

ಬ್ಯಾಡಗಿ: ವಾಣಿಜ್ಯ, ವ್ಯಾಪಾರೀಕರಣ ಚಟುವಟಿಕೆಗಳ ಬೆಳವಣಿಗೆಯಲ್ಲಿ ಬ್ಯಾಂಕ್ ಹಾಗೂ ಆರ್ಥಿಕ ಸಹಕಾರಿ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ವೀರಮಾಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ಆಲದಗೇರಿ ಹೇಳಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ವೀರಮಾಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ 29ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮೆಣಸಿನಕಾಯಿ ವಿಶ್ವ ಮಾರುಕಟ್ಟೆ ಖ್ಯಾತಿಯ ಬ್ಯಾಡಗಿಯಲ್ಲಿ ಬ್ಯಾಂಕ್ಗಳು ಹಾಗೂ ಆರ್ಥಿಕ ಸಂಸ್ಥೆಗಳ ಅಗತ್ಯ ಹೆಚ್ಚಾಗಿದೆ. ದೊಡ್ಡ ಮಟ್ಟದಲ್ಲಿ ಆರ್ಥಿಕ ಸಹಕಾರ ಬೇಕಿದೆ. ಹಲವು ಸಂಸ್ಥೆಗಳು ಹಣಕಾಸು ವಹಿವಾಟು ನಡೆಸುವ ಮೂಲಕ ಮಹತ್ವದ ಬೆಳವಣಿಗೆಯಲ್ಲಿ ಸಹಕಾರಿಯಾಗಿವೆ. ಬ್ಯಾಡಗಿ ಪಟ್ಟಣದಲ್ಲಿ ಶತಮಾನ ಪೂರೈಸಿದ ಸಹಕಾರಿ ಬ್ಯಾಂಕ್, ಸುವರ್ಣ ಮಹೋತ್ಸವ ಆಚರಿಸಿದ ಬ್ಯಾಂಕ್ಗಳು ಕಾರ್ಯನಿರ್ವಹಿಸುತ್ತಿವೆ. ಈ ಸಾಲಿಗೆ ನಮ್ಮ ವೀರಮಾಹೇಶ್ವರ ಪತ್ತಿನ ಸಹಕಾರಿ ಸೇರುತ್ತಿರುವುದಕ್ಕೆ ಗ್ರಾಹಕರ ಪ್ರಾಮಾಣಿಕ ಸಹಕಾರವೇ ಕಾರಣ ಎಂದರು.
29 ವರ್ಷಗಳ ಹಿಂದೆ 180 ಸದಸ್ಯರಿಂದ ಅಲ್ಪ ಠೇವಣಿಯೊಂದಿಗೆ ಆರಂಭವಾದ ಸಹಕಾರಿ ಸಂಘ, ಈಗ 850ಕ್ಕೂ ಸದಸ್ಯರನ್ನು ಹೊಂದಿದೆ. 8 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸಿದೆ. ಈವರೆಗೂ 1.50 ಕೋಟಿ ರೂ. ಠೇವಣೆ ಸಂಗ್ರಹಿಸಿ, ಗ್ರಾಹಕರಿಗೆ ವಿಶೇಷ ಯೋಜನೆ ರೂಪಿಸಿದೆ. ಧನಲಕ್ಷಿ್ಮೕ ಯೋಜನೆ ಗ್ರಾಹಕರಿಗೆ ಉತ್ತಮ ಯೋಜನೆಯಾಗಿದೆ. ಮೀಸಲು ನಿಧಿ ಸಂರಕ್ಷಿಸುವ ಮೂಲಕ ಗ್ರಾಹಕರ ವಿಶ್ವಾಸ ಹೆಚ್ಚಿಸಿಕೊಂಡ ಪರಿಣಾಮ ಠೇವಣಿ ಪ್ರಮಾಣವೂ ಏರಿಕೆ ಕಂಡಿದೆ. 25ನೇ ವರ್ಷದಲ್ಲಿ ಬೆಳ್ಳಿ ಮಹೋತ್ಸವ ಆಚರಿಸಬೇಕಿತ್ತು. ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ಮುಂಬರುವ ದಿನಗಳಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಸಂಘದ ಕಾರ್ಯಚಟುವಟಿಕೆಗೆ ಸ್ವಂತ ಕಟ್ಟಡ ನಿರ್ವಿುಸಲು ನಿವೇಶನ ಖರೀದಿ ಮಾಡುವ ಕುರಿತು ಚರ್ಚೆ ನಡೆದಿದೆ. ಗ್ರಾಹಕರಿಗೆ ವೇತನ ಸಾಲ, ವೃತ್ತಿ ಸಾಲ, ದ್ವಿಚಕ್ರ ಸಾಲ, ಗೋದಾಮು ಸಾಲ, ನಾಲ್ಕು ಚಕ್ರದ ವಾಹನ ಸಾಲಗಳನ್ನು ನೀಡಲಾಗುತ್ತಿದೆ. ಗ್ರಾಹಕರನ್ನು ಸೆಳೆಯಲು ಇನ್ನಷ್ಟು ಗುಣಮಟ್ಟದ ಹಾಗೂ ಜನಪರ ಯೋಜನೆ ಜಾರಿಗೊಳಿಸಬೇಕಿದೆ ಎಂದರು.
ವೀರಮಾಹೇಶ್ವರ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಕೆ.ಸಿ. ಸೊಪ್ಪಿನಮಠ, ಸದಸ್ಯರಾದ ವಿ.ಎಂ. ಹನಗೋಡಿಮಠ, ಎಂ.ಎ.ಹಿರೇಮಠ, ಕೈಲಾಸನಾಥ ಆರಾಧ್ಯಮಠ, ವಿ.ಸಿ. ಸೊಪ್ಪಿನಮಠ, ಆರ್.ವಿ. ಬೆಳಕೇರಿಮಠ, ಎಸ್.ಎಸ್. ಬಾಣಾಪುರ, ವ್ಯವಸ್ಥಾಪಕ ವಿ.ಎಸ್. ಕೆಂಡದಮಠ, ಪ್ರೊ. ಸಿ.ಎಸ್. ಬೇತೂರಮಠ, ಗಂಗಾಧರ ಶಮಾ ಹಿರೇಮಠ ಇತರರಿದ್ದರು.