ್ದು, ಪ್ರಸ್ತುತ ಮಿನಿ ವಿಧಾನಸೌಧದಲ್ಲಿದೆ. ಅಕಾಡೆಮಿಗೆ ಸ್ವಂತ ಕಟ್ಟಡ ಅಗತ್ಯ ಕಾರಣ ಹಿಂದಿನ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ನೇತೃತ್ವದಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ನೀರುಮಾರ್ಗದ ಬೈತುರ್ಲಿಯಲ್ಲಿ ಮೂಡಾಕ್ಕೆ 40 ಲಕ್ಷ ರೂ. ಪಾವತಿಸಿ 25 ಸೆಂಟ್ಸ್ ಜಮೀನು ಖರೀದಿಸಲಾಗಿತ್ತು. ಈ ಜಾಗದಲ್ಲಿ ‘ಬ್ಯಾರಿ ಭವನ’ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತಾದರೂ ವಿವಿಧ ಕಾರಣಗಳಿಂದ ಕಾಮಗಾರಿಗೆ ಚಾಲನೆ ದೊರೆತಿರಲಿಲ್ಲ.

ಆದರೆ ಇದೀಗ ‘ಬ್ಯಾರಿ ಭವನ’ ಉಳ್ಳಾಲ ತಾಲೂಕಿನ ಕೇಂದ್ರವೆನಿಸಿರುವ ತೊಕ್ಕೊಟ್ಟಿಗೆ ಸ್ಥಳಾಂತರವಾಗಿದ್ದು, ಜ.1ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಹಿಂದೆ ಜಮೀನು ಗುರುತಿಸಿದ್ದ ಬೈತುರ್ಲಿಯ ಆಸುಪಾಸಿನಲ್ಲಿ ಬ್ಯಾರಿ ಭಾಷಿಕರ ಜನಸಂಖ್ಯೆ ವಿರಳವಾಗಿರುವುದರಿಂದ ಭವನಕ್ಕೆ ಉಪಯುಕ್ತ ಅಲ್ಲ ಎಂಬುದು ಬ್ಯಾರಿ ಅಕಾಡೆಮಿ ಅಧ್ಯಕ್ಷರ ವಾದ. ತೊಕ್ಕೊಟ್ಟು ಪರಿಸರದಲ್ಲಿ ಅತ್ಯಧಿಕ ಬ್ಯಾರಿ ಭಾಷಿಕರು ಇರುವುದರಿಂದ ಸರ್ಕಾರ ಬಸ್‌ಸ್ಟಾೃಂಡ್ ಬಳಿ 25 ಸೆಂಟ್ಸ್ ಜಮೀನು ಮಂಜೂರು ಮಾಡಿದ್ದು ಆರು ಕೋಟಿ ರೂ. ವೆಚ್ಚದಲ್ಲಿ ಬ್ಯಾರಿ ಭವನ ನಿರ್ಮಾಣವಾಗಲಿದೆ.

ಅಬ್ಬಕ್ಕ ಭವನಕ್ಕೆ ಜತೆಯಾಗಲಿದೆ ಬ್ಯಾರಿ ಭವನ!: ಬ್ಯಾರಿ ಭವನ ನಿರ್ಮಾಣವಾಗಲಿರುವ ಜಮೀನಿಗೆ ತಾಗಿಕೊಂಡು 25 ಸೆಂಟ್ಸ್ ಜಮೀನನ್ನು ಅಬ್ಬಕ್ಕ ಭವನ ಮತ್ತು ಗಡಿನಾಡ ಭವನಕ್ಕೆ ಗುರುತಿಸಲಾಗಿದೆ. ಅಲ್ಲದೆ ಅಬ್ಬಕ್ಕ ಭವನಕ್ಕೆ ಶಿಲಾನ್ಯಾಸ ನಡೆದು ಕೆಲವು ವರ್ಷ ಕಳೆದರೂ ಸರ್ಕಾರದ ಮಟ್ಟದಲ್ಲಿ ಎದುರಾದ ವಿವಿಧ ಸಮಸ್ಯೆಗಳಿಂದಾಗಿ ಕಟ್ಟಡ ಕಾಮಗಾರಿ ಆರಂಭಗೊಂಡಿಲ್ಲ. ಇಲ್ಲಿ ಶೀಘ್ರ ಅಬ್ಬಕ್ಕ ಭವನ ನಿರ್ಮಾಣವಾಗಬೇಕೆನ್ನುವ ಬೇಡಿಕೆಯಿದೆ. ಆದರೆ ಇದೀಗ ಯಾರೊಬ್ಬರ ಬೇಡಿಕೆಯೇ ಇಲ್ಲದ ಬ್ಯಾರಿ ಭವನ ನಿರ್ಮಾಣ ಕಾಮಗಾರಿ ಸನಿಹದಲ್ಲಿದೆ.

ಕಾಂಗ್ರೆಸ್ ಸರ್ಕಾರ ‘ಬ್ಯಾರಿ ಭವನ’ಕ್ಕೆ ಬೈತುರ್ಲಿಯಲ್ಲಿ 25 ಸೆಂಟ್ಸ್ ಜಮೀನು ಗುರುತಿಸಿ ಕಟ್ಟಡಕ್ಕೆ ಯೋಜನೆ ರೂಪಿಸಲಾಗಿತ್ತಾದರೂ ಬಿಜೆಪಿ ಸರ್ಕಾರದ ಜನಪ್ರತಿನಿಧಿಗಳ ವಿರೋಧದಿಂದಾಗಿ ತೊಕ್ಕೊಟ್ಟು ಬಸ್ ತಂಗುದಾಣದ ಬಳಿ 25 ಜಾಗ ಗುರುತಿಸಲಾಗಿದೆ. ಅಬ್ಬಕ್ಕ ಭವನದ ಮೀಸಲು ಜಮೀನಿನಲ್ಲಿ ಬ್ಯಾರಿ ಭವನ ನಿರ್ಮಾಣವಾಗಲಿದೆ. ತೊಕ್ಕೊಟ್ಟಿನಲ್ಲಿ ಭವನ ನಿರ್ಮಾಣಕ್ಕೆ ನಾನು ಒಪ್ಪಿಯೇ ಜಾಗ ಗುರುತಿಸಲಾಗಿದೆ.

ಯು.ಟಿ.ಖಾದರ್, ಶಾಸಕ

ನಮ್ಮ ಅವಧಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಮತ್ತು ಬ್ಯಾರಿ ಭವನಕ್ಕೆ ಅನುದಾನಕ್ಕಾಗಿ ಮನವಿ ಮಾಡಲಾಗಿತ್ತು, ಪ್ರಸ್ತುತ ಬೆಂಗಳೂರಿನಲ್ಲಿ ಬ್ಯಾರಿ ಭವನದ ಕಾಮಗಾರಿ ಬಹುತೇಕ ಮುಗಿದಿದೆ. ಬೈತುರ್ಲಿಯಲ್ಲಿ ವಿರೋಧವಿರುವುದರಿಂದ ತೊಕ್ಕೊಟ್ಟಿಗೆ ವರ್ಗಾಯಿಸಲಾಗಿದೆ. ಇದು ಒಳ್ಳೆಯ ನಿರ್ಧಾರ. ಎಲ್ಲಾದರೂ ಸರಿ, ಬ್ಯಾರಿ ಭವನ ನಿರ್ಮಾಣವಾಗಲಿ.

ಬಿ.ಎ.ಮುಹಮ್ಮದ್ ಹನೀಫ್, ಮಾಜಿ ಅಧ್ಯಕ್ಷ, ಬ್ಯಾರಿ ಸಾಹಿತ್ಯ ಅಕಾಡೆಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net