ಚಿಕ್ಕಬಾಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 15ರಂದು

9-BYD PATIL
Published on

ಬ್ಯಾಡಗಿ: ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಜ. 15ರಂದು ನಡೆಯಲಿರುವ ಮಹಾಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ವಿವಿಧ ಸಚಿವರು ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ತಾಲೂಕಿನ ಚಿಕ್ಕಬಾಸೂರು ಗ್ರಾಮದ ಎಪಿಎಂಸಿ ಮಾರುಕಟ್ಟೆಯ ಆವರಣದ ಬಳಿ ಮಹಾಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವದ ಸಿದ್ಧತೆ ಪರಿಶೀಲಿಸಿ ಮಂಗಳವಾರ ಅವರು ಮಾತನಾಡಿದರು. ಲಕ್ಷಾಂತರ ಭಕ್ತರು ಆಗಮಿಸುವ ಉತ್ಸವಕ್ಕೆ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು 50 ಲಕ್ಷ ರೂ. ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದು, ನಾನು ಹಾಗೂ ಬಸವರಾಜ ಶಿವಣ್ಣನವರ ಅನುದಾನ ಕೊಡಿಸುವ ಜವಾಬ್ದಾರಿ ವಹಿಸಿಕೊಂಡಿದ್ದೇವೆ ಎಂದರು.
ಸಿದ್ಧರಾಮೇಶ್ವರರ ಹೆಸರಲ್ಲಿ ಕೆರೆಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಜರುಗುವ ದೊಡ್ಡಮಟ್ಟದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಸೇರಿ, ನಾಲ್ಕೈದು ಲಕ್ಷ ಜನ ಆಗಮಿಸಲಿದ್ದು, ಎಲ್ಲ ವ್ಯವಸ್ಥೆ ಮಾಡುವ ಜವಾಬ್ದಾರಿ ನನ್ನ ಹಾಗೂ ಕ್ಷೇತ್ರದ ಜನರ ಮೇಲಿದೆ ಎಂದರು. ಪುಷ್ಪಗಿರಿಮಠದ ಸೋಮೇಶ್ವರ ಶ್ರೀ, ನಂದಿಗುಡಿಮಠದ ಸಿದ್ಧರಾಮೇಶ್ವರ ಶ್ರೀ, ಎಸ್.ಆರ್. ಪಾಟೀಲ, ಸೋಮಶೇಖರ ಕಣಗಿಲಬಾವಿ, ರಘುನಂದನ ಮೂರ್ತಿ, ಬೀರಪ್ಪ ಬಣಕಾರ, ದಾನಪ್ಪ ಚೂರಿ, ಜಗದೀಶ ಕಣಗಿಲಭಾವಿ, ವೀರಭದ್ರಪ್ಪ ಗೊಡಚಿ, ಮಹೇಶ ಪಾಟೀಲ, ಸುರೇಶ ಮೆಣಸಿನಹಾಳ, ರುದ್ರಪ್ಪ ಹೊಂಕಣದ, ರುದ್ರಗೌಡ್ರ ಕಾಡನಗೌಡ್ರ, ಲಿಂಗರಾಜ ಕುಮ್ಮೂರು, ಪ್ರಭುಲಿಂಗ ದೊಡ್ಡಮನಿ, ಪ್ರಭುಗೌಡ್ರ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net